


ದಾವಣಗೆರೆ : ಎಲ್ಲಾ ಧರ್ಮಗಳು ಸಮಾನತೆ ಹಾಗೂ ಭ್ರಾತೃತ್ವದ ಬಗ್ಗೆ ಹೇಳಿವೆ ಜೊತೆಗೆ ದಯವೇ ಧರ್ಮದ ಮೂಲ ಎಂದು ಸಾರಿವೆ ಆದ್ದರಿಂದಧರ್ಮದ ಹೆಸರಿನಲ್ಲಿ ಗಲಭೆ ಸೃಷ್ಠಿಸುವುದು ಸರಿಯಲ್ಲ ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದಾರೆ.
ಅವರು ಜಗಳೂರು ತಾಲ್ಲೂಕಿನ ಕ್ಯಾಸೇನಹಳ್ಳಿ ಗ್ರಾಮದಲ್ಲಿ ಭಾನುವಾರ ನೂತನ ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು
ಇತ್ತೀಚೆಗೆ ಕಾಶ್ಮೀರದ ಪಹಲ್ಗಾಮ್ ನಲ್ಲಿ ಧರ್ಮದ ಹೆಸರಿನಲ್ಲಿ ದುರಂತ ನಡೆದಿದೆ ಇದು ಖಂಡನೀಯ.ಎಲ್ಲಾ ಧರ್ಮಗಳು ದಯವೇ ಧರ್ಮದ ಮೂಲ ಎಂದು ಹೇಳಿರುವುದನ್ನು ಮರೆಯಬಾರದು ಎಂದರು.ಗ್ರಾಮೀಣಭಾಗದಲ್ಲಿ ಎಲ್ಲರನ್ನು ಒಳಗೊಂಡು ದೇವಸ್ಥಾನದ ಕೆಲಸ ಕಾರ್ಯ ಮಾಡಿರುವುದು ಶ್ಲಾಘನೀಯ ಹಾಗೂ ಮಾದರಿಯಾಗಿದೆ.ಯಾವುದೇ ಬೇಧಭಾವವಿಲ್ಲದೇ ಗ್ರಾಮದಲ್ಲಿರುವ ಎಲ್ಲರೂ ಒಳಗೊಂಡು ದೇವಸ್ಥಾನದ ನಿರ್ಮಾಣ ಮಾಡಿದ್ದಾರೆ ಈ ಮೂಲಕ ನಮ್ಮ ಪರಂಪರೆ,ಸಂಸ್ಕೃತಿ ಎತ್ತಿಹಿಡಿಯುವ ಕೆಲಸ ಗ್ರಾಮೀಣಭಾಗದ ಜನರು ಮಾಡುತ್ತಿದ್ದಾರೆ.

ಯಾವುದೇ ಜಾತಿ,ಮತ,ಲಿಂಗ ಬೇಧಭಾವ ಬೇಡ ನಾವೆಲ್ಲರೂ ಮಾನವರು ಅದಕ್ಕಾಗಿ ನಮಗೆ ಮಾನವೀಯ ಮೌಲ್ಯಗಳು ಮುಖ್ಯ.ಮೇಲುಕೀಳು ಭಾವನೆ ಬೇಡ ನಾವೆಲ್ಲ ಭಾರತಾಂಬೆಯ ಮಕ್ಕಳು ಎಂಬ ಭಾವನೆ ಬರಬೇಕು ಆಗ ನಮ್ಮಸಮಾಜ,ದೇಶ ಉದ್ದಾರವಾಗಲು ಸಾಧ್ಯ.ಧರ್ಮವನ್ನು ಒಡೆದು ರಾಜಕಾರಣದಲ್ಲಿ ಯಶಸ್ಸು ಪಡೆಯಬಹುದು ಅಷ್ಟೇ ಅದರಿಂದ ಬೇರೆ ಯಾವ ಪ್ರಯೋಜನವೂ ಇಲ್ಲ ಆದ್ದರಿಂದ ನಾವೆಲ್ಲಾ ಒಂದೇ ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ್ ಖರ್ಗೆಯವರು ಜನಗಣತಿ ಹಾಗೂ ಜಾತಿಗಣತಿಯೊಂದಿಗೆ ಆರ್ಥಿಕ,ಶೈಕ್ಷಣಿಕ ಸಮೀಕ್ಷೆ ಬಗ್ಗೆಯೂ ಸೇರಿಸಬೇಕೆಂದು ಕೇಂದ್ರಕ್ಕೆ ಒತ್ತಾಯಿಸಿದ್ದಾರೆ.ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತಮ ಆಡಳಿತ ನೀಡುತ್ತಿದ್ದಾರೆ.ಗ್ಯಾರಂಟಿ ಯೋಜನೆಗಳ ಮೂಲಕ ಜನಪರ ಕೆಲಸ ಮಾಡುತ್ತಿದ್ದಾರೆ.ಸರ್ವರಿಗೂ ಸಮಬಾಳು ಸಮಪಾಲು ಜಾರಿಗೆ ಮಾಡಿದ್ದಾರೆಂದರು.
