
ನಂದೀಶ್ ಭದ್ರಾವತಿ, ದಾವಣಗೆರೆ
ಕೇಸರಿ (ಸಫ್ರಾನ್) ಮತ್ತು ಹಾಲು ಎಂದಾಕ್ಷಣ ನೆನಪಾಗುವುದು ಗರ್ಭಿಣಿ ಮಹಿಳೆಯರು. ಹೌದು ಭಾರತದಲ್ಲಿ ಗರ್ಭಿಣಿ ಮಹಿಳೆಯರಿಗೆ ಹಾಲಿನ ಜೊತೆ ನಿತ್ಯ ಕೇಸರಿ ಎಸಳು ಹಾಕಿದ ಹಾಲು ಕುಡಿಸಿದರೆ ಗರ್ಭದಲ್ಲಿರುವ ಮಗು ಮತ್ತು ತಾಯಿ ಇಬ್ಬರೂ ಆರೋಗ್ಯದಿಂದ ಇರುತ್ತಾರೆ ಎನ್ನುವುದು ಬಲವಾದ ನಂಬಿಕೆ. ಹಾಗಾಗಿ ಮಸಾಲಾ ಪದಾರ್ಥ ಕೇಸರಿಗಿರುವ ಮೌಲ್ಯವೇ ಬೇರೆ.
ಹಿಮಚ್ಛಾದಿತ ಪ್ರದೇಶದಲ್ಲಿ ಮಾತ್ರ ಬೆಳೆಯುವ ಚಿನ್ನದ ಬೆಳೆ ಎಂದೇ ಕರೆಯಿಸಿಕೊಂಡಿರುವ ಕೇಸರಿಯನ್ನು ಬಯಲು ಸೀಮೆಯಲ್ಲಿ ಬೆಳೆಯಬಹುದೇ? ಈಗೊಂದು ಪ್ರಶ್ನೆಗೆ ದಾವಣಗೆರೆಯ ಪಕ್ಕದಲ್ಲಿರುವ ಬಾತಿ ಗ್ರಾಮದ ಯುವಕನೊಬ್ಬ ಉತ್ತರ ಹೇಳುತ್ತಾನೆ. ಹೌದು ಎಂದು. ಆ ಯುವಕನ ಹೆಸರು ಯಾಕೋಬ್ ಸತ್ಯರಾಜ್. ಇಲ್ಲೆ ಪಕ್ಕದ ದೊಡ್ಡ ಬಾತಿ ಗ್ರಾಮದ ಉತ್ಸಾಹಿ ತರುಣ.


ಹಾಗಾದರೆ ಬನ್ನಿ ಆತನ ಕೇಸರಿ ಕನಸಿನ ಕತೆ ಕೇಳೋಣ, ಉಳುಮೆ ಮಾಡಲು ಒಂದಿಂಚು ಭೂಮಿ, ಸ್ವಂತ ಸೂರು ಇಲ್ಲದ ಬಾತಿ ಗ್ರಾಮದ ಯುವಕ ಯಾಕೋಬ್ ಸತ್ಯರಾಜ್ ಇಂಜಿನಿಯರಿಂಗ್ ಡಿಪ್ಲೋಮಾ ಪದವಿಯನ್ನು ಅರ್ಧಕ್ಕೆ ಕೈ ಬಿಟ್ಟು ಕೃಷಿಯಲ್ಲಿ ಏನಾದರೂ ಹೊಸದನ್ನು ಮಾಡಬೇಕೆಂದು ಬಯಸಿದ ಯುವಕ.
