
ದಾವಣಗೆರೆ : ಮನೆ ಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೇ
ಸ್ತ್ರೀ ಅಂದರೆ ಅಷ್ಟೇ ಸಾಕೇ ?!!
ಹೆಣ್ಣು ಸಮಾಜದ ಕಣ್ಣು, ಬದುಕಿನ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವ ಗಟ್ಟಿಗಿತ್ತಿ ಆಕೆ. ಅದಕ್ಕೇ ಹೇಳುವುದು “ನಿನಗೆ ಬೇರೆ ಹೆಸರು ಬೇಕೇ ಸ್ತ್ರೀ ಅಂದರೆ ಅಷ್ಟೇ ಸಾಕೇ”…. ಎಂದು. ಇಂದು ಎಲ್ಲಾ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸಿರುವ ಆಕೆಯ ಸ್ಥೈರ್ಯದ ವಿವರಣೆಗೆ ಬೇರೆ ಪದಗಳು ಬೇಕಿಲ್ಲ.
ಪ್ರತೀ ವರ್ಷ ಮಾರ್ಚ್ 8 ರಂದು ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಒಂದು ಹೆಣ್ಣು ತಾಯಿಯಾಗಿ, ಪತ್ನಿಯಾಗಿ, ಮಗಳಾಗಿ, ಗೆಳತಿಯಾಗಿ ಎಲ್ಲ ಪಾತ್ರವನ್ನೂ ತುಂಬುವ ಆಕೆಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಂದು ದಿನ ಮೀಸಲಿದೆ. ಅದುವೇ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ.


ಮಹಿಳಾ ದಿನಾಚರಣೆಯು 20 ನೇ ಶತಮಾನದಲ್ಲಿ ನಡೆದ ಕಾರ್ಮಿಕ ಚಳುವಳಿಯ ಹಿನ್ನಲೆಯನ್ನು ಹೊಂದಿದೆ. 20 ನೇ ಶತಮಾನದ ಆರಂಭದಲ್ಲಿ ನಡೆದ ಕಾರ್ಮಿಕ ಚಳುವಳಿಯು ಆ ಕಾಲದ ವೇಗದ ಕೈಗಾರಿಕೀಕರಣದ ಸಮಯದಲ್ಲಿ ಕೆಲಸದ ಪರಿಸ್ಥಿತಿಗಳನ್ನು ದುರುಪಯೋಗಪಡಿಸಿಕೊಳ್ಳುವ ವಿರುದ್ಧದ ಪ್ರತಿಭಟನೆಗೆ ಕಾರಣವಾಗಿತ್ತು. ಅಲ್ಲದೇ ಅದು ಮಹಿಳಾ ದಿನಾಚರಣೆಯ ಆರಂಭಕ್ಕೂ ಮುನ್ನುಡಿಯಾಗಿತ್ತು ಎಂದು ಇತಿಹಾಸ ಹೇಳುತ್ತದೆ.
