ಚನ್ನಗಿರಿ: ವಸತಿ ಶಾಲೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಿ ತೀವ್ರವಾಗಿ ಅಸ್ವಸ್ಥಗೊಂಡ 24 ವಿದ್ಯಾರ್ಥಿನಿಯರನ್ನು ಸಂತೆಬೆನ್ನೂರು ಸಮುದಾಯ ಆಸ್ಪತ್ರೆಯಲ್ಲಿ ಚಿಕತ್ಸೆಗೆ ದಾಖಲಿಸಿದ ಘಟನೆ ಚನ್ನಗಿರಿ ತಾಲ್ಲೂಕಿನ ಕಾಕನೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ನಡೆದಿದೆ.
ತಾಲ್ಲೂಕಿನ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಆಹಾರದ ವ್ಯತ್ಯಾಸದಿಂದ ಬಳಲಿದ ವಿದ್ಯಾರ್ಥಿಗಳು ನಿಶಕ್ತಿ, ಹೊಟ್ಟೆ ನೋವು, ವಾಂತಿ, ತಲೆಸುತ್ತಿನಿಂದ ಹಾಗೂ ಭಯಗೊಂಡಿದ್ದ 24 ವಿದ್ಯಾರ್ಥಿನಿಯರನ್ನು ಕೂಡಲೇ ಸಂತೇಬೆನ್ನೂರು ಸರ್ಕಾರಿ ಸಮುದಾಯ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
12 ವಿದ್ಯಾರ್ಥಿಗಳಿಗೆ ಶಾಲೆಯಲ್ಲಿಯೇ ಚಿಕಿತ್ಸೆ
12 ವಿದ್ಯಾರ್ಥಿಗಳಿಗೆ ಶಾಲೆಯಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು. ಸ್ಥಳಕ್ಕೆ ಶಾಸಕ ಬಸವರಾಜ್ ಶಿವಗಂಗಾ ಭೇಟಿನೀಡಿ ಮಕ್ಕಳ ಚಿಕಿತ್ಸೆಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ವ್ಯವಸ್ಥೆ ಮಾಡಿದರು. ಸುಮಾರು 10 ಕ್ಕೂ ಹೆಚ್ಚು ವೈದ್ಯರನ್ನು ನೇಮಿಸಿ ತುರ್ತು ಚಿಕಿತ್ಸೆ ನೀಡಲಾಯಿತು. ಮೂರು ವಿದ್ಯಾರ್ಥಿಗಳು ತೀವ್ರ ಅಸ್ತವ್ಯಸ್ತ ಗೊಂಡಿದ್ದು,ಹೆಚ್ಚಿನ ಚಿಕಿತ್ಸೆ ನೀಡಿ ತಜ್ಞವೈದ್ಯರಿಂದ ಇರಿಸಲಾಗಿದೆ.
ಆಹಾರದಲ್ಲಿ ಹುಳುಗಳು
ವಸತಿ ಶಾಲೆಯಲ್ಲಿ ನೀಡುವ ಆಹಾರದಲ್ಲಿ ಹುಳುಗಳು ಕಾಣುತ್ತಿದ್ದವು. ಅಲ್ಲದೇ ಕೊಳೆತ ತರಕಾರಿಗಳಿಂದ ಅಡುಗೆ ಮಾಡಿ ನೀಡಲಾಗುತ್ತಿತ್ತು. ಅಡುಗೆಯಲ್ಲಿ ಸ್ವಚ್ಚತೆ ಇಲ್ಲದಿರುವುದು, ಅವಧಿ ಮುಗಿದ ಆಹಾರ ಪದಾರ್ಥಗಳನ್ನು ಬಳಸುತ್ತಿರುವುದು ಅಸ್ತವ್ಯಸ್ತಗೊಳ್ಳಲು ಕಾರಣ ವೆಂದು ಶಾಲಾ ವಿದ್ಯಾರ್ಥಿನಿಯರು ಅಡುಗೆ ಭಟ್ಟರನ್ನು ದೂರಿದರು.
ಶಾಲೆಯ ಅವ್ಯವಸ್ಥೆಗೆ ಶಾಸಕರು ಗರಂ
ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆಗೆ ವ್ಯವಸ್ಥೆಮಾಡಿ, ನಂತರ ಕಾಕನೂರು ಶಾಲೆಗೆ ಬೇಟಿ ನೀಡಿ ಪರಿಶೀಲಿಸಿದರು. ಶಾಲೆಯ ಕ್ಯಾಂಪಸ್ನಲ್ಲಿ ಸ್ವಚ್ಚತೆ ಇಲ್ಲದಿರುವುದು, ಕೊಳೆತ ತರಕಾರಿಗಳು, ಧಾನ್ಯಗಳಲ್ಲಿ ಹುಳುಗಳು, ಹರಿದ ಬೆಡ್ಗಳು, ಬೇಡ್ಶೀಟ್ಗಳಿಲ್ಲದೆ ಇರುವುದು, ಬಿಸಿನೀರಿನ ಅವ್ಯವಸ್ಥೆ ವಿರುದ್ದ ಶಾಸಕ ಶಿವಗಂಗಾ ಹರಿಹಾಯ್ದರು.