
ದಾವಣಗೆರೆ: ಲೋಕಸಭೆ ಚುನಾವಣೆಯಲ್ಲಿ ಚಡ್ಡಿ ದೊಸ್ತರಂತೆ ಕೆಲಸ ಮಾಡಿದ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಸದ್ಯ ನಾನೊಂದು ತೀರ ನಿನೊಂದು ತೀರ ಎನ್ನುತ್ತಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ನಡುವೆ ಬಿರುಕು ಉಂಟಾಗಿರುವ ಲಕ್ಷಣಗಳು ಗೋಚರಿಸುತ್ತಿವೆ. ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬಿಜೆಪಿ ನಡೆಸುತ್ತಿರುವ ಹೋರಾಟದಿಂದ ಜೆಡಿಎಸ್ ದೂರ ಉಳಿದಿದೆ. ಹಾಗಾದ್ರೆ ಇಬ್ಬರ ದೋಸ್ತಿ ಖತಂ ಆಗುತ್ತಾ? ಜೆಡಿಎಸ್ ಮುಂದಿನ ನಡೆಯೇನು? ಈ ಕುರಿತು ಸ್ಟೋರಿ ಇಲ್ಲಿದೆ.
ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯನ್ನೇ ದುಡಿಮೆಯಾಗಿ ಮಾಡಿಕೊಂಡAತಿದೆ. ನಿತ್ಯವೂ ಒಂದಿಲ್ಲೊAದು ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು ಜನ ಹೈರಾಣಾಗಿದ್ದಾರೆ. ಜನ ಸಾಮಾನ್ಯರು ನಿತ್ಯವೂ ಒಂದಿಲ್ಲೊಂದು ಬೆಲೆ ಏರಿಕೆಯ ಶಾಕ್ಗೆ ಒಳಗಾಗುತ್ತಿದ್ದಾರೆ. ಆದರೆ, ವಿರೋಧ ಪಕ್ಷಗಳು ಆಡಳಿತ ಪಕ್ಷದ ತಪ್ಪುಗಳನ್ನು ಹಾಗೂ ಬೆಲೆ ಏರಿಕೆಯನ್ನು ಸಮರ್ಥವಾಗಿ ಪ್ರತಿಭಟನೆ ಮಾಡುವಲ್ಲಿ ಎಡವುತ್ತಿದೆ. ಪ್ರತಿಭಟನೆಯ ವಿಷಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ನ ನಡುವೆ ಬಿರುಕು ಮೂಡಿದ್ದು ಬಹಿರಂಗವಾಗಿಯೆ ಜೆಡಿಎಸ್ ಅಸಮಾಧಾನ ಹೊರಹಾಕಿದೆ.
ಸರ್ಕಾರದ ವಿರುದ್ದ ಬಿಜೆಪಿ ಹಿಂದಿನಂತೆ ಪ್ರತಿಭಟನೆ ಮಾಡುತ್ತಿಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು. ಈ ರೀತಿ ಆರೋಪ ಇರುವಾಗಲೇ ಜೆಡಿಎಸ್ ಸಹ ಈ ಪ್ರತಿಭಟನೆಯಿಂದ ಅಂತರ ಕಾಪಾಡಿಕೊಂಡಿದೆ. ಜೆಡಿಎಸ್ ಪಕ್ಷವು ಪ್ರತಿಭಟನೆಯ ವಿಚಾರದಲ್ಲಿ ಅಂತರ ಕಾಪಾಡಿಕೊಂಡಿರುವುದು ಯಾಕೆ ಎನ್ನುವ ಅನುಮಾನ ಎದುರಾಗಿದೆ.


ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಸಹ ರಾಜ್ಯ ಸರ್ಕಾರದ ನಿರಂತರ ಬೆಲೆ ಏರಿಕೆಯನ್ನು ವಿರೋಧಿಸಿ ಸರಣಿ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದ್ದರು. ಇದೀಗ ಬಿಜೆಪಿಯು ಬೆಲೆ ಏರಿಕೆಯನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬುಧವಾರ ಪ್ರತಿಭಟನೆ ನಡೆಸಿದೆ. ಈ ಪ್ರತಿಭಟನೆಗೆ ಜೆಡಿಎಸ್ ಪಕ್ಷವನ್ನು ಆಹ್ವಾನಿಸಿಲ್ಲ ಎಂದು ದೂರಲಾಗಿದೆ.
ಪ್ರತಿಭಟನೆ ಹಾಗೂ ಸಂಕಲ್ಪ ಯಾತ್ರೆಗಳ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ನ ನಡುವೆ ಬಿರುಕು ಮೂಡುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಮುಡಾ ಪ್ರಕರಣದಲ್ಲೂ ಇದೇ ಆಗಿತ್ತು. ಇದೀಗ ಪ್ರತಿಭಟನೆ ವಿಚಾರದಲ್ಲೂ ಇದೇ ಆಗಿದೆ. ಬಸ್, ಮೆಟ್ರೋ, ವಿದ್ಯುತ್, ಹಾಲು, ಮೊಸರು ಹಾಗೂ ಡೀಸೆಲ್ ಸೇರಿದಂತೆ ಹಲವು ಸೇವೆಗಳ ಮತ್ತು ವಸ್ತುಗಳ ಬೆಲೆ ಏರಿಕೆ ಕರ್ನಾಟಕದಲ್ಲಿ ಆಗಿದೆ. ಅಲ್ಲದೆ ಕಾಮಗಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲು ನೀಡಲು ಸರ್ಕಾರ ಮುಂದಾಗಿತ್ತು. ಇದನ್ನು ಬಿಜೆಪಿ ಸದನಲ್ಲೇ ವಿರೋಧ ಮಾಡಿ ಪ್ರತಿಭಟನೆ ನಡೆಸಿತ್ತು. ಆದರೆ,ಜೆಡಿಎಸ್ ಮುಸ್ಲಿಂ ಮೀಸಲಾತಿಗೆ ಸಮ್ಮತಿಸಿ ಭಿನ್ನರಾಗ ಹಾಡಿದೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಮೈತ್ರಿ ದಿನೇದಿನೆ ಒಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ಹೋಗಿ ತಲುಪಲಿದೆ ಎನ್ನುವುದು ಕಾಯ್ದು ನೋಡಬೇಕಿದೆ.