ದಾವಣಗೆರೆ: ಅನ್ಯ ಕೋಮಿನ ಯುವತಿಯನ್ನು ಬೈಕ್ನಲ್ಲಿ ಕೂಡಿಸಿಕೊಂಡು ಹೋಗುತ್ತಿದ್ದ ಪರಿಶಿಷ್ಟ ಪಂಗಡದ ಯುವಕನನ್ನು ಬಲವಂತವಾಗಿ ಹಿಡಿದೊಯ್ದ ಸುಮಾರು 100 ಕ್ಕೂ ಹೆಚ್ಚು ಜನರ ಗುಂಪು ತಾಜ್ ಪ್ಯಾಲೇಸ್ ನ ಪಕ್ಕದಲ್ಲಿರುವ ಮೆಹಕ್ ಶಾದಿ ಮಹಲ್ ನಲ್ಲಿ ಮಾರಣಾಂತಿಕ ಹಲ್ಲೆ ಮಾಡಿದ್ದು, ನೈತಿಕ ಪೊಲೀಸ್ಗಿರಿ ಮೆರೆದ ಕಿಡಿಗೇಡಿಗಳನ್ನು 48 ಗಂಟೆಗಳಲ್ಲಿ ಬಂಧಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಶ್ರೀರಾಮ ಸೇನೆ ಹಾಗೂ ಹಿಂದೂ ಜಾಗರಣ ವೇದಿಕೆ ವತಿಯಿಂದ ಆಗ್ರಹಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಣಿಕಂಠ ಸರ್ಕಾರ, ಜಾಲಿ ನಗರ ನಿವಾಸಿ ಶ್ರೀನಿವಾಸ (೩೦ ವರ್ಷ) ಮಾರಣಾಂತಿಕ ಹಲ್ಲೆಗೆ ಒಳಗಾಗಿರುವ ಯುವಕ. ಇನ್ನು 4 ತಿಂಗಳಿಗೆ ತಮ್ಮದೇ ಜಾತಿ ಯುವತಿ ಜೊತೆ ಮದುವೆಯಾಗಬೇಕಿದ್ದ ನತದೃಷ್ಟ ಶ್ರೀನಿವಾಸ ಶನಿವಾರ ತಮ್ಮ ನೆರೆ ಮನೆಯ ಯುವತಿಯು ಮನೆಯವರೆಗೆ ಬಿಡುವಂತೆ ಕೇಳಿದ್ದರಿಂದ ಬೈಕ್ನಲ್ಲಿ ಹತ್ತಿಸಿಕೊಂಡ ಮೇಲೆ ಅನ್ಯ ಕೋಮಿನವರು ಮಾರಣಾಂತಿಕ ಹಲ್ಲೆ ಮಾಡಿದ್ದು, ಜೀವನಕ್ಕೆ ಆಧಾರವಾಗಿದ್ದ ಮಗನ ಸ್ಥಿತಿಯನ್ನು ಕಂಡ ತಾಯಿ ಹನುಮಂತಮ್ಮ ಕಣ್ಣೀರು ಹಾಕುತ್ತಿದ್ದಾರೆ ಎಂದು ಹೇಳಿದರು.
ರಾತ್ರಿ ೮ ರ ನಂತರ ಶ್ರೀನಿವಾಸನ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಎಷ್ಟು ಹೊತ್ತಾದರೂ ಆತ ಮನೆಗೆ ಬರದಿದ್ದಾಗ ಮನೆಯವರು ಎಲ್ಲಾ ಕಡೆ ಹುಡುಕಿದರೂ ಆತನ ಸುಳಿವು ಸಿಕ್ಕಿರಲಿಲ್ಲ. ಅಷ್ಟರಲ್ಲಿ ಇಲ್ಲಿನ ಶಿಬಾರದ ಬಳಿ ಶ್ರೀ ಮೈಲಾರ ಲಿಂಗೇಶ್ವರ ದೇವಸ್ಥಾನ ಬಳಿ ತಮ್ಮ ಮನೆ ಸಮೀಪದ ಅನ್ಯ ಕೋಮಿನ ಯುವತಿ ಅಣ್ಣ ಮನೆವರೆಗೆ ಡ್ರಾಪ್ ಕೊಡು ಎಂಬುದಾಗಿ ಕೇಳಿದ್ದರಿಂದ ಶ್ರೀನಿವಾಸ ಬೈಕ್ನಲ್ಲಿ ಹತ್ತಿಸಿಕೊಂಡಿದ್ದಾನೆ.
