ಸಾಣೇಹಳ್ಳಿ: ವಿಶ್ವಗುರು ಮತ್ತು ಸಾಂಸ್ಕೃತಿಕ ನಾಯಕ ಎಂದು ಒಬ್ಬ ವ್ಯಕ್ತಿಯನ್ನು ಕರೆಯುವುದು ಬಸವಣ್ಣನವರನ್ನು ಮಾತ್ರ. ಬಸವಣ್ಣ ಸನ್ಯಾಸಿ ಅಲ್ಲ. ಆದರೂ ಬಸವಣ್ಣನವರನ್ನು ಗೃಹಸ್ಥ ಜಗದ್ಗುರು ಬಸವಣ್ಣ ಎಂದು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರು ಹೇಳುತ್ತಿದ್ದರು ಎಂದು ಪಂಡಿತಾರಾಧ್ಯ ಶ್ರೀಗಳು ಹೇಳಿದರು.
ಇಲ್ಲಿನ ಗುರುಬಸವ ಮಹಾಮನೆಯಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಗೃಹಸ್ಥ ಜೀವನ ಸನ್ಯಾಸಿ ಜೀವನಕ್ಕಿಂತ ಕಷ್ಟ. ಬಸವಣ್ಣ ಈ ಜಗತ್ತಿಗೆ ಬೆಳಕನ್ನು ಕೊಡುವ ಕಾರ್ಯ ಮಾಡಿದರು. ಬಸವಣ್ಣನವರು ಅಹಂಕಾರ ತೊರೆದ ಪ್ರತಿಯೊಬ್ಬರನ್ನು ಅಪ್ಪಿಕೊಂಡರು. ತಳಸಮುದಾಯದ ಜನರನ್ನು, ಅಸ್ಪೃಶ್ಯರನ್ನು ಹತ್ತಿರಕ್ಕೆ ಕರೆದುಕೊಂಡು ಮೇಲೆತ್ತಿದರು. ಇವರನ್ನು ಅನುಭವ ಮಂಟಪಕ್ಕೆ ಕರೆಸಿ ಹಲವು ಆಲೋಚನೆಗಳನ್ನು ಕೊಟ್ಟು ವಚನಗಳನ್ನು ಬರೆಸಿದರು.
ಬಸವಣ್ಣನವರು ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದರು.ಸ್ತ್ರೀಯರಿಗೆ ಸ್ವಾತಂತ್ರ್ಯವನ್ನು ಕೊಡಲು ಮೊದಲ ಪ್ರಯತ್ನವನ್ನು ಬಸವಣ್ಣನವರು ಮಾಡಿದರು. ಬಿಜ್ಜಳನ ಆಸ್ಥಾನದಲ್ಲಿ ಕರಣಿಕನಾಗಿ ಕೆಲಸ ಮಾಡಿದರು. ನಂತರ ಅರ್ಥ ಮಂತ್ರಿಯಾದರು. ಅಲ್ಲಿ ಸ್ವಾರ್ಥಕ್ಕಾಗಿ ಅಧಿಕಾರ ನಡೆಸಲಿಲ್ಲ. ಸಮಾಜೋದ್ದಾರಕ ಕೆಲಸ ಮಾಡಿದರು.ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎನ್ನುವ ವಿನೀತ ಭಾವನೆಯನ್ನು ಹೊಂದಿದವರು.
ತಮ್ಮ ಹುಟ್ಟನ್ನು ಅಪವರ್ಗೀಕರಣ ಮಾಡಿಕೊಂಡು ಸಮಾನತೆಯನ್ನು ಸಾರಿದರು. ಹುಟ್ಟಿನಿಂದ ಒಬ್ಬ ವ್ಯಕ್ತಿಯ ಯೋಗ್ಯತೆಯನ್ನು ಅಳೆಯದೇ ಸಾಧನೆಯಿಂದ ಅಳೆಯಬೇಕು. ಸಾಧನೆಯಿಂದ ಸಾಧಕ ಏನ್ಬೇಕಾದರೂ ಸಾಧನೆಯನ್ನು ಮಾಡಬಹುದು. ಬಸವ ಪ್ರಜ್ಞ ನಮ್ಮೊಳಗಡೆ ಇರಬೇಕು. ಬಸವಣ್ಣ ಪೂಜೆಗೆ ಸೀಮಿತವಾಗದೇ ಅವರ ತತ್ವ ಸಿದ್ಧಾಂತಗಳು ಆಚರಣೆಗೆ ತಂದಾಗ ಮಾತ್ರ ಬಸವ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದರು.ಬಸವಣ್ಣನವರ ಬಗ್ಗೆ ವೀಣಾ ಮಾತನಾಡಿ ಸಮಾಜವನ್ನು ಅಭ್ಯುದಯಕ್ಕಾಗಿ ಅನುಭವ ಮಂಟಪ ಸ್ಥಾಪಿಸಿದರು.
ಇದರ ಅಧ್ಯಕ್ಷರನ್ನಾಗಿ ಅಲ್ಲಮಪ್ರಭುಗಳನ್ನು ನೇಮಿಸಿದರು. ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿದರು.ಅನುಭವ ಮಂಟಪದಲ್ಲಿ ಸ್ತ್ರೀಯರಿಗೆ ಅವಕಾಶ ಮತ್ತು ಗೌರವವನ್ನು ಕೊಟ್ಟರು. ಬಸವಣ್ಣನವರು ಇಷ್ಟಲಿಂಗದ ಪರಿಕಲ್ಪನೆಯನ್ನು ಜಾರಿಗೆ ತಂದರು. ಸಮಾಜವಾದ ಮತ್ತು ಸಮತಾವಾದ ತತ್ವಗಳನ್ನು ಜಾರಿಗೆ ತಂದರು. ಅಂತರ್ ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಿದರು. ವಚನಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದರು.ಅಕ್ಕನ ಬಳಗದವರು ವಚನಗಳನ್ನು ಹಾಡಿದರು. ಸಾಣೇಹಳ್ಳಿಯ ಶಾಲಾ ಮಕ್ಕಳು ವಚನ ನೃತ್ಯ ಪ್ರದರ್ಶಿಸಿದರು. ಶಾಲಾ ಮಕ್ಕಳು ವಚನಗಳನ್ನು ಹಾಡಿದರು. ಶಿಕ್ಷಕಿ ಸುಧಾ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಪ್ರಾಂಶುಪಾಲ ನಟರಾಜ್ ಹೊನ್ನವಳ್ಳಿ ಸ್ಥಳೀಯರಾದ ಕೃಷ್ಣಪ್ಪ, ಹೊನ್ನೇಶಪ್ಪ, ಶಿವಕುಮಾರ್ ಮತ್ತಿತರಿದ್ದರು.