
ಶಿವಮೊಗ್ಗ: ಗೋಪಿಶೆಟ್ಟಿಕೊಪ್ಪ ಹಾಗೂ ಗೋವಿಂದಾಪುರದಲ್ಲಿ ಉಳಿದ ಮನೆಗಳನ್ನು ಯಾವಾಗ ನಿರ್ಮಿಸಿಕೊಡುತ್ತೀರಾ? ಅಲ್ಲಿ ಮೂಲಭೂತ ಸೌಲಭ್ಯಗಳನ್ನು ಯಾವಾಗ ಕಲ್ಪಿಸುತ್ತೀರಾ ಎಂದು ರಾಜ್ಯ ಸರ್ಕಾರಕ್ಕೆ ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಸತಿ ಸಚಿವ ಜಮೀರ್ ಅವರು ಶಿವಮೊಗ್ಗಕ್ಕೆ ಬಂದು 652 ಮನೆಗಳನ್ನು ಕೊಟ್ಟು ನಮ್ಮ ಸರ್ಕಾರ ಕೊಟ್ಟಿದೆ ಎಂಬ ಹೆಸರಿನೊಂದಿಗೆ ಬರಿಗೈಲಿ ವಾಪಸ್ ಹೋಗಿದ್ದಾರೆ. ಇಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ಯಾವಾಗ? ವಿದ್ಯುತ್ ಸಂಪರ್ಕಕ್ಕೆ 12 ಕೋಟಿ ರೂ. ಬೇಕು. ಅದನ್ನು ಬಿಡುಗಡೆ ಮಾಡಲು ಸಚಿವ ಸಂಪುಟದ ಒಪ್ಪಿಗೆ ಬೇಕೆ? 3 ಸಾವಿರ ಮನೆಗಳಲ್ಲಿ ನನ್ನ ಕಾಲದ ವಿತರಣೆಯೂ ಸೇರಿದಂತೆ 1272 ಮನೆಗಳ ವಿತರಣೆಯಾಗಿದೆ. ಇನ್ನೂ 1728 ಮನೆಗಳ ನಿರ್ಮಾಣ ಬಾಕಿ ಇದೆ. ಇವುಗಳನ್ನು ಕಟ್ಟುವುದು ಮತ್ತು ವಿತರಿಸುವುದು ಯಾವಾಗ ಎಂದು ಪ್ರಶ್ನಿಸಿದರು.
ಗೋವಿಂದಾಪುರದಲ್ಲಿ ಮನೆ ಕಟ್ಟಿದ ಗುತ್ತಿಗೆದಾರನಿಗೆ 24 ಕೋಟಿ ರೂ. ಬಾಕಿ ಬರಬೇಕಾಗಿದೆ. ಇದನ್ನು ಕೊಡದ ಹೊರತೂ ಆತ ಉಳಿದ ಮನೆಗಳನ್ನು ಹೇಗೆ ಕಟ್ಟಲು ಸಾಧ್ಯ? ನಾನು ಶಾಸಕನಾಗಿದ್ದಾಗ ಪ್ರಯತ್ನಪಟ್ಟು 3 ಸಾವಿರ ಮನೆಗಳ ನಿರ್ಮಾಣಕ್ಕೆ ನಾಂದಿ ಹಾಡಿದ್ದೆ. ಉಳಿದವರು ಕೂಡ ಈಗಾಗಲೇ ಹಣ ಕಟ್ಟಿದ್ದಾರೆ. ಅವರಿಗೆ ಸೂರು ಯಾವಾಗ ಸಿಗುತ್ತದೋ ಬಡವರಿಗೆ ಯಾವಾಗ ಮನೆ ಕೊಡುತ್ತಾರೋ ಗೊತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಕೂಡ ಬಡವರಿಗೆ ಮನೆ ಕೊಡುವಲ್ಲಿ ವಿಫಲವಾಗಿವೆ ಎಂದರು.


ಗೋವಿAದಾಪುರದ್ದು ಒಂದು ಕತೆಯಾದರೆ ಗೋಪಿಶೆಟ್ಟಿಕೊಪ್ಪದ್ದು ಮತ್ತೊಂದು ಕತೆ. ಇಲ್ಲಿ 1836 ಮನೆಗಳು ನಿರ್ಮಾಣವಾಗಬೇಕಾಗಿದೆ. ಸುಮಾರು 500ಕ್ಕೂ ಹೆಚ್ಚು ಮಂದಿ ಪೂರ್ಣ ಹಣ ಪಾವತಿಸಿದ್ದಾರೆ. ಗುತ್ತಿಗೆದಾರ ಸುಮಾರು 3 ಕೋಟಿ ಕೆಲಸ ಮಾಡಿ ಒಂದೂವರೆ ವರ್ಷದಿಂದ ನಾಪತ್ತೆಯಾಗಿದ್ದಾರೆ. ಈಗ ಸೂರಿಗಾಗಿ ಹಣ ಕಟ್ಟಿದವರ ಗತಿಯೇನು? ರಾಜ್ಯ ಸರ್ಕಾರಕ್ಕೆ ಯೋಗ್ಯತೆ ಇದ್ದರೆ ಮನೆ ಕಟ್ಟಿಕೊಡಲಿ. ಇಲ್ಲದಿದ್ದರೆ ಬಡವರ ಹಣವನ್ನು ವಾಪಸ್ ಕೊಡಲಿ ಎಂದರು.
ಸಚಿವ ಜಮೀರ್ ಅಹಮ್ಮದ್ ಗುಮಾಸ್ತರ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಆ ಮನೆಗಳನ್ನು ವಿತರಿಸಲು ಅವರು ಇಲ್ಲಿಗೆ ಬರಬೇಕಿತ್ತಾ? ಇಲ್ಲಿ ಅಧಿಕಾರಿಯೊಬ್ಬ ವಿತರಣೆ ಮಾಡುತ್ತಿದ್ದರು. ಯಾವ ಸೌಲಭ್ಯವೂ ಈಗಲೂ ಅಲ್ಲಿ ಇಲ್ಲ. ವಸತಿ ಸಚಿವರ ಕೈಲಿ ಏನೂ ಆಗುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಮಾತು ನಡೆಯುವುದೂ ಇಲ್ಲ. ಆದ್ದರಿಂದ ಮುಖ್ಯಮಂತ್ರಿಗಳೇ ಈ ಸಮಸ್ಯೆಗೆ ಉತ್ತರ ಕೊಡಬೇಕು. ಅವರೇ ಶಿವಮೊಗ್ಗಕ್ಕೆ ಬಂದು ಆಶ್ರಯ ಮನೆಗಳ ಸಮಸ್ಯೆ ಬಗೆಹರಿಸಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಇ. ವಿಶ್ವಾಸ್, ಮೋಹನ್ ಜಾಧವ್, ರಾಜು, ಶಿವಾಜಿ, ಶಿವು, ಮೋಹನ್, ಮುಂತಾದವರಿದ್ದರು.