ದಾವಣಗೆರೆ : ಸದ್ಯ ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯ ಮೇಲ್ನೋಟಕ್ಕೆ ತಣ್ಣಗಾದರೂ, ಒಳಳೋಗೆ ಅವರದ್ದೇ ಆದ ತಂತ್ರ ಎಣಿಯುತ್ತಿದ್ದಾರೆ..ಅದರಂತೆ ಈಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೇಂದ್ರದ ನಾಯಕ ಅಮಿತ್ ಶಾ ಭೇಟಿ ಮಾಡಿ ನಾನಾ ವಿಷಯಗಳನ್ನು ಸುಮಾರು 20 ನಿಮಿಷಗಳ ಕಾಲ ಚರ್ಚೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೆಹಲಿ ಪ್ರವಾಸದಲ್ಲಿರುವ ಬಿವೈ ವಿಜಯೇಂದ್ರ ಅವರು, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಬಳಿಕ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರನ್ನು ಭೇಟಿಗೆ ಪ್ರಯತ್ನಿಸಿದರು. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಅವರು ವಿಜಯೇಂದ್ರ ಅವರ ಭೇಟಿಗೆ ಸಮಯ ನೀಡಿದ್ದರು. ಅಂತೆಯೇ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಆಂತರಿಕ ಬೆಳವಣಿಗೆಗಳು, ರೆಬೆಲ್ ಗಳ ಪ್ರತ್ಯೇಕ ಹೋರಾಟದ ಬಗ್ಗೆ ಚರ್ಚೆ ನಡೆಸಿದ್ದಾರೆ.
ವಿಜಯೇಂದ್ರ ಪೋಸ್ಟ್ ಏನು?
ದೇಶ ಸುಭದ್ರತೆಗಾಗಿ ಪ್ರಧಾನಿಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಐತಿಹಾಸಿಕ ಹೆಜ್ಜೆಗಳನ್ನಿಡುತ್ತಿರುವ ಮಾನ್ಯ ಅಮಿತ್ ಶಾ ಜೀ ಯವರು ಪಕ್ಷ ಸಂಘಟನೆಗಾಗಿಯೂ ಅಷ್ಟೇ ಬದ್ಧತೆ ಹಾಗೂ ಕಾಳಜಿ ವಹಿಸುವುದು ಪ್ರತಿಯೊಬ್ಬ ಕಾರ್ಯಕರ್ತನಲ್ಲಿ ಆತ್ಮವಿಶ್ವಾಸದ ಛಲ ತುಂಬಲು ಕಾರಣವಾಗಿದೆ, ಅವರ ಸಂಘಟನಾ ಸಾಮರ್ಥ್ಯದ ಚತುರತೆ ಪಕ್ಷ ಕಟ್ಟುವ ಕಾಯಕದಲ್ಲಿ ಸದಾ ನನಗೆ ಪ್ರೇರಣೆಯ ಶಕ್ತಿಯಾಗಿದೆ. ಇಂದಿನ ಅವರ ಭೇಟಿಯ ಕ್ಷಣಗಳು ಎಂದಿನಂತೆ ಇನ್ನಷ್ಟು ಉತ್ಸಾಹತುಂಬಿ ಸಂಘಟನೆಯನ್ನು ನಿರೀಕ್ಷೆಯ ಗುರಿ ತಲುಪಿಸಲು ಆತ್ಮವಿಶ್ವಾಸ ತುಂಬಿತು’ ಎಂದು ಪೋಸ್ಟ್ ಹಾಕಿದ್ದಾರೆ.
ಮುಂದುವರಿದ ಸಂಘರ್ಷ
ಒಂದು ಕಡೆ ಬಿಜೆಪಿಯಲ್ಲಿ ಬಣ ಸಂಘರ್ಷ ಮುಂದುವರೆದಿದ್ದು, ರೆಬೆಲ್ ನಾಯಕ ಯತ್ನಾಳ್ ಗೆ ಹೈಕಮಾಂಡ್ ನೋಟಿಸ್ ನೀಡಿದ್ದರೂ, ಬಿವೈ ವಿಜಯೇಂದ್ರ ವಿರುದ್ದ ವಾಗ್ದಾಳಿ ನಡೆಸುತ್ತಿದ್ದಾರೆ. ಅಲ್ಲದೇ ರಮೇಶ್ ಜಾರಕಿಹೊಳಿ ಮುಂದೆ ಬಿಟ್ಟು ಅವರ ಮೂಲಕ ವಿಜಯೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿವೈ ವಿಜಯೇಂದ್ರ ಅವರು ಕೇಂದ್ರದ ಬಿಜೆಪಿ ನಾಯಕರಾದ ಅಮಿತ್ ಶಾ ಅವರನ್ನು ಭೇಟಿಯಾಗಿ ಪಕ್ಷದ ಆಂತರಿಕ ಕಲಹದ ಕುರಿತು ಚರ್ಚಿಸಿದ್ದಾರೆ.
