ದಾವಣಗೆರೆ: ದಾವಣಗೆರೆ ತಾಲೂಕಿನ ಕೊಗ್ಗನೂರು ಗ್ರಾಮದ ನಿಂಗಮ್ಮ ಅವರಿಗೆ ಸೇರಿದ ಜಮೀನಿನ ಪಹಣಿಯಲ್ಲಿ 26 ಗುಂಟೆ ಜಾಗವನ್ನು ಮೇ.27 ರೊಳಗೆ ಸರಿಪಡಿಸಬೇಕು. ಇಲ್ಲ ವಾದಲ್ಲಿ ದಾವಣಗೆರೆ ತಹಶೀಲ್ದಾರ್ ಕಚೇರಿ ಎದುರು ಉಗ್ರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷ ಬುಳ್ಳಾಪುರದ ಹನುಮಂತಪ್ಪ ಎಚ್ಚರಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಗ್ಗನೂರು ಗ್ರಾಮದ ನಿಂಗಮ್ಮ, ಬಸಮ್ಮ, ಕೆಂಚಪ್ಪ ಅವರಿಗೆ ಸೇರಿದ ಸರ್ವೇ ನಂಬರ್ 1 ರಲ್ಲಿ 2 ಎಕರೆ 19 ಗುಂಟೆ ಜಮೀನಿದ್ದು, ರಾಷ್ಟ್ರೀಯ ಹೆದ್ದಾರಿಗೆ 14 ಗುಂಟೆ ಹೋಗಿದೆ. ಆದರೆ, ಪಹಣಿಯಲ್ಲಿ 12 ಗುಂಟೆ ತೋರಿಸುತ್ತಿದೆ. ಕೊಗ್ಗನೂರು ಬಸಮ್ಮ ಅವರಿಂದ ಎರಡು ಗುಂಟೆ ಇಂಡೀಕರಣ ಮಾಡಿ, ನಿಂಗಮ್ಮ ಅವರಿಗೆ ಸೇರಿದ ಜಮೀನಿಗೆ 26 ಗುಂಟೆಯನ್ನು ಪಹಣಿಯಲ್ಲಿ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಪಹಣಿ ಸರಿಪಡಿಸುವಂತೆ ಕೋರಿ ನಿಂಗಮ್ಮ ಮತ್ತು ಅವರ ಮಗ ಹಾಲೇಶ್ ಕಳೆದ ಒಂದು ವರ್ಷದಿಂದ ತಹಶೀಲ್ದಾರ್ ಕಚೇರಿ ಗೆ ಅಲೆದಾಡುತ್ತಿದ್ದಾರೆ. ರೈತಸಂಘದ ಗಮನಕ್ಕೆ ತಂದ ನಂತರ ತಹಶೀಲ್ದಾರ್ ಅವರನ್ನು ಭೇಟಿ ಮಾಡಿದಾಗ ಒಂದು ವಾರದಲ್ಲೇ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ, ಈವರೆಗೆ ಆಗಿಲ್ಲ ಎಂದು ತಿಳಿಸಿದರು.
ನಮ್ಮ ಸಂಘದಿಂದ ಹಮ್ಮಿಕೊಳ್ಳಲಾಗುವ ಹೋರಾಟದ ಬ್ಯಾನರ್ ಅನ್ನು ಮೇ. 20 ರಂದು ತಹಶೀಲ್ದಾರ್ ಕಚೇರಿ ಮುಂದೆ ಕಟ್ಟ ಲಾಗುವುದು. ನಮ್ಮ ಹೋರಾಟ ಮುಗಿಯುವ ವರೆಗೆ ನಮ್ಮ ಸಂಘದ ಬ್ಯಾನರ್ ಗೆ ಏನೇಯಾದರೂ ತಹಶೀಲ್ದಾರ್ ಅವರೇ ನೇರ ಹೊಣೆ ಆಗುತ್ತಾರೆ ಎಂದು ಎಚ್ಚರಿಸಿದರು.
ಎಸ್.ಟಿ. ಪರಮೇಶ್ವರಪ್ಪ, ಐಗೂರು ಶಿವಮೂರ್ತಪ್ಪ, ಕೊಗ್ಗನೂರು ಹನುಮಂತಪ್ಪ, ಕರಿಲಕ್ಕೇನಹಳ್ಳಿ ಹನುಮಂತಪ್ಪ, ಸಿಡ್ಲಪ್ಪ ಇತರರು ಇದ್ದರು.