ದಾವಣಗೆರೆ : ಚನ್ನಪಟ್ಟಣ ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳು ಗೆಲ್ಲಲೇಬೇಕು ಎನ್ನುವ ಜಿದ್ದಿಗೆ ಬಿದ್ದವೆ. ಅದರಲ್ಲೂ ಜಾತಿ ಲೆಕ್ಕಾಚಾರ ಭಾರಿ ಚರ್ಚೆಗೆ ಮುನ್ನುಡಿ ಬರೆದಿದೆ. ಒಂದೇ ದಿನ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಬಿಜೆಪಿ ಭಿಷ್ಮ ಯಡಿಯೂರಪ್ಪ ಒಂದೇ ವೇದಿಕೆಯಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಚನ್ನಪಟ್ಟಣದ ರಣಕಣವೇ ಬದಲಾಗಿದ್ದು ಗೆಲುವು ಯಾರಿಗೆ ಅಷ್ಟು ಸುಲಭವಾಗಿ ಒಲಿಯುವುದಿಲ್ಲ ಎನ್ನುವ ಸಂದೇಶ ರವಾನೆಯಾಗಿದೆ. ಹಾಗಾದ್ರೆ ಎಚ್ಡಿಡಿ ಹಾಗೂ ಬಿಎಸ್ವೈ ಕಾಂಬಿನೇಷನ್ ಮೈತ್ರಿ ಪಕ್ಷಕ್ಕೆ ಲಾಭ ತಂದುಕೊಡುತ್ತಾ? ನಿಖಿಲ್ ಕುಮಾರಸ್ವಾಮಿ ಮುಂದಿನ ಭವಿಷ್ಯವೇನು? ಈ ಕುರಿತ ಸ್ಟೋರಿ ಇಲ್ಲಿದೆ.
ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಂಟಿಯಾಗಿ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಬುಧವಾರ ಮತಯಾಚನೆ ನಡೆಸಿದ್ದಾರೆ. ಇಬ್ಬರೂ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿ ಸರ್ಕಾರದ ವೈಫಲ್ಯ ಎತ್ತಿಹಿಡಿದರು. ರಾಜ್ಯ ಖಜಾನೆ ಖಾಲಿ ಆಗಿದೆ, ರಾಜ್ಯ ದಿವಾಳಿ ಆಗಿದೆ. ಅಭಿವೃದ್ದಿ ಕೆಲಸಗಳಿಗೆ ಹಣ ಇಲ್ಲದಂತಾಗಿದೆ. ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ದೇವೇಗೌಡರು ಆರೋಪ ಮಾಡಿದರು.
ಕಾಂಗ್ರೆಸ್ ಹಠ ಮಾಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದರು. ಕೊನೆಗೆ ಅವರೇ ಮೈತ್ರಿ ಸರ್ಕಾರ ಉರುಳಿಸಿದರು. ಕಳೆದ 10 ವರ್ಷಗಳಿಂದ ರೈತರ ಖಾತೆಗೆ ಮೋದಿ ಸರ್ಕಾರ 2000ರೂ. ಜಮಾ ಮಾಡುತ್ತಾ ಬರುತ್ತಿದೆ. ಆದರೆ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಸ್ಥಗಿತಗೊಳಿಸಿದೆ. ಈಗ 5ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದು, ಅವರಲ್ಲಿಯೇ ಗ್ಯಾರಂಟಿಗಳ ಕುರಿತು ಅಪಸ್ವರ ಎದ್ದಿದೆ ಎಂದು ಟೀಕಿಸಿದರು.
ನಾನು ರೈತನ ಮಗ. 90 ವರ್ಷ ವಯಸ್ಸಾಗಿದೆ ನನಗೆ ಸರಿಸಮನಾಗಿ ಎಸ್.ಎಂ.ಕೃಷ್ಣ ಒಬ್ಬರೇ ಇರುವುದು. ಅವರು ಎಲ್ಲೂ ಬರಲ್ಲ. ದೇವೇಗೌಡ ಅವರು ಯಾಕೆ ಬರುತ್ತಾರೆ? ಮೊಮ್ಮಗನ ಗೆಲ್ಲಿಸಲು ಬರುತ್ತಾರೆ. 90 ವಯಸ್ಸಾದರೂ ಬರ್ತಾನಲ್ಲ, ಹುಚ್ಚು ಹಿಡಿದಿದ್ಯಾ ಎಂದು ಎದುರಾಳಿಗಳು ಮಾತನಾಡುತ್ತಿದ್ದಾರೆ. 50 ವರ್ಷಗಳ ಹಿಂದೆ ಚನ್ನಪಟ್ಟಣಕ್ಕೆ ಬಂದು ಕಾಂಗ್ರೆಸ್ ಸೋಲಿಸಿದ ವ್ಯಕ್ತಿ ನಾನು. ನಿಖಿಲ್ ಮಂಡ್ಯ ಮತ್ತು ರಾಮನಗರದಲ್ಲಿ ಸೋತಿದ್ದಾನೆ. ಹಾಗಂತ ನಾನು ಮೊಮ್ಮಗನನ್ನು ಗೆಲ್ಲಿಸಲು ಇಲ್ಲಿಗೆ ಬಂದಿಲ್ಲ. ಪ್ರಾದೇಶಿಕ ಪಕ್ಷ ಉಳಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಬಂದಿದ್ದೇನೆ ಎಂದರು.
ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ ಚನ್ನಪಟ್ಟಣದಲ್ಲಿ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ದೊಡ್ಡ ಪ್ರಮಾಣದ ಮತಗಳ ಅಂತರದಿ0ದ ಗೆಲ್ಲುತ್ತಾರೆ. ಅದರಲ್ಲಿ ನನಗೆ ಯಾವುದೇ ಸಂಶಯ ಇಲ್ಲ. 2006ರಲ್ಲಿ ನಾನು ಮತ್ತು ಕುಮಾರಸ್ವಾಮಿ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿದ್ದೆವು. ಅತ್ಯುತ್ತಮ ಆಡಳಿತ ನೀಡಿದ್ದೆವು. ಭಾಗ್ಯಲಕ್ಷ್ಮಿ, ಉಚಿತ ಬೈಸಿಕಲ್, ಸಂಧ್ಯಾ ಸುರಕ್ಷಾ ಸೇರಿದಂತೆ ಅನೇಕ ಜನಪರ ಯೋಜನೆಯನ್ನು ಜಾರಿಗೆ ತಂದು ಜನರಿಗೆ ಅನುಕೂಲ ಮಾಡಿಕೊಟ್ಟಿದ್ದೆವು. ಇದೆಲ್ಲವನ್ನು ಜನತೆ ಮರೆಯಬಾರದು ಎಂದರು.
ಒಟ್ಟಿನಲ್ಲಿ ಒಕ್ಕಲಿಗ ಸಮಾಜದ ಪ್ರಬಲ ನಾಯಕ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಲಿಂಗಾಯತ ಸಮಾಜ ಪ್ರಬಲ ನಾಯಕ, ಮಾಜ ಸಿಎಂ ಯಡಿಯೂರಪ್ಪ ಅವರ ಜಂಟಿ ಪ್ರಚಾರ ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಬಿರುಸಿನ ಸ್ಪರ್ಧೆ ನಡೆದಿದ್ದು ಗೆಲುವು ಯಾರಿಗೂ ಸುಲಭವಾಗಿ ಒಲಿಯಲ್ಲ ಎನ್ನುವ ಸ್ಪಷ್ಟ ಸಂದೇಶ ರವಾನೆಯಾಗಿದೆ.