ಯತ್ನಾಳ್ ಬಣದಿಂದ ವಕ್ವ್ ಹೋರಾಟ
ಈಗಾಗಲೇ ಬಿಜೆಪಿ ನಾಯಕರು 2ನೇ ಹಂತದ ವಕ್ಫ್ ಹೋರಾಟವನ್ನು ಆರಂಭಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಜನವರಿ 4ರಂದು ಸಮಾವೇಶ ನಡೆಸುವ ಬಗ್ಗೆ ಚರ್ಚೆ ನಡೆದಿದೆ.ಅಲ್ಲದೇ ಕೆಲವು ದಿನಗಳ ಹಿಂದೆ ಬಿ. ವೈ. ವಿಜಯೇಂದ್ರ ಬೆಂಬಲಿಗರು ದಾವಣಗೆರೆಯಲ್ಲಿ ಸಮಾವೇಶ ನಡೆಸಲು ತೀರ್ಮಾನಿಸಿದ್ದರು. ಆಗ ಪೋಸ್ಟ್ ಹಾಕಿದ್ದ ವಿಜಯೇಂದ್ರ ಅವರು, “ಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ಅವಕಾಶ ಇಲ್ಲವೇ ಇಲ್ಲ. ಬಣದ ಹೆಸರಿನಲ್ಲಿ ಸಭೆಗಳನ್ನು ಆಯೋಜಿಸುವುದನ್ನು ಒಪ್ಪಲಾಗದು. ಈ ನಿಟ್ಟಿನಲ್ಲಿ ಸಭೆ, ಸಮಾವೇಶಗಳನ್ನು ಮಾಡಲು ಯಾರೇ ಹೊರಟಿದ್ದರೂ ಕೂಡಲೇ ತಮ್ಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕೆಂದು ವಿನಂತಿಸುವೆ’ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಮಾವೇಶ ಸ್ಥಗಿತಗೊಂಡಿದೆ.
ಅಮಿತ್ ಶಾ ಗಮನಕ್ಕೆ ವಿಜಯೇಂದ್ರ ತಂದಿದ್ದೇನು?
ವಿಜಯೇಂದ್ರ ಅವರು ರಾಜಾಧ್ಯಕ್ಷರಾದಾಗಿನಿಂದಲೂ ಅವರ ನಾಯಕತ್ವದ ವಿರುದ್ಧ ಹಾಗೂ ಯಡಿಯೂರಪ್ಪ ವಿರುದ್ಧ ಯತ್ನಾಳ್ ಅವರು ಬಹಿರಂಗವಾಗಿ ಹರಿಹಾಯುತ್ತಲೇ ಇದ್ದಾರೆ. ಇದೀಗ ಯತ್ನಾಳ ಅವರೊಂದಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿ ಇತರ ಕೆಲ ನಾಯಕರೂ ಕೈಜೋಡಿಸಿದ್ದಾರೆ. ಅಲ್ಲದೆ, ವಕ್ಸ್ ವಿಚಾರವಾಗಿ ಪಕ್ಷವನ್ನು ಕಡೆಗಣಿಸಿ ತಮ್ಮದೇ ಬಣವೊಂದನ್ನು ಕಟ್ಟಿಕೊಂಡು ಪ್ರತ್ಯೇಕವಾಗಿ ಹೋರಾಟ ನಡೆಸುತ್ತಿದ್ದಾರೆ. ಇದೆಲ್ಲದರಿಂದ ಪಕ್ಷ ಸಂಘಟನೆಗೆ ಅಡಚಣೆಯಾಗುತ್ತಿದೆ. ಇದು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಾಯಕರ ಆಹಾರವಾಗುತ್ತಿದೆ ಎಂಬ ಅಂಶವನ್ನು ವಿಜಯೇಂದ್ರ ಅವರು ಅಮಿತ್ ಶಾ ಅವರ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಜಯೇಂದ್ರ ನೀಡಿದ ದೂರು ಏನಿರಬಹುದು?
