ಶಿವಮೊಗ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ 2023-24ನೇ ಸಾಲಿನಲ್ಲಿ 10.58 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, 2025ರ ಮಾರ್ಚ್ ಅಂತ್ಯಕ್ಕೆ 25 ಕೋಟಿ ರೂ. ನಿವ್ವಳ ಲಾಭ ಗಳಿಸುವ ಗುರಿ ಹೊಂದಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಡಾ.ಆರ್.ಎಂ. ಮಂಜುನಾಥಗೌಡ ತಿಳಿಸಿದರು.
ನಗರದಲ್ಲಿ ನಡೆದ ಡಿಸಿಸಿ ಬ್ಯಾಂಕ್ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, 2023-24ನೇ ಸಾಲಿನಲ್ಲಿ ಒಟ್ಟು 17.99 ಕೋಟಿ ರೂ. ಲಾಭ ಗಳಿಸಿದೆ. ಷೇರು ಬಂಡವಾಳ 138.98 ಕೋಟಿ ರೂ. ಹಾಗೂ ನಿಧಿಗಳು 67.46 ಕೋಟಿ ರೂ. ಹಾಗೂ ದುಡಿಯುವ ಬಂಡವಾಳ 2332.29 ಕೋಟಿ ರೂ. ಇದ್ದು, 1462.78 ಕೋಟಿ ರೂ. ಠೇವಣಿ ಸಂಗ್ರಹಣೆಯಾಗಿದೆ ಎಂದರು.
2023-24ನೇ ಸಾಲಿನಲ್ಲಿ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಕೃಷಿ ಬೆಳೆ ಸಾಲವನ್ನು 104250 ರೈತರಿಗೆ 1010.20 ಕೋಟಿ ರೂ. ಸಾಲ ಹಂಚಿಕೆ ಮಾಡಲಾಗಿದೆ. ಈ ಪೈಕಿ 3581 ಹೊಸ ರೈತರಿಗೆ 43.04 ಕೋಟಿ ರೂ. ಹಾಗೂ ಹೆಚ್ಚುವರಿ ಸಾಲ 6683 ರೈತರಿಗೆ 33.68 ಕೋಟಿ ರೂ. ಸಾಲ ವಿತರಣೆ ಮಾಡಿದ್ದು, ಶೇ. 108.96ರಷ್ಟು ಪ್ರಗತಿಯಾಗಿದೆ. ಆ. 24ರ ಅಂತ್ಯದವರೆಗೆ ಒಟ್ಟು 37672 ರೈತರಿಗೆ ಒಟ್ಟು 417.85 ಕೋಟಿ ರೂ. ಸಾಲ ಹಂಚಿಕೆ ಮಾಡಲಾಗಿದ್ದು, ಸಾಲ ವಸೂಲಾತಿ ಶೇ. 99.07ರಷ್ಟು ಇದೆ ಎಂದರು.
1696 ಸ್ವಸಹಾಯ ಸಂಘಗಳಿಗೆ 2023-24ನೇ ಸಾಲಿನಲ್ಲಿ 73.33 ಕೋಟಿ ರೂ. ಸಾಲ ವಿತರಿಸಿದ್ದು, ಶೇ. 100ರಷ್ಟು ಪ್ರಗತಿಯಲ್ಲಿದೆ. 2024ರ ಆಗಸ್ಟ್ ಅಂತ್ಯದವರೆಗೆ ಒಟ್ಟು 680 ಸ್ವಸಹಾಯ ಸಂಘಗಳಿಗೆ 29.53 ಕೋಟಿ ರೂ. ಸಾಲ ಹಂಚಿಕೆ ಮಾಡಲಾಗಿದ್ದು, ಸಾಲ ವಸೂಲಾತಿಯಲ್ಲಿ ಶೇ. 99ರಷ್ಟು ಇದೆ ಎಂದರು.
ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯರಿಗೆ ಡಿಸಿಸಿ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ತೆರೆಯಲು ಅವಕಾಶ ನೀಡಿದ್ದು, ಬ್ಯಾಂಕ್ ನಿಂದ ಈಗಾಗಲೇ ಹಲವು ಸೌಲಭ್ಯಗಳನ್ನು ಸದಸ್ಯರಿಗೆ ಒದಗಿಸಲಾಗುತ್ತಿದೆ. ರಾಜ್ಯ ಸರ್ಕಾರದ ಯೋಜನೆಯಂತೆ ಶೂನ್ಯ ಬಡ್ಡಿದರದಲ್ಲಿ ಪಶುಸಂಗೋಪನೆ ಉದ್ದೇಶಕ್ಕೆ 3008 ಸದಸ್ಯರಿಗೆ 6.53 ಕೋಟಿ ರೂ. ಸಾಲ ನೀಡಲಾಗಿದೆ. ಬ್ಯಾಂಕ್ ಶಾಖೆಗಳ ಮೂಲಕ 15231 ವ್ಯಕ್ತಿಗಳಿಗೆ 519.16 ಕೋಟಿ ರೂ. ಕೃಷಿಯೇತರ ಸಾಲ ವಿತರಿಸಲಾಗಿದೆ ಎಂದರು.
ರೈತರ ಮತ್ತು ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಯೋಜನೆಯ ರೀತ್ಯ ಮೊಬೈಲ್ ವಾಹನದ ಸೌಲಭ್ಯ ಜಾರಿಗೆ ತರಲಾಗಿದ್ದು, ಮೊಬೈಲ್ ವ್ಯಾನ್ನಲ್ಲಿ ಎಟಿಎಂ ಅಳವಡಿಸಿದ್ದು ಈಗಾಗಲೇ ಮೊಬೈಲ್ ವ್ಯಾನ್ ಜಿಲ್ಲೆಯ ಎಲ್ಲಾ ಹಳ್ಳಿ ಹಳ್ಳಿಗಳಲ್ಲೂ ಸಂಚರಿಸುತ್ತಿದೆ. ಹಾಲು ಉತ್ಪಾದಕ ಸಂಘದ ಸದಸ್ಯರು ಮತ್ತು ಗ್ರಾಹಕರು ನಮ್ಮ ಬ್ಯಾಂಕಿನ ಎಟಿಎಂ ಕಾರ್ಡ್ ಮುಖಾಂತರ ಹಣ ಡ್ರಾ ಮಾಡಬಹುದಾಗಿದೆ ಎಂದರು.
ಬ್ಯಾಂಕ್ ಮೊಬೈಲ್ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದು, ಈ ಆ್ಯಪ್ ಮೂಲಕ ಬ್ಯಾಂಕ್ ನ ಗ್ರಾಹಕರು ಖಾತೆಗಳ ಬ್ಯಾಲೆನ್ಸ್, ಮಿನಿ ಪಾಸ್ ಬುಕ್, ಬ್ಯಾಂಕ್ ಸಾಮಾನ್ಯ ಮಾಹಿತಿಗಳು, ಪಾಸಿಟಿವ್ ಪೇ ಸಿಸ್ಟಂನಡಿಯಲ್ಲಿ ಗ್ರಾಹಕರು ನೀಡಿದ ಚೆಕ್ ವಿವರಗಳನ್ನು ಪಡೆಯಬಹುದಾಗಿದೆ ಎಂದರು.
2024-25ನೇ ಸಾಲಿನಲ್ಲಿ ಶೂನ್ಯ ಬಡ್ಡಿದರದಲ್ಲಿ ಅಲ್ಪಾವಧಿ ಕೃಷಿ ಬೆಳೆ ಸಾಲವನ್ನು 1.20 ಲಕ್ಷ ರೈತರಿಗೆ 1200 ಕೋಟಿ ರೂ. ಹಾಗೂ ಶೇ. 3ರ ಬಡ್ಡಿದರದಲ್ಲಿ 1500 ರೈತರಿಗೆ 80 ಕೋಟಿ ರೂ. ಮಧ್ಯಮಾವಧಿ ಕೃಷಿ ಸಾಲ ನೀಡುವ ಹಾಗೂ 2100 ಸ್ವಸಹಾಯ ಸಂಘಗಳಿಗೆ 100 ಕೋಟಿ ರೂ. ಸಾಲ ವಿತರಿಸುವ ಮತ್ತು 1600 ಕೋಟಿ ರೂ. ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು.
