ನಂದೀಶ್ ಭದ್ರಾವತಿ ದಾವಣಗೆರೆ
ಈ ಜಗತ್ತಿನಲ್ಲಿ ದುಡ್ಡು ಕೊಟ್ರೆ ಎಲ್ಲಾನೂ ಸಿಗುತ್ತೆ .! ಬಹುತೇಕ ವಸ್ತುಗಳು ಖರೀದಿಗೆ, ಬಾಡಿಗೆಗೆ ಸಿಗುತ್ತವೆ. ವಿಚಿತ್ರ ಅಂದ್ರೆ ಭಾರತದ ಈ ಹಳ್ಳಿಯಲ್ಲಿ ಹೆಂಡತಿಯನ್ನೇ ಬಾಡಿಗೆಗೆ ಕೊಡುವ ವಿಚಿತ್ರ ರೂಢಿಯಿದೆ.! ಇಂತಹ ಒಂದು ಪದ್ಧತಿ ಶತಮಾನಗಳಿಂದ ನಡೆದುಕೊಂಡು ಬಂದಿದ್ದರೂ ಕಾನೂನಿಗೂ ಕಡಿವಾಣ ಹಾಕುವುದಕ್ಕೆ ಸಾಧ್ಯವಾಗಿಲ್ಲ. ಅಷ್ಟಕ್ಕೂ ಇಲ್ಲಿ ಹೆಂಡತಿ, ಹೆಣ್ಣು ಮಕ್ಕಳನ್ನು ಯಾಕಾಗಿ ಬಾಡಿಗೆ ಕೊಡಲಾಗುತ್ತಿದೆ? ಅಗ್ರಿಮೆಂಟ್ನಲ್ಲಿ ಯಾವೆಲ್ಲಾ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತದೆ ಗೊತ್ತಾ, ಹಾಗಾದ್ರೆ ಈ ಸ್ಟೋರಿ ನೋಡಿ.
ಮಧ್ಯಪ್ರದೇಶದ ಶಿವಪುರಿ ಎಂಬ ಪ್ರದೇಶದ ‘ದಧೀಚ’ ಪದ್ಧತಿ ಎಲ್ಲರನ್ನೂ ಅಚ್ಚರಿಗೊಳಿಸುತ್ತದೆ. ಸಮಾಜ ಒಪ್ಪದ ಹೀನ ಪದ್ಧತಿಯೊಂದು ಇಲ್ಲಿ ಜಾರಿಯಲ್ಲಿದೆ.. ಇಲ್ಲಿ ಹೆಂಡತಿ, ಹೆಣ್ಣುಮಕ್ಕಳನ್ನು ಬಾಡಿಗೆಗೆ ಕೊಡಲಾಗುತ್ತದೆ. ಇಂತಹ ಪದ್ಧತಿಗೆ ‘ದಧೀಚ’ ಎಂದು ಕರೆಯಲಾಗುತ್ತದೆ. ಪುರಾಣದ ದಧೀಚಿ ಮುನಿಗೂ ಈ ಪದ್ಧತಿಗೂ ಯಾವ ಸಂಬಂಧವೂ ಇಲ್ಲ. ಇದೇನೂ ತುಂಬಾ ಹಳತಾದ ರೂಢಿಯಲ್ಲ. ಶತಮಾನಗಳಿದಿಂದೀಚೆಗೆ ಇದು ಶುರುವಾಗಿದೆ. ಹಾಗಾದ್ರೆ, ಇಂತದೊಂದು ವಿಚಿತ್ರ ಪದ್ಧತಿ ಶುರುವಾಗಿದ್ಯಾಕೆ..?