“ಯತ್ರ ನಾರ್ಯಸ್ತು ಪೂಜ್ಯಂತೆ, ತತ್ರ ರಮಂತೇ ದೇವತಾಃ” ಎಲ್ಲಿ ನಾರಿಯನ್ನು ಪೂಜಿಸಲಾಗುತ್ತದೋ ಅರ್ಥಾತ್ ಗೌರವದಿಂದ ನಡೆಸಿಕೊಳ್ಳಲಾಗುತ್ತದೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂದು ನಮ್ಮ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ನಮಗೆ ಕಲಿಸಿದೆ. ದೇಶ ಆಳುವುದರಿಂದ ಹಿಡಿದು ಕುಟುಂಬದ ಪ್ರತೀ ಕೆಲಸವನ್ನು
ಅಚ್ಚುಕಟ್ಟಾಗಿ ನಿರ್ವಹಿಸಬಲ್ಲ ಶಕ್ತಿ, ತಾಳ್ಮೆ, ಉತ್ಸಾಹ, ಧೈರ್ಯ ಮಹಿಳೆಗಿದೆ. ಇಷ್ಟರ ಮಧ್ಯೆಯೂ ತುಳಿತಕ್ಕೊಳಗಾಗುತ್ತಿರುವ, ಕೌಟುಂಬಿಕ ದೌರ್ಜನ್ಯಕ್ಕೆ ಬಲಿಯಾಗುತ್ತಿರುವ ಅನೇಕ ಮಹಿಳೆಯರು ನಮ್ಮ ಮಧ್ಯೆ ಇದ್ದಾರೆ. ಅವರಿಗೆ ಧೈರ್ಯ ನೀಡಿ, ಮಹಿಳೆಯರಿಗಿರುವ ತನ್ನ ಹಕ್ಕಿನ ಪರಿಚಯ ಮಾಡಿಸಿ ಆಕೆಯನ್ನು ಸ್ವಾವಲಂಬಿ ಮಾಡುವ ಉದ್ದೇಶದಿಂದ, ಆಕೆಯ ಜೀವನವನ್ನು ಸುಂದರಗೊಳಿಸುವ ಉದ್ದೇಶದಿಂದ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಎಷ್ಟೋ ರಾಷ್ಟ್ರಗಳು ತಮ್ಮ ದೇಶಕ್ಕೆ ಕೊಡುಗೆ ನೀಡಿದ ಮಹಿಳೆಯರ ಸಾಧನೆಯನ್ನು ತಮ್ಮ ಪಠ್ಯಕ್ರಮದಲ್ಲಿ ಅಳವಡಿಸಿಕೊಂಡಿವೆ. ಉದಾಹರಣೆಗೆ ನಮ್ಮ ಕರ್ನಾಟಕ ರಾಜ್ಯದಲ್ಲಿ ವೀರ ವನಿತೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ವಚನ ಸಾಹಿತ್ಯ ಕ್ಷೇತ್ರಕ್ಕೆ ಅದ್ಭುತ ಕೊಡುಗೆ ನೀಡಿದ ಶರಣೆ ಅಕ್ಕಮಹಾದೇವಿ ಹೀಗೆ ಹಲವರ ಕುರಿತಂತೆ ಶಾಲಾ ಕಾಲೇಜುಗಳಲ್ಲಿ ಪಾಠಗಳಿದ್ದು ಅವರ ಜೀವನಕ್ರಮ ಮತ್ತು ಸಾಧನಗಳ ಸ್ಮರಣಾರ್ಥವಾಗಿವೆ ಮತ್ತು ಯುವ ಪೀಳಿಗೆಗೆ ಸ್ಪೂರ್ತಿಯಾಗಿವೆ.
ಬೇರೆಯವರ ಮೇಲೆ ಅವಲಂಬಿತವಾಗಿರದೇ ತನ್ನ ಆತ್ಮಗೌರವವನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬ ಮಹಿಳೆಯೂ ಇಂದು ಪರಿಶ್ರಮಪಡುತ್ತಿದ್ದಾಳೆ. ಇಂತಹ ಮಹಿಳೆಯರಿಗೆ ಬೆಂಬಲವಾಗಿ ನಿಲ್ಲುವ ಸಮಾಜ ನಮ್ಮದಾಗಬೇಕು. ಹೆಣ್ಣಾಗಿ ಹುಟ್ಟಿರುವುದೇ ಒಂದು ಸೌಭಾಗ್ಯ ಮತ್ತು ಮಹಾಶಕ್ತಿಯ ಪ್ರತೀಕ ಎನ್ನುವಂತೆ ಪ್ರತೀ ಹೆಣ್ಣು ಸಂತಸದಿಂದ ಸಂಭ್ರಮಿಸಬೇಕು ಮತ್ತು ಸಂಭ್ರಮಿಸೋಣ. ಎಲ್ಲರಿಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು.
ಲೇಖಕಿ:
ರಾಧಾ ಎಂ.
ಆಂಗ್ಲ ಭಾಷಾ ಶಿಕ್ಷಕಿ
ಸ.ಹಿ.ಪ್ರಾ.ಶಾಲೆ, ನಿಟ್ಟುವಳ್ಳಿ
ದಾವಣಗೆರೆ
ಮೊ: 8660686986