
ಶಿವಮೊಗ್ಗ: ಸಾಕ್ಷಾತ್ ಭಗವಂತನ ವಾಣಿಯೇ ವೇದಗಳಾಗಿದ್ದು, ಮೂಲ ವೈದಿಕ ಪರಂಪರೆ ಉಳಿಸಿದಾಗ ಮಾತ್ರ ಸಮಾಜ ಕಟ್ಟಲು ಸಾಧ್ಯ ಎಂದು ಶ್ರೀಮದ್ ಜಗದ್ಗುರು ಶ್ರೀ ಅಭಿನವ ಶಂಕರಭಾರತೀ ಮಹಾಸ್ವಾಮಿಗಳು ಹೇಳಿದ್ದಾರೆ.
ಅವರು ರವೀಂದ್ರನಗರ ಪ್ರಸನ್ನ ಗಣಪತಿ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಅಥರ್ವ ಸಂಹಿತಾ ಪೂರ್ಣಾಹುತಿ ಹಾಗೂ ಚತುರ್ವೇದ ಪಾರಾಯಣ, ಭಜನೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶ್ರೀ ಪ್ರಸನ್ನ ಗಣಪತಿ ಅನುಗ್ರಹ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವೇದ, ಉಪನಿಷತ್ ಜ್ಞಾನಕ್ಕೆ ಸಮಾಜ ಮನ್ನಣೆ ಕೊಡಬೇಕು. ಪ್ರತಿಯೊಂದು ಕಾರ್ಯದಲ್ಲೂ ಕೂಡ ಸಮರ್ಪಣಾ ಮನೋಭಾವ ಇರಬೇಕು. ವೇದ ಎಂಬುದು ಪರಂಪರಾಗತವಾಗಿ ಬಂದಿರುವಂತಹುದು. ಸಮಗ್ರ ವೇದಾಧ್ಯಯನದಿಂದ ಸಮಾಜದ ಕಟ್ಟ ಕಡೆಯ ಗೊಂದಲಕ್ಕೂ ಪರಿಹಾರ ಸಾಧ್ಯವಿದೆ ಎಂದರು.


ಗುರುಕುಲ ಮಾದರಿ ಶಿಕ್ಷಣ ಇಂದಿನ ಸಮಾಜಕ್ಕೆ ಅತ್ಯಂತ ಅವಶ್ಯವಿದೆ. ತಂತ್ರಜ್ಞಾನಗಳ ಹೊಡೆತಕ್ಕೆ ಸಿಲುಕಿ ನಮ್ಮ ಮೂಲ ಪರಂಪರೆ ನಶಿಸಿ ಹೋಗುತ್ತಿದೆ. ವೇದ ಪರಂಪರೆಯನ್ನು ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ವೇದಬ್ರಹ್ಮ ಶ್ರೀ ಶಂಕರ ಘನಪಾಠಿಗಳು ಹಾಗೂ ವಿದ್ವಾನ್ ಹೊಸಹಳ್ಳಿ ವೆಂಕಟರಾಮ್ ಇವರಿಗೆ ಶ್ರೀ ಪ್ರಸನ್ನ ಗಣಪತಿ ಅನುಗ್ರಹ ಪ್ರಶಸ್ತಿಯನ್ನು ಶ್ರೀಗಳು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಶಬರೀಶ್ ಕಣ್ಣನ್, ಶಂಕರ್ ಭಟ್, ಅರ್ಚಕ ವೃಂದ ಮತ್ತು ವಿವಿಧ ಭಜನಾ ಮಂಡಳಿಗಳ ಸದಸ್ಯರು ಭಾಗವಹಿಸಿದ್ದರು.