ಅನ್ಯ ಕೋಮಿನ ಕಿಡಿಗೇಡಿಗಳು ಯುವತಿಯನ್ನು ಹತ್ತಿಸಿಕೊಂಡಿದ್ದ ಶ್ರೀನಿವಾಸನನ್ನು ಬೈಕ್ ಸಮೇತ ಬಲವಂತವಾಗಿ ತಾಜ್ ಪ್ಯಾಲೇಸ್ಗೆ ಕರೆದೊಯ್ದು, ರಾತ್ರಿ ೮.೩೦ ರಿಂದ ತಡರಾತ್ರಿವರೆಗೂ ನೂರಾರು ಜನ ಸೇರಿ, ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಶ್ರೀನಿವಾಸನಿಗೆ ಯಾವುದೋ ಮಾತ್ರೆ ಹಾಕಿ, ಕುಡಿಸಿದ್ದಾರೆ. ಆತನಿಗೆ ಮೈಮೇಲೆ ಪ್ರಜ್ಞೆ ಇಲ್ಲದಂತೆ ಮಾಡಿ, ತೀವ್ರ ಹಲ್ಲೆ ಮಾಡಿದ್ದಾನೆ. ಕಡೆಗೆ ಆತ ಸತ್ತು ಹೋಗಿದ್ದಾರೆ. ಬೆಳಗಿನ ಜಾವ ಎಚ್ಚರಗೊಂಡ ಶ್ರೀನಿವಾಸ ತೆವಳುತ್ತಲೇ ರಸ್ತೆಗೆ ಬಂದು, ದಾರಿ ಹೋಕರ ಮೊಬೈಲ್ ಪಡೆದು ತಮ್ಮ ಮನೆಯವರಿಗೆ ವಿಷಯ ತಿಳಿಸಿದ್ದಾನೆ. ತಕ್ಷಣವೇ ಸಂಬಂಧಿಗಳು ಸ್ಥಳಕ್ಕೆ ಧಾವಿಸಿ, ಗಾಯಾಳು ಶ್ರೀನಿವಾಸನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಪರಿಶಿಷ್ಟ ಪಂಗಡದ ಶ್ರೀನಿವಾಸನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಆತ ಸತ್ತಿದ್ದಾನೆಂದು ರಾತ್ರೋರಾತ್ರಿ ಬನಶಂಕರಿ ಬಡಾವಣೆ ಬಳಿ ಬಿಸಾಡಿದ್ದ ಕಿಡಿಗೇಡಿಗಳು ಪರಾರಿಯಾಗಿದ್ದರು.
ಪೊಲೀಸರು ರಾತ್ರಿ ಹುಡುಕಲಿಲ್ಲ
ಎಲ್ಲಿ ಕೊಲೆ ಕೇಸ್ ತಮ್ಮ ಮೈಮೇಲೆ ಬರುತ್ತದೋ ಎಂಬ ಭಯದಲ್ಲಿ ತಮ್ಮ ಕೋಮಿನ ಯುವತಿಯಿಂದ ಮಹಿಳಾ ಪೊಲೀಸ್ ಠಾಣೆಯಲ್ಲಿ ಶ್ರೀನಿವಾಸನ ವಿರುದ್ಧ ಪೋಕ್ಸೋ ಪ್ರಕರಣದ ದೂರು ದಾಖಲಿಸಿದ್ದಾರೆ. ರಾತ್ರೋರಾತ್ರಿ ಎಫ್ಐಆರ್ ದಾಖಲಿಸಲು ಮುತುವರ್ಜಿ ತೋರಿದ್ದ ಪೊಲೀಸರು ರಾತ್ರಿ ಯೇ ಶ್ರೀನಿವಾಸನನ್ನು ಹುಡುಕಿ, ಆಕಸ್ಮಾತ್ ಠಾಣೆಗೆ ಕರೆ ತಂದು, ಆಕಸ್ಮಾತ್ ಆತ ಸಾವನ್ನಪ್ಪಿದರೆ ಲಾಕಪ್ ಡೆತ್ ಅಂತಾ ಆಗುತ್ತದೆಂಬ ಕಾರಣಕ್ಕೆ ಹುಡುಕುವ ಪ್ರಯತ್ನವನ್ನೇ ಮಾಡಿಲ್ಲ ಎಂದು ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಣಿಕಂಠ ಸರ್ಕಾರ ಆರೋಪಿಸಿದರು.
