
ದಾವಣಗೆರೆ : ದಾವಣಗೆರೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಗಳು ದಿನದಿಂದ ದಿನಕ್ಕೆ ಏರ ತೊಡಗಿದ್ದು, ಹಾಲಿ ಜಿಲ್ಲಾಧ್ಯಕ್ಷ ರಾಜಶೇಖರ್, ಬಿಜೆಪಿ ನಾಯಕರಾದ ಜಿ.ಎಸ್.ಜಗದೀಶ್ , ಶ್ರೀನಿವಾಸ ದಾಸಕರಿಯಪ್ಪ ಹೆಸರು ಕೇಳಿ ಬರುತ್ತಿರುವ ಬೆನ್ನೇಲೆ ಸಹಕಾರಿ ಕ್ಷೇತ್ರದಲ್ಲಿ ಹೆಸರು ಮಾಡಿರುವ ಮುರುಗೇಶ್ ಆರಾಧ್ಯ ಹೆಸರು ಕೂಡ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿದೆ.
ಮರುಗೇಶ್ ಆರಾಧ್ಯ ಕೂಡ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿದ್ದು, ಮೂರು ಜನರ ಪೈಪೋಟಿಯಲ್ಲಿ ಇವರೊಬ್ಬರ ಹೆಸರು ಕೂಡ ಕೇಳಿ ಬರುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ನಾನು ಕೂಡ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿ…ನನ್ನ ಹಾಗೆ ಇನ್ನೂ ಸಾಕಷ್ಟು ಜನ ಇದ್ದಾರೆ. ಆದರೆ ವರಿಷ್ಠರ ತೀರ್ಮಾನವೇ ಅಂತಿಮ. ನೋಡೋಣ ಯಾರಾಗುತ್ತಾರೆ ಎಂದು ಹೇಳಿದ್ದಾರೆ.
ಮೊದಲು ರಾಜ್ಯಾಧ್ಯಕ್ಷರ ಆಯ್ಕೆ
ರಾಜ್ಯಕ್ಕೆ ಫೆ.20ರೊಳಗೆ ಬಿಜೆಪಿ ಹಿರಿಯನಾಯಕರಾದ ಶಿವರಾಜ್ ಸಿಂಗ್, ಪೊನ್ ರಾಧಕೃಷ್ಣನ್ ಬರಲಿದ್ದು, ನಂತರ ರಾಜ್ಯಾಧ್ಯಕ್ಷರ ಆಯ್ಕೆ ನಡೆಯಲಿದೆ. ಫೆ.22 ರೊಳಗೆ ದಾವಣಗೆರೆ-ಚಿತ್ರದುರ್ಗ ಜಿಲ್ಲಾಧ್ಯಕ್ಷರ ಆಯ್ಕೆ ನಡೆಯಲಿದೆ. ಇನ್ನು ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಯಡಿಯೂರಪ್ಪ ಪುತ್ರ ವಿಜಯೇಂದ್ರ ಆಯ್ಕೆಗೆ ಈಗಾಗಲೇ ಬಹುಮತವಿದ್ದು, ಚುನಾವಣೆ ನಡೆಯೋದು ಡೌಟ್ ಇದೆ. ಅಲ್ಲದೇ 39 ಜಿಲ್ಲೆಗಳಲ್ಲಿ ಈಗಾಗಲೇ 23 ಜಿಲ್ಲೆಗಳ ಜಿಲ್ಲಾಧ್ಯಕ್ಷರು ನೇಮಕವಾಗಿದ್ದಾರೆ.

ಪುನಃ ರಾಜಶೇಖರ್ ಆಯ್ಕೆ ಸಾಧ್ಯತೆ ಬಹುತೇಕ ಹೆಚ್ಚು
ರಾಜ್ಯದ ಕೆಲ ಜಿಲ್ಲೆಗಳಲ್ಲಿ ಈಗಾಗಲೇ ಹಾಲಿ ಅಧ್ಯಕ್ಷ ವಿಜಯೇಂದ್ರ ಪುನಃ ರಾಜ್ಯಾಧ್ಯಕ್ಷ ಆಗುವ ಸಂಭವ ಹೆಚ್ಚಿದ್ದು, ಹೋರಾಟಗಾರ ರಾಜಶೇಖರ್ ಪುನಃ ಜಿಲ್ಲಾಧ್ಯಕ್ಷ ಆಗೋದು ಪಕ್ಕಾ ಇದೆ. ಇನ್ನು ಇವರ ಮರು ಆಯ್ಕೆ ಹಿರಿಯ ನಾಯಕರಾದ ಯಶವಂತರಾವ್ ಜಾಧವ್, ವೀರೇಶ್ ಹನಗವಾಡಿ ವಿರೋಧವಿದ್ದರು. ರಾಜ್ಯ ಅಧ್ಯಕ್ಷರ ತೀರ್ಮಾನವೇ ಅಂತಿಮವಾದ ಕಾರಣ ಪುನಃ ರಾಜಶೇಖರ್ ಜಿಲ್ಲಾಧ್ಯಕ್ಷ ಆಗಲಿದ್ದಾರೆ ಎಂಬ ಮಾಹಿತಿ ಇದೆ.
