
ಭದ್ರಾವತಿ : ಭದ್ರಾವತಿಯ ತಾಲೂಕು ಕಚೇರಿಯಖ ಜಾನೆಯಲ್ಲಿಯೇ ಸೇವೆ ಮುಂದುವರೆಸಲು ಅವಕಾಶ ನೀಡುವಂತೆ ಕೋರಿದ್ದ ಸಹೋದ್ಯೋಗಿಯಿಂದ ರೂ. 5,000 ಲಂಚ ಪಡೆಯುತ್ತಿದ್ದ ವೇಳೆ ಇಲ್ಲಿನ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಡಿವೈಎಸ್ಪಿ ಟಿ.ಪಿ. ಕೃಷ್ಣಮೂರ್ತಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಇವರು ಶಿವಮೊಗ್ಗದ ತಮ್ಮ ನಿವಾಸದಲ್ಲಿ ಸಿಬ್ಬಂದಿಯೋರ್ವರಿಂದ ಲಂಚ ಸ್ವೀಕರಿಸುವ ವೇಳೆ, ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಕರ್ತವ್ಯಕ್ಕೆ ನಿಯೋಜನೆ ಮಾಡುವುದಕ್ಕೆ ಸಂಬಂಧಿಸಿದಂತೆ ಡಿಎಆರ್ ಸಿಬ್ಬಂದಿ ಬಳಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ಸಿಬ್ಬಂದಿಯು ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದರು.


ಹೀಗಿರುವಾಗ ತಮ್ಮ ನಿವಾಸದಲ್ಲಿ ಸಿಬ್ಬಂದಿಯಿಂದ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ, ಲಂಚದ ಹಣದ ಸಮೇತ ಡಿವೈಎಸ್ಪಿಯನ್ನು ಬಂಧಿಸಿದ್ದಾರೆ.
ಯಾರು ಈ ಡಿವೈಎಸ್ಪಿಗೆ ಖೆಡ್ಡಾ ತೋಡಿದವರು
ಡಿಎಆರ್ ಕಾನ್ಸ್ಟೆಬಲ್ ಟಿ.ಎಸ್.ಪ್ರಸನ್ನಕುಮಾರ್ ಡಿಎಸ್ಪಿ ಕೃಷ್ಣಮೂರ್ತಿಯವರನ್ನು ಖೆಡ್ಡಾಗೆ ಬೀಳಿಸಿದ ಸಿಬ್ಬಂದಿ. ಇವರು ಕಳೆದ ಒಂದೂವರೆ ವರ್ಷದಿಂದ ಭದ್ರಾವತಿಯ ತಾಲ್ಲೂಕು ಕಚೇರಿ ಖಜಾನೆಯಲ್ಲಿ ಭದ್ರತೆಯ ಸೇವೆಯಲ್ಲಿದ್ದು, ಯುಪಿಎಸ್ಸಿ ಪರೀಕ್ಷೆಗೆ ಪೂರ್ವಸಿದ್ಧತೆ ನಡೆಸಿದ್ದರು. ಅಲ್ಲದೇ ಖಜಾನೆ ಸೇವೆಯಲ್ಲೇ ಮುಂದುವರಿಸಿದರೆ ಓದಿಕೊಳ್ಳಲು ಅನುಕೂಲವಾಗುತ್ತದೆ ಎಂದು ಮೇಲಧಿಕಾರಿ ಕೃಷ್ಣಮೂರ್ತಿ ಅವರಿಗೆ ಅಲ್ಲಿಯೇ ಮುಂದುವರೆಸುವಂತೆ ಮನವಿ ಮಾಡಿದ್ದರು. ಆದರೆ ಡಿಎಸ್ಪಿ ಕೃಷ್ಣಮೂರ್ತಿ ರೂ. 5,000 ಲಂಚಕ್ಕೆ ಬೇಡಿಕೆ ಇರಿಸಿದ್ದರು.
ಲಂಚ ನೀಡಲು ಇಷ್ಟವಿಲ್ಲದೇ ಪ್ರಸನ್ನ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ನಿಗದಿಯಂತೆ ಡಿವೈಎಸ್ಪಿ ಕೃಷ್ಣಮೂರ್ತಿ ಅವರು ಪೊಲೀಸ್ ವಸತಿ ಗೃಹದಲ್ಲಿ ಲಂಚ ಪಡೆಯುವಾಗ ದಾಳಿ ನಡೆಸಿದ ಲೋಕಾಯುಕ್ತ ಎಸ್ಪಿ ಮಂಜುನಾಥ ಚೌಧರಿ ನೇತೃತ್ವದ ತಂಡ, ಆರೋಪಿಯನ್ನು ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಭಾಗವಾಗಿ ಡಿಎಆರ್ನ ಸಹಾಯಕ ಸಬ್ಇನ್ಸ್ಪೆಕ್ಟರ್ ಎಂ.ಕೆ.ರವಿ ಅವರನ್ನು ವಶಕ್ಕೆ ಪಡೆಯಲಾಗಿದೆ.
ಡಿಎಆರ್ ಕಚೇರಿಯಲ್ಲಿ ಸಿಬ್ಬಂದಿಯನ್ನು ಅವರಿಗೆ ಅಗತ್ಯವಿರುವ ಕಡೆ ಸೇವೆಗೆ ನಿಯೋಜಿಸಲು ಲಂಚ ಪಡೆಯಲಾಗುತ್ತದೆ ಎಂಬ ದೂರುಗಳು ಈ ಮೊದಲು ಕೇಳಿಬಂದಿದ್ದವು ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿಂದೆ ಕೃಷ್ಣಮೂರ್ತಿ ದಾವಣಗೆರೆಯಲ್ಲಿ ಕಾರ್ಯನಿರ್ವಹಿಸಿದ್ದರು.