ತಾಜ್ ಪ್ಯಾಲೇಸ್ ನಲ್ಲೇ ಬೈಕ್ ಇದೆ
ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಸಹಸಂಚಾಲಕ ಸತೀಶ್ ಪೂಜಾರಿ ಮಾತನಾಡಿ, ಅನ್ಯ ಕೋಮಿನ ಬಾಬು, ಖಾಲಿದ್ ಪೈಲ್ವಾನ್ ಸೇರಿದಂತೆ ನೂರಾರು ಜನ ಕಿಡಿಗೇಡಿಗಳ ಗುಂಪು ಪರಿಶಿಷ್ಟ ಪಂಗಡದ ದಲಿತ ಯುವಕ ಶ್ರೀನಿವಾಸದ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಇದು ನೈತಿಕ ಪೊಲೀಸ್ಗಿರಿ ಅಲ್ಲದೇ ಮತ್ತೇನು? ಶ್ರೀನಿವಾಸನ ಮೊಬೈಲ್ ಕಸಿದುಕೊಂಡಿದ್ದು, ಬೈಕ್ ಅಲ್ಲೇ ತಾಜ್ ಪ್ಯಾಲೇಸ್ನಲ್ಲೇ ಇದೆ.
ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಇವೆ
ಶ್ರೀನಿವಾಸನನ್ನು ಬಲವಂತವಾಗಿ ಎಳೆದೊಯ್ದಿರುವುದು ಸೇರಿದಂತೆ ಸಾಕಷ್ಟು ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಪೊಲೀಸರಿಗೆ ಲಭ್ಯವಾಗಿದೆ. ಘಟನೆ ವಿಷಯ ತಿಳಿಯುತ್ತಿದ್ದ ಶ್ರೀರಾಮ ಸೇನೆ, ಭಜರಂಗ ದಳ, ಹಿಂದು ಜಾಗರಣಾ ವೇದಿಕೆ ಸೇರಿದಂತೆ ಹಿಂದು ಪರ ಸಂಘಟನೆಗಳ ಮುಖಂಡರಾದ ಮಣಿಕಂಠ ಸರ್ಕಾರ್, ಸತೀಶ ಪೂಜಾರಿ ಸೇರಿದಂತೆ ಕಾರ್ಯಕರ್ತರು ಆಸ್ಪತ್ರೆ ಬಳಿ ಜಮಾಯಿಸಿದ ನಂತರ ಪೊಲೀಸ್ ಅಧಿಕಾರಿಗಳು ಬಂದು, ಗಾಯಾಳುವಿನ ಹೇಳಿಕೆ ಪಡೆಯುತ್ತಿದ್ದಾರೆ ಎಂದು ದೂರಿದರು.
ಅಣ್ಣ, ತಂಗಿಯರ ಸಂಬಂಧವೇ ಇಲ್ಲ
ಗಾಯಾಳು ಶ್ರೀನಿವಾಸನ ಸ್ಥಿತಿ ಗಮನಿಸಿದರೆ ಆತನಿಗೆ ಗಂಭೀರ ಪೆಟ್ಟು ಬಿದ್ದಿವೆಯೆಂದು ವೈದ್ಯರು ಹೇಳುತ್ತಿದ್ದಾರೆ. ಪ್ರಜ್ಞೆ ಇಲ್ಲದವನಂತೆ ನೋವಿನಿಂದ ಶ್ರೀನಿವಾಸ ಹೊರಳಾಡುತ್ತಿದ್ದಾನೆ. ಅಣ್ಣ ಮನೆವರೆಗೆ ಡ್ರಾಪ್ ಮಾಡು ಅಂತಾ ಕೇಳಿದ ಯುವತಿಗೆ ಬೈಕ್ ನಲ್ಲಿ ಹತ್ತಿಸಿಕೊಂಡಿದ್ದೇ ತಪ್ಪಾ? ಅಣ್ಣ, ತಂಗಿ ಸಂಬಂಧ, ಬೆಲೆಯೂ ಇಂತಹ ಕಿಡಿಗೇಡಿಗಳಿಗೆ ಗೊತ್ತಿಲ್ಲವೇ. ಪಶುವಿಗಿಂತ ಕಡೆಯಾಗಿ ಶ್ರೀನಿವಾಸದ ಮೇಲೆ ಹಲ್ಲೆ ಮಾಡಿದ್ದಾರೆ. ಗಾಯಾಳು ಹಾಗೂ ಆತನ ತಾಯಿ ಹನುಮಂತಮ್ಮ ನೀಡಿದ ದೂರನ್ನು ಪೊಲೀಸರು ದಾಖಲಿಸಿಕೊಂಡಿ
ದ್ದಾರ ಎಂದರು.