ಇಲ್ಲಿನ ಶ್ರೀಮಂತರು ಬಡವರ ಮನೆಯ ಹೆಣ್ಣುಮಕ್ಕಳನ್ನು ಬಾಡಿಗೆಗೆ ಪಡೆಯುತ್ತಾರೆ. ತಂದೆ ತನ್ನ ಹೆಣ್ಣುಮಕ್ಕಳನ್ನು, ಗಂಡ ತನ್ನ ಹೆಂಡತಿಯನ್ನು ಬಾಡಿಗೆಗೆ ಕೊಡುತ್ತಾನೆ. ಬಾಡಿಗೆ ಅವಧಿ ಒಂದು ದಿನದಿಂದ ಆರಂಭಿಸಿ ಒಂದು ವರ್ಷದವರೆಗೆ ಇರಬಹುದು. ಇದೆಲ್ಲವೂ ಲಿಖಿತ ಅಗ್ರಿಮೆಂಟ್ ಮೇಲೇ ಆಗುತ್ತದೆ. ಒಂದು ವರ್ಷದ ನಂತರ ಆಕೆ ಇನ್ನೂ ಬೇಕು ಎಂದಿದ್ದರೆ ಅಗ್ರಿಮೆಂಟ್ ರಿನ್ಯೂವಲ್ ಮಾಡಬೇಕಾಗುತ್ತದೆ…
ಇಲ್ಲಿ ತಂದೆಯರು ಎಂಟು ಒಂಬತ್ತು ವರ್ಷದಿಂದಲೇ ತಮ್ಮ ಹೆಣ್ಣುಮಕ್ಕಳನ್ನು ಬಾಡಿಗೆಗೆ ಕೊಡಲು ಶುರು ಮಾಡುತ್ತಾರೆ. ಹುಡುಗಿಯರು ಋತುಮತಿಯರಾಗಿರಬೇಕು ಅಂತಲೂ ಇಲ್ಲ. ಮದುವೆಯಾದ ಗಂಡನೂ ಮೊದಲ ರಾತ್ರಿ ಅನುಭವಿಸಿ ಎರಡನೇ ರಾತ್ರಿಯಿಂದಲೇ ಆಕೆಯನ್ನು ಹಣವಂತರಿಗೆ ಬಾಡಿಗೆಗೆ ಕೊಡುವುದೂ ಇದೆ. ಪಡೆದುಕೊಂಡವರು ಆಕೆಯನ್ನು ಯಾವುದಕ್ಕೂ ಬಳಸಬಹುದು. ಮುಖ್ಯವಾಗಿ ಸೆಕ್ಸ್ ಸುಖಕ್ಕಾಗಿಯೇ ಈ ದಂಧೆ ನಡೆಯುವುದು. ಅದರ ಬಳಿಕ ಹಗಲಿನಲ್ಲಿ ಆಕೆಯನ್ನು ಮನೆಗೆಲಸ, ಹೊಲಗೆಲಸ ಹೀಗೆ ಎಲ್ಲದಕ್ಕೂ ಬಳಸಲಾಗುತ್ತದೆ. ಬಾಡಿಗೆಗೆ ಪಡೆದವನು, ಆತನ ಅಣ್ಣತಮ್ಮಂದಿರು, ಸ್ವಂತ ಗಂಡ, ಆಕೆಯ ಮಾವ, ಹೀಗೆ ಯಾರು ಬೇಕಾದರೂ ಆಕೆಯನ್ನು ಬಲಾತ್ಕರಿಸಬಹುದು. ಆಕೆ ವಿರೋಧಿಸುವಂತಿಲ್ಲ.
ಪೊಲೀಸರಿಗೆ ಇದು ಗೊತ್ತಿಲ್ಲವೆ? ಗೊತ್ತಿದೆ. ಆದರೆ ಕ್ರಮ ಕೈಗೊಳ್ಳಲಾರರು. ಅವರೂ ಇದರಲ್ಲಿ ಪಾಲುದಾರರು. ತನ್ನ ಮೇಲೆ ಆಗುತ್ತಿರುವುದು ರೇಪ್ ಎಂಬುದು ಕೂಡ ಈ ಸ್ತ್ರೀಯರಿಗೆ ಅರಿವಿಲ್ಲ. ಬಡತನವನ್ನು ಹಾಸಿ ಹೊದ್ದ ಪ್ರದೇಶ ಇದು. ಇತ್ತೀಚೆಗೆ ಕೆಲವು ಎನ್ಜಿಒಗಳು ಈ ಪ್ರದೇಶಗಳಲ್ಲಿ ಓಡಾಡಿ ಅರಿವು ಮೂಡಿಸಲು ತೊಡಗಿವೆ.
