
ದಾವಣಗೆರೆ: ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ಜನಾಕ್ರೋಶ ರ್ಯಾಲಿ ಎರಡನೇ ಹಂತದಲ್ಲಿ ಆರಂಬವಾಗಿದೆ. ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ತವರು ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಗುರುವಾರ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಹಾಗಾದ್ರೆ ಯತ್ನಾಳಗೆ ವಿಜಯೇಂದ್ರ ಹೇಳಿದ್ದೇನು? ಯತ್ನಾಳ ಕ್ಷೇತ್ರದಲ್ಲಿ ಬಿಜೆಪಿ ನಾಯಕರ ಪ್ರತಿಕ್ರಿಯೆ ಏನು? ಈ ಕುರಿತು ಸ್ಟೋರಿ ಇಲ್ಲಿದೆ.
ಬಿಜೆಪಿ ಉಚ್ಛಾಟಿತ ಶಾಸಕ, ಹಿಂದುತ್ವದ ಪ್ರಖರ ನಾಯಕ ಬಸನಗೌಡ ಪಾಟೀಲ್ ಯತ್ನಾಳ ತವರೂರಿನಲ್ಲಿ ಬಿಜೆಪಿ ಎರಡನೇ ಹಂತದಲ್ಲಿ ಜನಾಕ್ರೋಶ ರ್ಯಾಲಿ ನಡೆಸಿತು. ವಿಜಯೇಂದ್ರ ಅಕ್ಷರಶಃ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಭರವಸೆಯ ಮೇರೆಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಹಣವನ್ನು ಬೇರೆಡೆಗೆ ತಿರುಗಿಸಿದ್ದು, ಅಗತ್ಯ ವಸ್ತುಗಳ ಬೆಲೆಗಳನ್ನು ಹೆಚ್ಚಿಸುವತ್ತ ಗಮನಹರಿಸುತ್ತಿದೆ ಎಂದು ಕಿಡಿಕಾರಿದರು.
ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡದೆ ಬೆಂಗಳೂರಿನಲ್ಲಿಯೇ ತಲೆಮೆರೆಸಿಕೊಂಡಿದ್ದಾರೆ.


ರಾಜ್ಯದ ಜನರ ಭಾವನೆ ಬೇರೆಕಡೆ ತಿರುಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಜನಗಣತಿ ಎನ್ನುವ ಸುಳ್ಳು ವರದಿ ಹೊರಗೆ ತಂದಿದ್ದಾರೆ. ಇದರಿಂದ ಜಾತಿ ಜಾತಿಗಳ ನಡುವೆ ಜಗಳ ಉಂಟಾಗುವ ವಾತಾವರಣ ನಿರ್ಮಾಣವಾಗಿದೆ.
ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಬಡವರು, ದಲಿತರು ಮತ್ತು
ರೈತರಿಗೆ ನೀಡಿದ ಕೊಡುಗೆ ಏನು? ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚಾಗಿದ್ದು, ಗೋಹತ್ಯೆ, ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗಿವೆ. ಗುತ್ತಿಗೆಯಲ್ಲಿ ಶೇ4ರಷ್ಟು ಮುಸ್ಲಿಮರಿಗೆ ಮೀಸಲು ನೀಡಲಾಗಿದೆ. ಅದು ಯಾರಪ್ಪನ ಹಣ? ಮುಸ್ಲಿಮರಿಗಷ್ಟೇ ಹಲವು ಸೌಲಭ್ಯಗಳನ್ನು ನೀಡುವ ಮೂಲಕ ಹಿಂದೂಗಳಿಗೆ ಅಪಮಾನ ಮಾಡುತ್ತಿದ್ದಾರೆ. ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.
ಎರಡು ವರ್ಷಗಳಾದರೂ ಬಿಡಿಗಾಸೂ ಬಿಡುಗಡೆ ಮಾಡಿಲ್ಲ. ವಿವಿಧ ವಸ್ತುಗಳ ಬೆಲೆ ಏರಿಸುವ ಮೂಲಕ ಒಂದು ಕೈಯಲ್ಲಿ ನೀಡಿ, ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದ್ದಾರೆ. ಬಡವರ, ರೈತರ ಮರಣ ಶಾಸಕ ಬರೆಯುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರ ಪಕ್ಷಪಾತದಿಂದ ವರ್ತಿಸುತ್ತಿದೆ. ಯಡಿಯೂರಪ್ಪ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರವು ರೈತರಿಗೆ 25,000 ರೂ.ಗೆ ಟ್ರಾನ್ಸ್ ಫಾರ್ಮರ್ಗಳನ್ನು ಅಳವಡಿಸಲು ಅವಕಾಶ ನೀಡಿದ್ದರೆ, ಪ್ರಸ್ತುತ ಸರ್ಕಾರವು 2.5-3 ಲಕ್ಷ ರೂ.ಗಳನ್ನು ಕೇಳುತ್ತಿದೆ. ಸಿದ್ದರಾಮಯ್ಯ ರೈತರಿಗಾಗಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಆದರೆ ಅವರ ಮೇಲೆ ಹೆಚ್ಚಿನ ಹೊರೆ ಹಾಕುತ್ತಿದ್ದಾರೆ.
ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಜನವಿರೋಧಿ, ರೈತವಿರೋಧಿ ಮತ್ತು ಹಿಂದೂ ವಿರೋಧಿ ಸರ್ಕಾರವಾಗಿದೆ. 50 ಕ್ಕೂ ಹೆಚ್ಚು ಸಾರ್ವಜನಿಕ ಸೇವೆಗಳ ಬೆಲೆ ಏರಿಕೆ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾದ 38,000 ಕೋಟಿ ರೂ.ಗಳ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಚಾಟಿಸಿದ್ದರಿಂದ ಪಕ್ಷಕ್ಕೆ ಲಾಭವಾಗಿದೆ ಎಂದು ಯಾವತ್ತಿಗೂ ಹೇಳುವುದಿಲ್ಲ. ಆದರೆ, ಪಕ್ಷ ಮತ್ತಷ್ಟು ಬಲಿಷ್ಛವಾಗಿದೆ. ಅವರ ಉಚ್ಚಾಟನೆಯಿಂದ ಪಕ್ಷಕ್ಕೆ ಯಾವುದೇ ಪ್ರಯೋಜನವಾಗಿಲ್ಲವಾದರೂ, ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡಲು ಪಕ್ಷದ ನಾಯಕರು ಒಂದಾಗುತ್ತಿದ್ದಾರೆ ಎಂದರು.