ದಲಿತ ಯುವಕ ಶ್ರೀನಿವಾಸನನ್ನು ಎಳೆದೊಯ್ದು, ಮಾರಣಾಂತಿಕ ಹಲ್ಲೆ ಮಾಡಿದ ಜಾಗವಾದ ಮೆಹಕ್ ಶಾದಿ ಮಹಲ್ ಅನ್ನು ಬಂದ್ ಮಾಡಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಇದು ೨ನೇ ಘಟನೆಯಾಗಿದೆ. ಪೊಲೀಸ್ ಅಧಿಕಾರಿ ವಿರುದ್ಧವೇ ಕಾಂಗ್ರೆಸ್ ಮುಖಂಡರು ಹಾದಿಬೀದಿಯಲ್ಲಿ ಗಲಾಟೆ ಮಾಡಿದ್ದರು. ಇದೀಗ ನೈತಿಕ ಪೊಲೀಸ್ಗಿರಿಯನ್ನು ಮತ್ತೊಂದು ಕಿಡಿಗೇಡಿಗಳ ಗುಂಪು ಮೆರೆದಿದೆ ಎಂದು ಅವರು ಕಿಡಿಕಾರಿದರು.
ಶಾದಿಮಹಲ್ ಸೀಸ್ ಮಾಡಿ
ದಲಿತ ಯುವಕ ಶ್ರೀನಿವಾಸನಿಗೆ ಜಾತಿ ನಿಂದನೆ ಮಾಡಿ, ಅಮಾನುಷವಾಗಿ, ಪೈಶಾಚಿಕವಾಗಿ ಹಲ್ಲೆ ಮಾಡಿದವ ದುಷ್ಕರ್ಮಿಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಪೊಲೀಸ್ ಇಲಾಖೆ ಅಸಡ್ಡೆ ತೋರುವಂತಿಲ್ಲ. ೪೮ ಗಂಟೆಗಳಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸಬೇಕು. ಸೂಕ್ತ ತನಿಖೆಯಾಗಬೇಕು, ಮೆಹಕ್ ಶಾದಿ ಮಹಲ್ ಮಾಲೀಕನನ್ನು ಕೂಡಲೇ ಬಂಧಿಸಿ, ಶಾದಿ ಮಹಲ್ ಅನ್ನು ಸೀಸ್ ಮಾಡಬೇಕು, ಆಕಸ್ಮಾತ್ ಗಾಯಾಳು ಯುವಕನ ಪ್ರಾಣಕ್ಕೆ ಏನಾದರೂ ಆದರೆ ಜಿಲ್ಲಾಡಳಿತವೇ ನೇರ ಹೊಣೆಯಾಗಿದೆ. ೪೮ ಗಂಟೆಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಶಾದಿ ಮಹಲ್ ಮುಂದೆ ತೀವ್ರ ಹೋರಾಟ ಹಾಗೂ ಧರಣಿ ನಡೆಸಲಾಗುವುದು ಎಂದರು.
ತಾಯಿ ಕಣ್ಣೀರು
ನನ್ನ ಮಗನಿಗೆ ತುಂಬಾ ಹೊಡೆದಿದ್ದು, ಆಸ್ಪತ್ರೆಯಲ್ಲಿ ಪ್ರಜ್ಞೆ ಇಲ್ಲದೆ ಬಿದ್ದಿದ್ದಾನೆ. ನನ್ನ ಮಗನಿಗೆ ನ್ಯಾಯ ಕೊಡಿಸಿ ಎಂದು ಶ್ರೀನಿವಾಸ್ ಅವರ ತಾಯಿ ಹನುಮಂತಮ್ಮ ಕಣ್ಣೀರು ಹಾಕಿದರು.ಗಂಡ ಸುತ್ತು 10 ವರ್ಷವಾಗಿದೆ. ನಮ್ಮ ಸಂಸಾರಕ್ಕೆ ಅವನೇ ದಿಕ್ಕಾಗಿ ದ್ದು, ಆತನಿಗೆ ಮದುವೆ ನಿಶ್ಚಯವಾಗಿದೆ. ಹೆಣ್ಣು ಮಗಳು ಸಹಾಯ ಕೋರಿದ್ದಕ್ಕೆ ಸ್ಪಂದಿಸಿದ್ದೇ ನನ್ನ ಮಗನ ತಪ್ಪೇ ಎಂದು ಪ್ರಶ್ನಿಸಿದರು. ಶೀಘ್ರವೇ ನ್ಯಾಯ ಕೊಡಿಸುವಂತೆ ಅಂಗಲಾಚಿದರು.
ಸುದ್ದಿಗೋಷ್ಠಿಯಲ್ಲಿ, ಬಿ.ಜಿ. ರಾಹುಲ್, ಅನಿಲ್, ಟಿ. ಸಾಗರ್, ಶ್ರೀಧರ್, ಅನಿಲ್ ಸುರ್ವೆ, ಶ್ರೀಧರ್, ಗಿರೀಶ್, ವೀರೇಶ್, ಅಣೀಶ್, ರಾಜು, ಪರಶುರಾಮ್, ರಮೇಶ್ ಕರಟೆ, ವಿನೋದ್ ರಾಜ್ ಇನ್ನಿತರರಿದ್ದರು.