ಶಿವಮೊಗ್ಗ: ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಸಮಿತಿ, ಕುವೆಂಪು ವಿವಿ ಕನ್ನಡ ಅಧ್ಯಾಪಕರ ವೇದಿಕೆ, ಕಡೆಕೊಪ್ಪಲು ಪ್ರತಿಷ್ಠಾನ, ಸಹ್ಯಾದ್ರಿ ವಿಜ್ಞಾನ ಕಾಲೇಜ್ ಕನ್ನಡ ವಿಭಾಗದ ಸಂಯುಕ್ತಾಶ್ರಯದಲ್ಲಿ ಮೇ 28 ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಡಾ. ರಾಧಾಕೃಷ್ಣ ಸಭಾಂಗಣದಲ್ಲಿ ಜಾನಪದ ದಿಕ್ಕು -ದೆಸೆ ಕುರಿತು ಒಂದು ದಿನದ ರಾಜ್ಯಮಟ್ಟದ ಅಧ್ಯಯನ ಶಿಬಿರ ಆಯೋಜಿಸಲಾಗಿದೆ ಎಂದು ಕಸಾಪ ಅಧ್ಯಕ್ಷ ಡಿ. ಮಂಜುನಾಥ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಾನಪದ ಅಧ್ಯಯನ ಹೇಗೆ ಮಾಡಬೇಕು? ಅದರ ರಕ್ಷಣೆ ಹೇಗೆ? ಜಾನಪದದ ದಿಕ್ಕು ದೆಸೆಗಳೇನು ಎಂಬ ವಿಷಯಗಳನ್ನು ಅಧ್ಯಯನದ ದೃಷ್ಟಿಯಿಂದ ಈ ಶಿಬಿರ ಆಯೋಜಿಸಲಾಗಿದೆ. ಮತ್ತು ಎರಡನೇ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಇದು ಪಠ್ಯವೂ ಆಗಿರುವುದರಿಂದ ಅನುಕೂಲವಾಗುತ್ತದೆ ಎಂದರು.
ಮೇ 28ರ ಬೆಳಗ್ಗೆ 10 ಗಂಟೆಗೆ ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಶಿಬಿರ ಉದ್ಘಾಟಿಸುವರು. ಹಂಪ ಕನ್ನಡ ವಿವಿ ವಿಶ್ರಾಂತ ಕುಲಪತಿ ಹಾಗೂ ಕರ್ನಾಟಕ ಜಾನಪದ ಪರಿಷತ್ ಕಾರ್ಯಾಧ್ಯಕ್ಷ ಡಾ.ಹಿ.ಚಿ. ಬೋರಲಿಂಗಯ್ಯ ಆಶಯ ನುಡಿಗಳನ್ನಾಡುವರು. ಡಿ. ಮಂಜುನಾಥ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಪ್ರೊ. ಎನ್. ರಾಜೇಶ್ವರಿ, ಕುವೆಂಪು ವಿವಿ ಕನ್ನಡ ಅಧ್ಯಾಪಕರ ವೇದಿಕೆ ಅಧ್ಯಕ್ಷೆ ಡಾ. ಸಬಿತಾ ಬನ್ನಾಡಿ ಉಪಸ್ಥಿತರಿರುವರು ಎಂದರು.
ನಂತರ ನಡೆಯುವ ಗೋಷ್ಠಿ -1ರಲ್ಲಿ ಮಂಗಳೂರು ವಿವಿಯ ಡಾ. ವಿಶ್ವನಾಥ್ ಬದಿಕಾನೆ ಅವರು ಜಾನಪದ ಸ್ವರೂಪ ಮತ್ತು ಮಹತ್ವ ಕುರಿತು, ಬೆಂಗಳೂರು ವಿವಿಯ ಡಾ. ಮೊಗಳ್ಳಿ ಗಣೇಶ್ ಜಾನಪದ ಹೊಸ ಆಯಾಮಗಳ ಕುರಿತು ಉಪನ್ಯಾಸ ನೀಡುವರು. ಡಾ.ಜಿ.ಆರ್. ಲವ ಉಪಸ್ಥಿತರಿರುವರು ಎಂದರು.
ಗೋಷ್ಠಿ -2ರಲ್ಲಿ ಬಳ್ಳಾರಿ ಡಾ. ಅರುಣ್ ಜೋಳದ ಕೂಡ್ಲಿಗಿ ಅವರು ಜಾನಪದ ಅಧ್ಯಯನದ ಹೊಸ ಸಾಧ್ಯತೆಗಳ ಕುರಿತು ಹಾಗೂ ಶಿವಮೊಗ್ಗದ ಡಾ.ಎಸ್.ಎಂ. ಮುತ್ತಯ್ಯ ಅವರು ಜಾನಪದದ ಅನ್ವಯಿಕತೆಯ ಸಾಧ್ಯತೆಗಳು ಕುರಿತು ಮಾತನಾಡುವರು. ಡಾ.ಜಿ.ಕೆ. ಪ್ರೇಮಾ ಉಪಸ್ಥಿತರಿರುವರು ಎಂದರು.
ನಂತರ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಶಿಬಿರಾರ್ಥಿಗಳ ಸಂವಾದವನ್ನು ಆಯೋಜಿಸಲಾಗಿದೆ. ಸುಮಾರು 150ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸುವರು. ಕಡೆಕೊಪ್ಪಲು ಪ್ರತಿಷ್ಠಾನ ಕೆ. ಲಕ್ಷ್ಮಿನಾರಾಯಣರಾವ್ ಸಮಾರೋಪ ಭಾಷಣ ಮಾಡುವರು. ಆನಂದಪುರದ ಜಿ. ನಾಗರಾಜ್ ತೋಂಬ್ರಿ ಜೋಗಿ ಪದ ಹಾಡುವರು. ನಂತರ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಗುವುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಕಸಾಪ ಅಧ್ಯಕ್ಷೆ ಮಹಾದೇವಿ, ಪ್ರಮುಖರಾದ ಟಿ. ಕೃಷ್ಣಪ್ಪ, ಸೋಮಿನಕಟ್ಟಿ ಇದ್ದರು.