ಹುಡುಗಿಯರ ಅಂದ ಚಂದ ದೇಹದ ಗಟ್ಟಿತನ ಎಲ್ಲವನ್ನೂ ಹೊಂದಿಕೊಂಡು ಆಕೆಯ ಬಾಡಿಗೆ ನಿರ್ಧಾರ ಆಗುತ್ತದೆ. ಮಧ್ಯವಯಸ್ಸು ಮೀರಿದವಳನ್ನು ಯಾರೂ ಬಯಸುವುದಿಲ್ಲ. ಕನ್ಯೆಯರಿಗೆ, ನೋಡಲು ಸುಂದರವಾಗಿರುವವರಿಗೆ ಲಕ್ಷಗಟ್ಟಲೆ ಹಣ ಸಿಗುತ್ತದೆ. ಸಾಮಾನ್ಯ ರೂಪಿನವರಿಗೆ ಸಾವಿರಗಳ ಲೆಕ್ಕ. ವಧುವನ್ನು ಸುಂದರ, ದೈಹಿಕವಾಗಿ ಆಕರ್ಷಕ ಮತ್ತು ಕನ್ಯೆ ಎಂದು ಪರಿಗಣಿಸಿದರೆ 2 ಲಕ್ಷದವರೆಗೆ ತಲುಪುತ್ತದೆ. ಕನ್ಯೆಯರಲ್ಲದ ಹುಡುಗಿಯರ ಮೌಲ್ಯ ರೂ. 10,000 ರಿಂದ 15,000, ಅವರ ವಯಸ್ಸು, ಚರ್ಮದ ಟೋನ್ ಮತ್ತು ಅವರು ತೊಡಗಿಸಿಕೊಂಡಿರುವ ಹಿಂದಿನ ಒಪ್ಪಂದದ ಮದುವೆಗಳಂತಹ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಇಂತಹದೊಂದು ವಿಚಿತ್ರ ಪದ್ಧತಿ ಕಾಲದ ಯಾವುದೋ ಒಂದು ಹಂತದಲ್ಲಿ ಇಲ್ಲಿ ಹೆಣ್ಣುಮಕ್ಕಳ ಸಂಖ್ಯೆ ವಿಪರೀತವಾಗಿ ಕಡಿಮೆಯಾಯಿತು. ಆಗ ಇರುವ ಹೆಣ್ಣುಮಕ್ಕಳನ್ನು ಹಂಚಿಕೊಳ್ಳುವ ರೂಢಿ ಶುರುವಾಯಿತು. ಹಣವಿದ್ದ ಪುರುಷರು ಬಡ ಹೆಣ್ಣುಮಕ್ಕಳನ್ನು ವಧುದಕ್ಷಿಣೆ ಕೊಟ್ಟು ಕೊಂಡುಕೊಳ್ಳತೊಡಗಿದರು. ಬಡವರಿಗೆ ಅದೂ ಸಾಧ್ಯವಿಲ್ಲದಾಗ, ಬಾಡಿಗೆ ಪದ್ಧತಿ ಬಂತು. ಸ್ತ್ರೀಯರ ಆಯ್ಕೆಗೆ ಹೆಚ್ಚಿನ ಸ್ವಾತಂತ್ರ್ಯ ಮಾನ್ಯತೆ ಬರಬೇಕಾದ ಸನ್ನಿವೇಶ ಹೋಗಿ ಈ ಕೆಟ್ಟ ರೂಢಿ ಬಂತು. ಪುರುಷ ಪ್ರಧಾನ ಸಮಾಜ ಸ್ತ್ರೀಯರನ್ನು ಹೀಗೆ ಸೋಲಿಸಿತು.