ಈ ಸಂದರ್ಭದಲ್ಲಿ ಆತನ ನೆನೆಪಿಗೆ ಬಂದದ್ದೆ ಕೇಸರಿ ಬೆಳೆ. ದಾವಣಗೆರೆ ಜಿಲ್ಲೆಯಲ್ಲಿ ಈ ಕೇಸರಿಯನ್ನು ಇಲ್ಲಿತನಕ ಯಾರೂ ಕೂಡ ಬೆಳೆಯುವ ಪ್ರಯತ್ನ ಮಾಡಿಲ್ಲ.ಹಾಗೆಂದು ಈ ಕೃಷಿ ಅಷ್ಟೊಂದು ಸುಲಭವಲ್ಲ ಎನ್ನುವ ಅರಿವು ಆತನಿಗೆ ಇತ್ತು. ಈ ಕುರಿತು ಸತತ 6 ತಿಂಗಳ ಕಾಲ ಯುಟೂಬ್ನಲ್ಲಿ ಸರ್ಚ್ ಮಾಡಿ ಸಾಕಷ್ಟು ಮಾಹಿತಿ ಕಲೆ ಹಾಕಿ ಅಂತಿಮವಾಗಿ ದಾವಣಗೆರೆ ಜಿಲ್ಲೆಯಲ್ಲಿ ಕೇಸರಿ ಬೆಳೆದು ಇತರರಿಗೆ ಮಾದರಿಯಾಗಬೇಕೆಂದು ನಿರ್ಧರಿಸಿದ.
ಚಳಿ ವಾತಾವರಣದಲ್ಲಿ ಈ ಬೆಳೆ
ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಪಕ್ಕದ ಆಂದ್ರಪ್ರದೇಶದಲ್ಲಿ ರೈತರೊಬ್ಬರು ಬೆಳೆದಿದ್ದ ಕೇಸರಿ ಬೆಳೆಯನ್ನು ನೋಡಿಕೊಂಡು ಬಂದೆ. ಇದು ಒಳಾಂಗಣ ಮತ್ತು ಹೊರಾಂಗಣ ಕೃಷಿ ಜೊತೆಗೆ ರೋಗಗಳ ಬಾದೆಯಿಂದ ಖರ್ಚು ವೆಚ್ಚ ಹೆಚ್ಚು, ಅತಿ ಚಳಿ ವಾತಾವರಣದಲ್ಲಿ ಈ ಬೆಳೆಯನ್ನು ಬೆಳೆಯಬೇಕಿರುವುದು ಸವಾಲಿನ ಕೆಲಸವೇ ಸೈ.
ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಆಗಸ್ಟ್ನಲ್ಲಿ ಕಾಶ್ಮೀರಕ್ಕೆ ತೆರಳಿ ಅಲ್ಲಿರುವ ಕೇಸರಿ ಸಂಶೋಧಾನ ಸಂಸ್ಥೆಗೆ ಭೇಟಿ ನೀಡಿ ಅಗತ್ಯ ಮಾಹಿತಿ ಪಡೆದುಕೊಂಡೆ. ನಂತರ ನೇರವಾಗಿ ಅಲ್ಲಿನ ರೈತರ ಬಳಿ ಹೋಗಿ ಕೇಸರಿ ಬೀಜಗಳನು ಖರೀದಿಸಿ ತಂದು ಅಂತಿಮವಾಗಿ ಮನೆಯಲ್ಲಿಯೇ ನಾಟಿ ಮಾಡಿದ್ದೇನೆ.
ರೂಮಿನಲ್ಲಿ ಕೇಸರಿ
9*5 ಅಡಿಯ ರೂಮಿನಲ್ಲಿ ಎಸಿ ಅಳವಡಿಸಿ ಮೂರು ರ್ಯಾಕ್ಗಳನ್ನು ಮಾಡಿ ಅದರಲ್ಲಿ ಬೀಜ ಬಿತ್ತನೆ ಮಾಡಲಾಗಿದೆ. ಪ್ರತಿ ಕೆಜಿ ಕೇಸರಿ ಬೀಜಕ್ಕೆ 600 ರೂ ನಂತೆ 60 ಕೆಜಿ ತಂದಿದ್ದೆ. ಇದರ ಪೈಕಿ 15 ಕೆಜಿ ಬೀಜ ಹಾಳಾಗಿತ್ತು. ಇದೀಗ 45 ಕೆಜಿ ಬೀಜ ನಾಟಿ ಮಾಡಿದ್ದೇನೆ. ವರ್ಷಕ್ಕೆ ಒಂದೇ ಬೆಳೆ ಬರುವ ಈ ಬೆಳೆಗಾಗಿ ಆರಂಭದಲ್ಲಿಯೇ 4 ಲಕ್ಷ ರೂ ವೆಚ್ಚ ಮಾಡಿದ್ದೇನೆ. ಮೊದಲ ವರ್ಷ 20 ಸಾವಿರ ರು ಆದಾಯ ಬರುವು ನಿರೀಕ್ಷೆ ಇದೆ. ಇದರಲ್ಲಿ ಅನುಭವ ಹೆಚ್ಚಾದಂತೆ ಆದಾಯ ಕೂಡ ಹೆಚ್ಚಾಗುತ್ತದೆ ಎನ್ನುವುದು ಸತ್ಯರಾಜ್ ಕಂಡುಕೊಂಡ ಸತ್ಯ.