ಜಿಲ್ಲೆಯ ಗ್ರಾಹಕರ ಅನುಕೂಲಕ್ಕಾಗಿ ಭದ್ರಾವತಿ ತಾಲೂಕಿನ ಕಲ್ಲಿಹಾಳ್, ಸೊರಬ ತಾಲೂಕಿನ ಜಡೆ ಹಾಗೂ ಶಿಕಾರಿಪುರ ತಾಲೂಕಿನ ಸುಣ್ಣದಕೊಪ್ಪದಲ್ಲಿ ನೂತನ ಶಾಖೆಯನ್ನು ದಸರಾ ಹಬ್ಬದೊಳಗಾಗಿ ಆರಂಭಿಸಲಾಗುವುದು. ಹಾಗೂ ಜಿಲ್ಲೆಯಲ್ಲಿ 19 ನೂತನ ಶಾಖೆ ತೆರೆಯುವ ಬಗ್ಗೆ ಪ್ರಸ್ತಾವನೆಯನ್ನು ಆರ್.ಬಿ.ಐ.ಗೆ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ, ನಿರ್ದೇಶಕರಾದ ಶಿವಶಂಕರ್ , ಹನುಮಂತು, ಮಹಾಲಿಂಗ ಶಾಸ್ತ್ರಿ, ದುಗ್ಗಪ್ಪಗೌಡ, ಸುಧೀರ್, ಚಂದ್ರಶೇಖರಗೌಡ, ಪರಮೇಶ್, ದಶರಥಗಿರಿ, ಸಹಕಾರ ಸಂಘಗಳ ಉಪನಿಬಂಧಕ ನಾಗಭೂಷಣ್ ಕಲ್ಮನೆ ಉಪಸ್ಥಿತರಿದ್ದರು..
……
ಕೃಷಿಕರನ್ನೇ ಮರೆತಿರುವುದು ಉಪನ್ಯಾಸ
ಕೃಷಿಗೆ ಪ್ರೋತ್ಸಾಹ ಕೊಡುವ ದೃಷ್ಟಿಯಿಂದ ಅಸ್ತಿತ್ವಕ್ಕೆ ಬಂದ ನಬಾರ್ಡ್ ಈಗ ಕೃಷಿಕರನ್ನೇ ಮರೆತಿರುವುದು ವಿಪರ್ಯಾಸವಾಗಿದೆ. ಶೇ. 8.5ರ ದರದಲ್ಲಿ ಎಷ್ಟು ಬೇಕಾದರೂ ಸಾಲ ಕೊಡುವ ನಬಾರ್ಡ್ ರೈತರಿಗಾಗಿ 4.5ರ ಬಡ್ಡಿ ದರದಲ್ಲಿ ಸಾಲ ಕೊಡಲು ಹಿಂದೆ ಮುಂದೆ ನೋಡುತ್ತಿದೆ. ನಬಾರ್ಡ್ನಿಂzದ ಪನರ್ ಧನ ಮಂಜೂರಾಗುವುದೇ ಇಲ್ಲ. ಹಾಗಾಗಿ ಅದು ರೈತ ವಿರೋಧಿಯಾಗಿದೆ ಎಂದು ಆರ್.ಎಂ. ಮಂಜುನಾಥಗೌಡ ಆರೋಪಿಸಿದರು.ಹಾಗೆಯೇ ಸಹಕಾರ ಸಂಘಗಳಲ್ಲಿ ನಿಶ್ಚಿತ ಠೇವಣಿ ಇಡುವ ವೈಯಕ್ತಿಕ ಅಥವಾ ಸಂಘ ಸಂಸ್ಥೆಗಳ ಠೇವಣಿ ಮೊತ್ತಕ್ಕೆ ಕೇಂದ್ರ ಸರ್ಕಾರದ ನಿಯಮಾನುಸಾರ ಜಿ.ಎಸ್.ಟಿ. ತೆರಿಗೆ ಅನ್ವಯಿಸುವುದು ಕಷ್ಟಕರವಾಗಿದೆ. ಅಲ್ಲದೇ, ಜಿ.ಎಸ್.ಟಿ. ಸಹಕಾರಿ ತತ್ವಕ್ಕೆ ಇದು ವಿರೋಧಿಯಾಗಿದೆ. ಇದರಿಂದ ಬ್ಯಾಂಕ್ ಗಳ ಪ್ರಗತಿಗೂ ಧಕ್ಕೆಯಾಗಲಿದೆ. ಸಹಕಾರ ಸಂಘಗಳ ವ್ಯವಹಾರಗಳಿಗೆ ಜಿ.ಎಸ್.ಟಿ. ಹಾಕಬಾರದು ಎಂದು ಕೇಂದ್ರ ಸರ್ಕಾರಕ್ಕೆ ಮಂಜುನಾಥ್ ಗೌಡ ಆಗ್ರಹಿಸಿದ್ದಾರೆ.