ದಾವಣಗೆರೆ. ಜೂ.೫; ಕನ್ನಡ ನಾಡಿಗೆ ಕನ್ನಡ ಸಾಹಿತ್ಯ ಪರಿಷತ್ತು, ಕೆಆರ್‌ಎಸ್ ಅಣೆಕಟ್ಟು, ವಾಣಿ ವಿಲಾಸ ಸಾಗರ, ಶಿವನಸಮುದ್ರ ಜಲ ವಿದ್ಯುತ್ ಯೋಜನೆ, ಮೈಸೂರು ಬ್ಯಾಂಕ್, ಮೈಸೂರು ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ, ಮೈಸೂರು ಮೆಡಿಕಲ್ ಕಾಲೇಜು,  ನಿಮ್ಹಾನ್ಸ್ ಆಸ್ಪತ್ರೆ, ಮಿಂಟೋ ಆಸ್ಪತ್ರೆ ಮೊದಲಾದ ಹಲವಾರು ಶಾಶ್ವತ ಯೋಜನೆಗಳನ್ನು ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಕನ್ನಡಿಗರಿಗೆ ಪ್ರಾತಃಸ್ಮರಣೀಯರು ಎಂದು ಕೆ.ರಾಘವೇಂದ್ರ ನಾಯರಿ ಅಭಿಪ್ರಾಯಪಟ್ಟರು.

ಅವರು ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ನಾಲ್ವಡಿ  ಕೃಷ್ಣರಾಜ ಒಡೆಯರ್ ಅವರ 140 ನೇ ಜಯಂತ್ಯೋತ್ಸವ ಸಮಾರಂಭದಲ್ಲಿ ಕೃಷ್ಣರಾಜ ಒಡೆಯರ್ ಅವರ ಕನ್ನಡ ನಾಡಿಗೆ ನೀಡಿದ ಕೊಡುಗೆಗಳ ಬಗ್ಗೆ ಉಪನ್ಯಾಸ ನೀಡಿ ಮಾತಾಡುತ್ತಿದ್ದರು. ಒಡೆಯರ್ ಆಡಳಿತಾವಧಿಯಲ್ಲಿ ಇಡೀ ಭರತ ಖಂಡದಲ್ಲಿ ಯಾವ ಸಂಸ್ಥಾನವೂ ಕಾಣದ ಅಭಿವೃದ್ಧಿಯನ್ನು ಮೈಸೂರು ರಾಜ್ಯವು ಕಂಡುದರಿಂದ ದೇಶದಾದ್ಯಂತ ಪ್ರಸಿದ್ಧಿಯನ್ನು ಪಡೆದಿತ್ತು. ಶಿಕ್ಷಣ, ಆರೋಗ್ಯ, ನೀರಾವರಿ, ಕೃಷಿ, ಮೂಲಸೌಕರ್ಯ, ಕೈಗಾರಿಕೆ, ಆಡಳಿತ ಸುಧಾರಣೆ, ಕಲೆ, ಸಾಹಿತ್ಯ, ಸಂಸ್ಕೃತಿ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಯನ್ನು ಒಡೆಯರ್ ಮಾಡಿದ್ದರು ಎಂದು ಹೇಳಿದರು‌.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದರ್ಶಿತ್ವ ಚಿಂತನೆಯ ಫಲವಾಗಿ 1915 ರಲ್ಲಿ  ಸ್ಥಾಪನೆಗೊಂಡ ಕನ್ನಡ ಸಾಹಿತ್ಯ ಪರಿಷತ್ತು ಇಂದು 109 ವರ್ಷಗಳ ಭವ್ಯವಾದ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿದೆ. ಕನ್ನಡ ನಾಡು ನುಡಿಯ ಉನ್ನತಿಗಾಗಿ ವರ್ಷಪೂರ್ತಿ ಕೆಲಸ ಮಾಡುವ ಯಾವುದಾದರೂ ಸಂಸ್ಥೆ ಕನ್ನಡ ನಾಡಿನಲ್ಲಿ ಇದೆ ಅಂತಾದರೆ ಅದು ಕನ್ನಡ ಸಾಹಿತ್ಯ ಪರಿಷತ್ತು ಮಾತ್ರ. ಕನ್ನಡ ನಾಡನ್ನು ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಸಂಪದ್ಭರಿತವಾಗಿ ಬೆಳೆಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರ ಬಹು ದೊಡ್ಡದು. ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.  ಇದಲ್ಲದೇ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಸಾಮಾಜಿಕ ಕಾನೂನುಗಳ ಹರಿಕಾರರಾಗಿದ್ದರು.   ದೇವದಾಸಿ ಪದ್ಧತಿ, ಬಸವಿ ಪದ್ಧತಿ, ವೇಶ್ಯಾ ವೃತ್ತಿ, ಗೆಜ್ಜೆ ಪೂಜೆ ಪದ್ಧತಿಯನ್ನು ನಿರ್ಮೂಲನೆ ಮಾಡಲು ಕಾನೂನನ್ನು ರೂಪಿಸಿದರು. ಅನೇಕ ಹೊಸ ರೈಲು ಮಾರ್ಗಗಳನ್ನು ಆರಂಭಿಸಿದರು. ಮಹಿಳಾ ಮೀಸಲಾತಿ, ಉಚಿತ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತಂದರು. ಹೀಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನ ಸ್ನೇಹಿ ಆಡಳಿತವನ್ನು ನಡೆಸಿದ್ದರಿಂದ ಅವರ ಆಡಳಿತಾವಧಿಯು ಸುವರ್ಣ ಯುಗವೆಂದು ಕರೆಯಬಹುದು ಎಂದು ವಾಮದೇವಪ್ಪರವರು ಬಣ್ಣಿಸಿದರು.