ಪ್ರತಿ ಗ್ರಾಂ ಕೇಸರಿಗೆ ಮಾರುಕಟ್ಟೆಯಲ್ಲಿ 800 ರೂ
ಕೃಷಿ ಸೇರಿದಂತೆ ಯಾವುದೇ ವ್ಯವಹಾರದಲ್ಲಾಗಲಿ ಆರಂಭದಲ್ಲಿಯೇ ಆದಾಯ ನಿರೀಕ್ಷೆ ಮಾಡಬಾರದು. ಭವಿಷ್ಯದಲ್ಲಿ ನಮ್ಮ ಯೋಜನೆಯನ್ನು ಇನ್ನಷ್ಟು ವಿಸ್ತರಿಸುವ ದೂರ ದೃಷ್ಟಿ ಮತ್ತು ಅದರಿಂದ ಬರುವ ಆದಾಯದ ಲೆಕ್ಕಾಚಾರ ಮಾಡಬೇಕೆ ಹೊರತು ಅನುಭವ ಆಗದ ಹೊರತು ಆದಾಯ ಬಗ್ಗೆ ನಿಖರತೆ ಇರುವುದಿಲ್ಲ ಎನ್ನುತ್ತಾರೆ ಸತ್ಯರಾಜ್. ಬರುವ ವರ್ಷ ಒಂದೂವರೆ ಕೆಜೆ ಕೇಸರಿ ಬೆಳೆಯಬೇಕು ಅಂದು ಕೊಂಡಿದ್ದೇನೆ. ಈಗ ಪ್ರತಿ ಗ್ರಾಂ ಕೇಸರಿಗೆ ಮಾರುಕಟ್ಟೆಯಲ್ಲಿ 800 ರೂ ಇದೆ. ಸ್ಥಳಿಯರಿಗೆ ಕೈಗೆಟುವ ದರದಲ್ಲಿ ಕೇಸರಿಯನ್ನು ಪರಿಚಯಿಸುವುದು ನನ್ನ ಮೊದಲ ಆದ್ಯತೆಯಾಗಿದೆ.
ಕಳಪೆ ಕೇಸರಿ ಬಗ್ಗೆ ಇರಲಿ ಎಚ್ಚರ
ಅತ್ಯಂತ ದುಬಾರಿ ಬೆಲೆಯ ಕೇಸರಿಯ ಗುಣಮಟ್ಟದ ಬಗ್ಗೆ ಜನರು ತಿಳಿದುಕೊಳ್ಳವುದು ಅಗತ್ಯವಿದೆ. ಮೆಕ್ಕೆಜೋಳದ ತೆನೆಯ ತುದಿಯಲ್ಲಿ ಮೂಡಿಬರುವ ಉದ್ದನೆಯ ಎಳೆಗಳು ಮತ್ತು ತೆಂಗಿನ ನಾರಿಗೆ ಬಣ್ಣಹಾಕಿ ಮಾರಾಟಮಾಡಲಾಗುತ್ತಿದೆ. ಈ ರೀತಿಯ ಕಳಪೆ ಕೇಸರಿಯನ್ನು ಪತ್ತೆ ಹಚ್ಚಲು ಅನುಭವ ಬೇಕು ಎನ್ನುತ್ತಾರೆ ಸತ್ಯರಾಜ್. ಹೊಸತನಕ್ಕೆ ತುಡಿಯುವ ಯುವ ಜನಾಂಗವನ್ನು ಪ್ರೋತ್ಸಾಹಿಸಬೇಕೆ ಹೊರತು ಕಾಲೆಳೆಯುವ ಅಥವಾ ಟೀಕಿಸುವ ಕೆಲಸವನ್ನು ಯಾರೂ ಕೂಡ ಮಾಡಬಾರದು ಎನ್ನುತ್ತಾರೆ ಯಾಕೋಬ್ ಸತ್ಯರಾಜ್.