ಚನ್ನಗಿರಿ : ಸೊಗಸಾಗಿ ಬೆಳೆದ ಅಡಕೆ, ಕಬ್ಬಿನ ಗದ್ದೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು 5 ಎಕರೆ ಕೂಳೆ ಕಬ್ಬು ಹಾಗೂ 400ಕ್ಕೂ ಹೆಚ್ಚು ಅಡಕೆ ಮರಗಳು ಬೆಂಕಿಗಾಹುತಿಯಾಗಿರುವ ಘಟನೆ ದಾವಣಗೆರೆ ತಾಲೂಕಿನ ನಾಗರಸನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶ್ರೀ ವೀರಭದ್ರೇಶ್ವರಸ್ವಾಮಿ ದೇವಸ್ಥಾನಕ್ಕೆ ಸೇರಿದ್ದ 5 ಎಕರೆ ಕಬ್ಬಿನ ಬೆಳೆ ಮತ್ತು ಮಿಟ್ಲಕಟ್ಟೆ ಚಂದ್ರಪ್ಪ ಎಂಬುವರಿಗೆ ಸೇರಿದ ಮೂರುವರೆ ಎಕರೆಯಲ್ಲಿನ 9 ವರ್ಷದ ಫಲ ಕೊಡುತ್ತಿದ್ದ ಅಡಕೆ ಮರಗಳು ಸುಟ್ಟಿವೆ.

ಗುರುವಾರ ಮಧ್ಯಾಹ್ನ ಕಬ್ಬಿನ ಗದ್ದೆಗೆ ಬೆಂಕಿ ಹತ್ತಿ ಧಗ ಧಗನೆ ಉರಿಯುತ್ತಿರುವುದನ್ನು ಕಂಡು, ಗ್ರಾಮಸ್ಥರು ನಂದಿಸಲು ಪ್ರಯತ್ನಪಟ್ಟರು ಆಗಲಿಲ್ಲ. ಅಷ್ಟೊತ್ತಿಗಾಗಲೇ ಕಬ್ಬು ಬೆಳೆ, 400 ಅಡಕೆ ಗಿಡಗಳು ಸುಟ್ಟು ನಾಶವಾಗಿತ್ತು. ನಂತರ ದಾವಣಗೆರೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದರು. ಸುಮಾರು 250 ಟನ್ ಕಬ್ಬು ಬರುವ ನಿರೀಕ್ಷೆ ಇತ್ತು, ಮುಂಬರುವ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಕಟಾವು ಮಾಡಬೇಕಿತ್ತು. ಹಾಗೇ ಅಡಕೆ ಮರಗಳು ಸುಟ್ಟು ಅಂದಾಜು 7 ಲಕ್ಷ ರೂ. ನಷ್ಟವಾಗಿದೆ. ಒಟ್ಟಾರೆ ಬೆಂಕಿಯ ಅವಘಡದಿಂದ ಸುಮಾರು 18 ಲಕ್ಷ ರೂ. ಗೂ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಶ್ರೀ ವೀರಭದ್ರೇಶ್ವರಸ್ವಾಮಿ ದೇವರ ಜಮೀನನ್ನು ರೈತ ರುದ್ರೇಶ್ ಎಂಬುವರು ಉಳುಮೆ ಮಾಡುತ್ತಿದ್ದರು. ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು’ ಎಂದು ರೈತರಾದ ಮಿಟ್ಲಕಟ್ಟೆ ಚಂದ್ರಪ್ಪ, ರುದ್ರೇಶ್ ಸರಕಾರಕ್ಕೆ ಒತ್ತಾಯಿಸಿದ್ದಾರೆ. ವಿಷಯ ತಿಳಿದ ಹದಡಿ ಪಿಎಸ್‌ಐ ಅಕ್ಟರ್ ಮುಲ್ಲಾ, ಕುಕ್ಕವಾಡ ವೃತ್ತದ ವಿಎ ಮಹಾಂತೇಶ್ ಸ್ಥಳಕ್ಕೆ ಭೇಟಿ ನೀಡಿ ಮಹಜರ್ ನಡೆಸಿದ್ದಾರೆ. ಹದಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share.
Leave A Reply

Exit mobile version