ಯತ್ನಾಳ್ ಬಣದ ಈ ಚಟುವಟಿಕೆಗಳಿಂದ ಪಕ್ಷದ ಕಾರ್ಯಕರ್ತರಲ್ಲೂ ಗೊಂದಲ ಉಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ, ಬಿಬಿಎಂಪಿ ಚುನಾವಣೆ ಎದುರಾಗುವುದರಿಂದ ಪಕ್ಷ ಸಂಘಟನೆ ಬಲಪಡಿಸಬೇಕಾಗಿದೆ. ಎಲ್ಲ ನಾಯಕರೂ ಪಕ್ಷದ ಶಿಸ್ತಿಗೆ ಒಳಪಟ್ಟು ಕೆಲಸ ಮಾಡುವಂತಾಗಬೇಕು. ಪಕ್ಷದ ನಾಯಕತ್ವವನ್ನು ಮೀರಿ ತಮ್ಮದೇ ಹಾದಿ ತುಳಿದರೆ ಅದು ದೊಡ್ಡ ಹೊಡೆತ ನೀಡಲಿದೆ ಎಂಬ ಆತಂಕವನ್ನು ವಿಜಯೇಂದ್ರ ಅವರು ಅಮಿತ್ ಶಾ ಮುಂದೆ ವಿವರಿಸುವ ಪ್ರಯತ್ನ ಮಾಡಿದ್ದು, ವಿಜಯೇಂದ್ರ ಅವರ ಮಾತ ಮಾತುಗಳನ್ನು ಆಲಿಸಿರುವ ಅಮಿತ್ ಶಾ ಅವರು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನೀವು ನಿಮ್ಮ ಕೆಲಸ ಮಾಡಿ ಎಂದ ಶಾ
ರಾಜ್ಯ ಬಿಜೆಪಿ ಬಣದ ಬಗ್ಗೆ ಮಾಹಿತಿ ಪಡೆದುಕೊಂಡ ಶಾ ಅಂತಿಮವಾಗಿ ನೀವು ನಿಮ್ಮ ಕೆಲಸ ಮಾಡಿ ಎಂದು ಸಲಹೆ ನೀಡಿದ್ದಾರೆ. ಇನ್ನೂ ಜನವರಿ ಅಂತ್ಯದ ವೇಳೆಗೆ ರಾಜ್ಯಾಧ್ಯಕ್ಷರ ಬದಲಾವಣೆಯಾಗಲಿದೆ ಎಂಬ ಚರ್ಚೆ ನಡೆಯುತ್ತಿದ್ದ ನಡುವೆ ಅಮಿತ್ ಶಾ ಹಾಗೂ ವಿಜಯೇಂದ್ರ ಭೇಟಿ ಮಹತ್ವ ಎನಿಸಿಕೊಂಡಿದೆ.
ಯತ್ನಾಳ್ ಅಂಡ್ ಟೀಂಗೆ ಸಂದೇಶ ಮುಟ್ಟಿಸಿದ್ರಾ ಬಿವೈವಿ?
ಇನ್ನೂ ಮೋದಿ, ಅಮಿತ್ ಶಾ ಭೇಟಿ ಮೂಲಕ ವಿರೋಧಿಗಳಿಗೂ ಬಿವೈ ವಿಜಯೇಂದ್ರ ಖಡಕ್ ಸಂದೇಶ ರವಾನಿಸಿದ್ದಾರೆ. ನೀವು ಏನೇ ಮಾಡಿದ್ರು ರಾಷ್ಟ್ರೀಯ ನಾಯಕರು ನನ್ನ ಜೊತೆ ಇದ್ದಾರೆಂಬ ಸಂದೇಶ ನೀಡಿದ್ದಾರೆ. ಇನ್ನೊಂದೆಡೆ ರೆಬೆಲ್ ನಾಯಕರುಗಳು ಮೋದಿ ಹಾಗೂ ಅಮಿತ್ ಶಾ ಅವರ ಭೇಟಿಗೆ ಪ್ರಯತ್ನಿಸಿ ವಿಫಲರಾಗಿದ್ದಾರೆ. ಒಟ್ಟಾರೆ ಅಮಿತ್ ಶಾ ಭೇಟಿಯಾದ ವಿಜಯೇಂದ್ರ ರಾಜ್ಯದ ಎಲ್ಲ ಬೆಳವಣಿಗೆಯನ್ನು ವಿವರಿಸಿದ್ದು, ಅಭಿ ಫಿಚ್ಚರ್ ಬಾಕಿ ಹೈ…ಕಾದು ನೋಡಬೇಕಿದೆ