ದಾವಣಗೆರೆ: ತಾಲೂಕಿನ ಓಬಜ್ಜಿಹಳ್ಳಿ ಬಳಿ ನಡೆದ ಪ್ಲಂಬರ್ ಕೊಲೆ ಪ್ರಕರಣವನ್ನು ಎಸ್ಪಿ ಉಮಾ ಪ್ರಶಾಂತ್ ನೇತೃತ್ವದ ತಂಡ 48 ಗಂಟೆಗಳಲ್ಲಿ ಭೇದಿಸಿದೆ.ಎಸ್.ಪಿ.ಎಸ್.ನಗರದ ನಿವಾಸಿ ಪಿ.ಮನೋಹರ್ (25) ಬಂಧಿತ. ಅದೇ ಬಡಾವಣೆಯ ಸುದೀಪ (20) ಕೊಲೆಯಾದ ವ್ಯಕ್ತಿ.
‘ಇವರಿಬ್ಬರು ಮಾವ-ಅಳಿಯ. ಮನೋಹರ್ ಅವರಿಂದ ಹಣ ಪಡೆದ ಸುದೀಪ, ಹಣ ಕೊಡದೇ ಸತಾಯಿಸುತ್ತಿದ್ದ ಕಾರಣ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ತನಿಖೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ಎಎಸ್ಪಿಗಳಾದ ವಿಜಯ್ ಕುಮಾರ್ ಸಂತೋಷ್, ಮಂಜುನಾಥ, ದಾವಣಗೆರೆ ಗ್ರಾಮಾಂತರ ಉಪ-ವಿಭಾಗದ ಡಿವೈಎಸ್ಪಿ ಪ್ರಶಾಂತ್ ಸಿದ್ದನಗೌಡರ್ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆಯ ಪಿಐ ಕಿರಣ್ ಕುಮಾರ್ ನೇತೃತ್ವದಲ್ಲಿ ಠಾಣಾ ಪಿಎಎಸ್ಐ ಜೋವಿತ್ ರಾಜ್, ಎಎಸ್ಐ ನಾರಪ್ಪ, ಸಿಬ್ಬಂದಿ ಜಗದೀಶ್, ದೇವೇಂದ್ರನಾಯ್ಕ, ನಾಗಭೂಷಣ್, ಮಂಜುನಾಥ, ಅಣ್ಣಯ್ಯ, ಮಹೇಶ್, ವಿಶ್ವನಾಥ, ಮಹಮ್ಮದ್ ಯುಸುಫ್ ಅತ್ತರ್, ವೀರೇಶ್ ಅವರನ್ನೊಳಗೊಂಡ ತಂಡವು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಮೇ 15ರಂದು ರಾತ್ರಿ ಮನೆಯಿಂದ ಬೈಕ್ ತೆಗೆದುಕೊಂಡು ಹೋದ ಪತಿಯನ್ನು ಒಬಜ್ಜಿಹಳ್ಳಿ ಹತ್ತಿರ ರಸ್ತೆಯ ಬಳಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಸುದೀಪ ಪತ್ನಿ ಭೂಮಿಕಾ ಮೇ 16ರಂದು ನೀಡಿದ್ದ ದೂರು ಆಧರಿಸಿ ತನಿಖೆ ಕೈಗೊಳ್ಳಲಾಗಿತ್ತು.ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.