ಕೇಂದ್ರ ಸರ್ಕಾರ ತೈಲಬೆಲೆಯೊಂದಿಗೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಮಾಡಿದೆ ಇದರಿಂದ ಜನಸಾಮಾನ್ಯರು ಜೀವನ ನಡೆಸುವುದು ಕಷ್ಟವಾಗಿದೆ.ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿತ್ತು ಎಂದರು.
ಗ್ರಾಮೀಣಭಾಗದ ಮಹಿಳೆಯರು ಸ್ವಸಹಾಯ ಸಂಘಗಳಲ್ಲಿ ನೊಂದಣಿ ಮಾಡಿಕೊಂಡು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು.
ನಮ್ಮ ಎಸ್ ಎಸ್ ಕೇರ್ ಟ್ರಸ್ಟ್ ಮೂಲಕ ಜನರಿಗೆ ಡಯಾಲಿಸಿಸ್,ಹೆರಿಗೆ ಸೇವೆ ಹಾಗೂ ಕಣ್ಣಿನಪೊರೆ ಚಿಕಿತ್ಸೆ ನೀಡಲಾಗುತ್ತಿದೆ ಬಿಪಿಎಲ್ ಕಾರ್ಡ್ ದಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ವೇದಿಕೆಯಲ್ಲಿ ಹದಡಿಮಠದ ಶ್ರೀ ಸದ್ಗುರು ಪರಮಹಂಸ ಮುರಳೀಧರ ಸ್ವಾಮೀಜಿ,ಶಾಸಕ ಬಿ.ದೇವೇಂದ್ರಪ್ಪ,ಕೆ.ಪಿ ಪಾಲಯ್ಯ,ಅಸಗೋಡು ಜಯಸಿಂಹ,ಸೊಕ್ಕೆ ನಾಗರಾಜ್,ಬಿಸ್ತುವಳ್ಳಿ ಬಾಬು,ವೇಣುಗೋಪಾಲ ರೆಡ್ಡಿ, ವೀರಣ್ಣ,ಮಂಜುನಾಥ್,ಷಂಶೀರ್ ಅಹಮ್ಮದ್ ಹಾಗೂ ಕ್ಯಾಸನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.
….
ಐಎಎಸ್,ಕೆಎಎಸ್ ಹಾಗೂ ಐಪಿಎಸ್ ಗೆ ಉಚಿತ ತರಬೇತಿ
ದಾವಣಗೆರೆ ಜಿಲ್ಲೆಯ ಆಸಕ್ತ ಯುವಜನರಿಗಾಗಿ ಐಎಎಸ್,ಕೆಎಎಸ್ ಹಾಗೂ ಐಪಿಎಸ್ ಗೆ ಉಚಿತವಾಗಿ ತರಬೇತಿ ನೀಡಲಾಗುತ್ತದೆ ಯುವಸಮೂಹ ಇದರ ಪ್ರಯೋಜನ ಪಡೆದುಕೊಳ್ಳಬೇಕು.ಮುಂದಿನ ತಿಂಗಳು ಈ ತರಬೇತಿ ಪ್ರಾರಂಭವಾಗಲಿದೆ.ಸುಮಾರು ಏಳುತಿಂಗಳು ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ ತಾಲ್ಲೂಕು ಮಟ್ಟದಲ್ಲಿ ಪ್ರವೇಶ ಪರೀಕ್ಷೆ ನಡೆಸಲಾಗುವುದು.
– ಡಾ.ಪ್ರಭಾ ಮಲ್ಲಿಕಾರ್ಜುನ್
ಸಂಸದರು.ದಾವಣಗೆರೆ ಲೋಕಸಭಾ ಕ್ಷೇತ್ರ