ಪರಿಷತ್ತಿ‌ನ ಗೌರವ ಕಾರ್ಯದರ್ಶಿ ಬಿ.ದಿಳ್ಯಪ್ಪ ಅವರು ಸ್ವಾಗತಿಸಿದರು, ರೇವಣಸಿದ್ದಪ್ಪ ಅಂಗಡಿಯವರು ವಂದನಾರ್ಪಣೆ ಮಾಡಿದರು ಹಾಗೂ ರುದ್ರಾಕ್ಷಿ ಬಾಯಿ ಪ್ರಾರ್ಥಿಸಿದರು.  ಸಮಾರಂಭದಲ್ಲಿ ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಹಾಗೂ ಕಾರ್ಮಿಕ ಮುಖಂಡ ಅವರಗೆರೆ ಹೆಚ್‌.ಜಿ.ಉಮೇಶ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಕ್ಕರಗೊಳ್ಳ ಪರಮೇಶ್ವರಪ್ಪ, ಅವರಗೆರೆ ರುದ್ರಮುನಿ, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಜಗದೀಶ್ ಕೂಲಂಬಿ, ಜಿಗಳಿ ಪ್ರಕಾಶ್, ಕೆ.ಎಸ್.ವೀರೇಶ್‌ಪ್ರಸಾದ್,  ಸತ್ಯಭಾಮಾ ಮಂಜುನಾಥ್, ತಾಲೂಕು ಕಸಾಪ ಪದಾಧಿಕಾರಿಗಳಾದ ಬೇತೂರು ಷಡಾಕ್ಷರಪ್ಪ, ಕುರ್ಕಿ ಸಿದ್ದೇಶ್ ಹಾಗೂ ನಾಗೇಶ್ವರಿ ನಾಯರಿ, ಹೆಚ್.ಚಿದಾನಂದ, ಎ.ಜಿ.ವೀರೇಶ್, ಶ್ರೀನಿವಾಸ ಮೊದಲಾದವರು ಉಪಸ್ಥಿತರಿದ್ದರು

Share.
Leave A Reply

Exit mobile version