ಈ ಹಿಂದೆ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ 50ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಹರಿಹರ ಶಾಸಕ ಬಿ.ಪಿ.ಹರೀಶ್ ಸಹ ಆಕಾಂಕ್ಷಿ ಎಂದು ಹೇಳಿದ್ದರು. ಅಂತಿಮವಾಗಿ ರಾಜಶೇಖರ್ ಅವರಿಗೆ ಮಣೆ ಹಾಕಲಾಗಿತ್ತು.
ಎನ್.ರಾಜಶೇಖರ್ ಆರಂಭದಲ್ಲಿ ಭಜರಂಗ ದಳದ ನಗರ, ಜಿಲ್ಲಾ ಸಹ ಸಂಚಾಲಕ, ಜಿಲ್ಲಾ ಸಂಚಾಲಕರಾಗಿ ಕೆಲಸ ನಿರ್ವಹಿಸಿದ್ದಾರೆ. 2007ರಲ್ಲಿ ದಾವಣಗೆರೆ ಮಹಾನಗರ ಯುವಮೋರ್ಚಾ ಅಧ್ಯಕ್ಷ, 2010ರಲ್ಲಿ ಯುವಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
2013ರಲ್ಲಿ ಜಿಲ್ಲಾ ಮಾಧ್ಯಮ ಪ್ರಮುಖ್, 2016ರಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, 2018ರಲ್ಲಿ ದಾವಣಗೆರೆ ದಕ್ಷಿಣ ಹಾಗೂ ಮಾಯಕೊಂಡ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಉಸ್ತುವಾರಿಯಾಗಿ ರಾಜಶೇಖರ್ ಕಾರ್ಯ ನಿರ್ವಹಿಸಿದ್ದಾರೆ
ಶ್ರೀನಿವಾಸ ದಾಸಕರಿಯಪ್ಪರೂ ಸಹ ಆಕಾಂಕ್ಷಿ
ದಾವಣಗೆರೆ ಜಿಲ್ಲೆಯಲ್ಲಿ ಯಾರನ್ನೂ ವಿರೋಧಿಸದೇ, ಯಾವ ಬಗ್ಗೆಯೂ ಮಾತನಾಡದೇ ಸಿದ್ದೇಶ್ವರ ಬಣದಲ್ಲಿ ಗುರುತಿಸಿಕೊಂಡಿದ್ದರೂ, ಎಲ್ಲರೊಂದಿಗೆ ಸ್ನೇಹ ಮನೋಭಾವನೆ ಹೊಂದಿದ್ದಾರೆ. ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದಾರೆ..ಅತ್ತ ರವೀಂದ್ರನಾಥ ಬಣದಲ್ಲಿಯೂ, ಇತ್ತ ಸಿದ್ಧೇಶ್ವರ ಬಣದವರ ಜತೆ ಪ್ರೀತಿ ವಿಶ್ವಾಸದಿಂದ ಇದ್ದಾರೆ. ನಾಯಕ ಸಮಾಜದಲ್ಲಿಯೂ ಅವರದ್ದೇ ಆದ ಹೆಸರು ಮಾಡಿದ್ದಾರೆ. ಪಕ್ಷದ ಸಂಘಟನೆಯಲ್ಲಿಯೂ ಪ್ರಮುಖ ಪಾತ್ರವಹಿಸಿದ್ದಾರೆ.
ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತ ಜಗದೀಶ್
ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತನಾಗಿರುವ ಜಗದೀಶ್ ಮೊದಲಿನಿಂದಲೂ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಸಾಕಷ್ಟು ಚುನಾವಣೆ ಮಾಡಿದ್ದಾರೆ. ಈ ಹಿಂದೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಆಕಾಂಕ್ಷಿಯಾಗಿದ್ದರು. ಸಿದ್ದೇಶ್ವರ ಬಣದಲ್ಲಿ ಗುರುತಿಸಿಕೊಂಡಿದ್ದು, ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದಾರೆ. ಜಗದೀಶ್ ಹಾಗೂ ಶ್ರೀನಿವಾಸ ದಾಸಕರಿಯಪ್ಪ ಇಬ್ಬರೂ ಸಹ ಸಿದ್ದೇಶ್ವರ ಬಣದಲ್ಲಿದ್ದು, ಇವರಿಬ್ಬರಲ್ಲಿ ಒಬ್ಬರು ಸಹ ಜಿಲ್ಲಾಧ್ಯಕ್ಷನಾಗಬಹುದು. ಆದರೆ ವಿಜಯೇಂದ್ರ ತೀರ್ಮಾನವೇ ಅಂತಿಮ.
ಸಿದ್ದೇಶ್ವರ-ರವೀಂದ್ರನಾಥ್, ರೇಣುಕಾಚಾರ್ಯರಿಂದ ಒತ್ತಡ
ದಾವಣಗೆರೆ ಬಿಜೆಪಿಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆದಿದೆ. ಅದಕ್ಕಾಗಿ ಸ್ಥಳೀಯ ನಾಯಕರಾದ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಮಾಜಿ ಶಾಸಕ ಎಸ್.ಎ.ರವೀಂದ್ರನಾಥ, ಮಾಜಿ ಶಾಸಕ ರೇಣುಕಾಚಾರ್ಯ ಬೆಂಬಲಿಗರು ನಾಯಕರ ಸಂಪರ್ಕದಲ್ಲಿದ್ದಾರೆ.
ಚುನಾವಣೆ ಇಲ್ಲ; ಅವಿರೋಧ ಆಯ್ಕೆ ಮಾತ್ರ
ಸದ್ಯ ಬಿಜೆಪಿ ಪಕ್ಷದ ನಿಯಮಾನುಸಾರ ಚುನಾವಣೆ ಮೂಲಕ ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷರ ಚುನಾವಣೆ ನಡೆಯಬೇಕು. ಬಿಜೆಪಿ ಸದಸ್ಯರು ಮತದಾನ ಮಾಡುವ ಹಕ್ಕನ್ನು ಪಡೆದಿರುತ್ತಾರೆ. ಆದರೆ ಈ ನಿಯಮ ಈ ಹಿಂದೆಯೂ ನಡೆದಿಲ್ಲ, ಮುಂದೆಯೂ ನಡೆಯೋದಿಲ್ಲ. ಬದಲಾಗಿ ಅವಿರೋಧವಾಗಿ ನಾಯಕನನ್ನು ಆಯ್ಕೆ ಮಾಡುತ್ತಾರೆ. ಅಂತೆಯೇ ದಾವಣಗೆರೆಯಲ್ಲಿಯೂ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಒಬ್ಬರನ್ನು ಆಯ್ಕೆ ಮಾಡುತ್ತಾರೆ. ಒಂದು ವೇಳೆ ಒಮ್ಮತದ ಅಭಿಪ್ರಾಯ ಬಾರದೇ ಹೋದರೆ ರಾಜ್ಯ ನಾಯಕರು ಮಧ್ಯ ಪ್ರವೇಶಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.
ಏನು ಮಾನದಂಡ?
ಪ್ರಮುಖ ಹುದ್ದೆಗಳಲ್ಲಿರುವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗುವುದು. ಆದರೆ ಅಧಿಕಾರವಾವಧಿ ಮೂರು ವರ್ಷ ಮಾತ್ರ. ಒಂದು ಬಾರಿ ಮಾತ್ರ ಅವಕಾಶ ಸ್ಥಳೀಯ ಕಾರ್ಯಕರ್ತರಿಗೆ ಆದ್ಯತೆ, ವರ್ಚಸ್ಸು, ವಿರೋಧ ಪಕ್ಷಕ್ಕೆ ಟಾಂಗ್ ಕೊಡುವ ಮಾತಿನ ದಾಟಿ ಸೇರಿದಂತೆ ಇನ್ನಿತರ ಗುಣಗಳನ್ನು ನೀಡಿ ಜಿಲ್ಲಾಧ್ಯಕ್ಷ ಸ್ಥಾನ ಆಯ್ಕೆ ಮಾಡಲಾಗುತ್ತದೆ. ಒಟ್ಟಾರೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಇದ್ದು, ಯಾರು ಜಿಲ್ಲೆಯ ಸಾರಥಿ ಕಾದು ನೋಡಬೇಕಿದೆ