
ದಾವಣಗೆರೆ: ದಾವಣಗೆರೆ ಕಮಲಪಾಳಯದಲ್ಲಿ ದಿನೇ ದಿನೇ ಬಿಕಟ್ಟು ಉದ್ಬವಿಸುತ್ತಿದ್ದು, ಈಗ ತಾರಕಕ್ಕೆ ಏರಿದೆ. ರೇಣುಕಾಚಾರ್ಯ, ಸಿದ್ದೇಶ್ವರ ಬಣದ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಸ್ವ ಪಕ್ಷದ ನಾಯಕರ ವಿರುದ್ಧ ಆ ಪಕ್ಷದ ನಾಯಕರೇ ಕೆಂಡಕಾರಿದ್ದು, ಈಗ ಬಿಜೆಪಿ ಮುಖಂಡ ಯಶವಂತರಾವ್ ಜಾಧವ್ ಅವರನ್ನು ಪಕ್ಷದ ಜಿಲ್ಲಾ ಸಹ ಚುನಾವಣಾಧಿಕಾರಿ ಜವಾಬ್ದಾರಿಯಿಂದ ಬಿಡುಗಡೆಗೊಳಿಸಿ ಪಕ್ಷದ ರಾಜ್ಯ ಚುನಾವಣಾಧಿಕಾರಿ ಗಣೇಶ್ ಕಾರ್ಣಿಕ್ ನೋಟಿಸ್ ಹೊರಡಿಸಿದ್ದಾರೆ.
‘ಜಿಲ್ಲೆಯಲ್ಲಿ ಸಂಘಟನಾ ಪರ್ವದ ಯಶಸ್ವಿ ಕಾರ್ಯ ನಿರ್ವಹಣೆಗಾಗಿ ನಿಮ್ಮನ್ನು (ಯಶವಂತರಾವ್ ಜಾಧವ್) ಈ ಹಿಂದೆ ಜಿಲ್ಲಾ ಸಹ ಚುನಾವಣಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಜಿಲ್ಲೆಯ ಮಂಡಲಗಳ ಸಮಿತಿ ರಚನೆಯ ಸಂದರ್ಭದಲ್ಲಿ ನೀವು ನಿಯಮ ಮೀರಿ, ಏಕಪಕ್ಷೀಯವಾಗಿ 5 ಮಂಡಲಗಳಿಗೆ ಅಧ್ಯಕ್ಷರನ್ನು ಘೋಷಿಸಿರುವುದು ರಾಜ್ಯ ಸಮಿತಿಯ ಗಮನಕ್ಕೆ ಬಂದಿದೆ.
ವಿಚಾರಣೆಯನ್ನು ಕಾಯ್ದಿರಿಸಿ, ಪಕ್ಷದ ಜಿಲ್ಲಾ ಸಹ ಚುನಾವಣಾಧಿಕಾರಿ ಜವಾಬ್ದಾರಿಯಿಂದ ನಿಮ್ಮನ್ನು ಬಿಡುಗಡೆಗೊಳಿಸಲಾಗಿದೆ. ನೀವು ರಚಿಸಿರುವ ಮಂಡಲ ಸಮಿತಿಯನ್ನು ಅಸಿಂಧು ಗೊಳಿಸಲಾಗಿದೆ’ ಎಂದು ನೋಟಿಸ್ನಲ್ಲಿ ತಿಳಿಸಿದ್ದಾರೆ.



