
ಶಿವಮೊಗ್ಗ: ಸಹ್ಯಾದ್ರಿ ಕಲಾ ಕಾಲೇಜು, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ (ಎನ್.ಸಿ.ಪಿ.) ಶಿವಮೊಗ್ಗ ಮಿಲನ ಇವರ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿನಿಯರಿಗಾಗಿ ಮುಟ್ಟಿನ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಡಾ. ಶ್ರೀ ಲಕ್ಷ್ಮಿ ಉಪನ್ಯಾಸ ನೀಡಿ, ವಿದ್ಯಾರ್ಥಿನಿಯರು ಸೇರಿದಂತೆ ಮಹಿಳೆಯರಿಗೆ ಮುಟ್ಟಿನ ಶುಚಿತ್ವದ ಬಗ್ಗೆ ಮಾಹಿತಿ ಕೊರತೆ ಇದೆ. ತಪ್ಪು ಕಲ್ಪನೆಗಳು, ಮೌಡ್ಯಗಳು ಇವೆ. ಜಾಗೃತಿ ಕಾರ್ಯಕ್ರಮಗಳಿಗೂ ವಿದ್ಯಾರ್ಥಿನಿಯರು ಬರುವುದಕ್ಕೆ ಹಿಂಜರಿಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಹದಿ ಹರೆಯಕ್ಕೆ ಬಂದಾಗ ಯುವತಿಯರಲ್ಲಿ ಸಾಕಷ್ಟು ದೈಹಿಕ, ಮಾನಸಿಕ ಬದಲಾವಣೆಗಳಾಗುತ್ತವೆ. ಋತುಚಕ್ರ ಪ್ರಾರಂಭವಾದಂತೆ ಕಿರಿಕಿರಿಯಾಗುತ್ತದೆ. ಮುಟ್ಟಿನ ಚಕ್ರ ಸಮಯದಲ್ಲಿ ಹಾರ್ಮೋನುಗಳು ಉಂಟಾಗುವುದರಿಂದ ದೈಹಿಕ ಮತ್ತು ಮಾನಸಿಕ ಸ್ಥಿತಿಗಳಲ್ಲಿ ಏರುಪೇರು ಆಗುತ್ತದೆ. ಆ ಸಂದರ್ಭದಲ್ಲಿ ಕೋಪ ತಾಪ ತಲೆನೋವು ಬೇಸರ ನಿರಾಸಕ್ತಿ ಉಂಟಾಗುತ್ತದೆ. ಇದ್ಯಾವುದಕ್ಕೂ ವಿದ್ಯಾರ್ಥಿನಿಯರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು.


ಋತುಚಕ್ರ ಏರುಪೇರು ಆದಾಗ ತಕ್ಷಣವೇ ವೈದ್ಯರ ಬಳಿಗೆ ಹೋಗಿ, ನಿರ್ಲಕ್ಷ ಮಾಡಬೇಡಿ, ಇಲ್ಲದಿದ್ದರೆ ಕ್ಯಾನ್ಸರ್ ನಂತಹ ಕಾಯಿಲೆಗಳು ಬರುತ್ತವೆ ಎಂದರು.
ವಿದ್ಯಾರ್ಥಿನಿಯರು ಶುಚಿತ್ವದ ಕಡೆ ಗಮನಹರಿಸಬೇಕು. ಎಲ್ಲಿ ಬೇಕೆಂದರಲ್ಲಿ ತಾವು ಬಳಸಿದ ಪ್ಯಾಡ್ ಗಳನ್ನು ಎಸೆಯಬಾರದು. ಇದರಿಂದ ಕಾಯಿಲೆಗಳು ಅತಿ ಬೇಗ ಹರಡುತ್ತವೆ. ಹಾಗೆಯೇ, ಈ ವಿಷಯಕ್ಕೆ ಸಂಬಂಧಪಟ್ಟಂತೆ ನಾಚಿಕೆ ಬಿಟ್ಟು ವೈದ್ಯರ ಬಳಿ ಹೋಗಿ ಮುಂದಾಗುವ ಅನಾರೋಗ್ಯದಿಂದ ಕಾಪಾಡಿಕೊಳ್ಳಿ ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಸ್.ಸಿ.ಐ.ನ ರಾಷ್ಟ್ರೀಯ ಉಪಾಧ್ಯಕ್ಷ ಪುಷ್ಪಾ ಎಸ್. ಶೆಟ್ಟಿ, ಹೆಣ್ಣು ಜಗದ ಕಣ್ಣಾಗಿದ್ದಾಳೆ. ಒಂದು ಜೀವವನ್ನು ಸೃಷ್ಟಿಸುವ ಶಕ್ತಿಯನ್ನು ದೇವರು ಮಹಿಳೆಗೆ ಮಾತ್ರ ನೀಡಿದ್ದಾರೆ. ಆದರೆ, ಅಷ್ಟೇ ಸಂಕಷ್ಟಗಳು ಇವೆ. ಹದಿಹರೆಯದಲ್ಲಿ ಹೆಣ್ಣು ಮಕ್ಕಳಿಗೆ ತುಂಬಾ ಕುತೂಹಲಗಳಿರುತ್ತವೆ. ಓದಿನ ಕಡೆ ಗಮನಹರಿಸಿ ಮೊಬೈಲ್ ಅನ್ನು ಮಿತವಾಗಿ ಬಳಸಿ. ಶಿಕ್ಷಕರು ಮತ್ತು ಪೋಷಕರ ಹತ್ತಿರ ತಮ್ಮ ನೋವನ್ನು ಹಂಚಿಕೊಳ್ಳಿ. ಮೋಸ ಮಾಡುವ ಹುಡುಗರ ಬಗ್ಗೆ ಎಚ್ಚರಿಕೆಯಿಂದ ಇರಿ. ಮೊದಲು ನಿಮ್ಮ ವಿದ್ಯಾಭ್ಯಾಸ. ಆನಂತರ ಪ್ರೇಮ ಪ್ರೀತಿ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ ಕೆ.ಎನ್. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿನಿಯರಿಗಾಗಿ ಆರೋಗ್ಯದ ಅರಿವಿನ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ಶಿಕ್ಷಣ ಕ್ಷೇತ್ರದಲ್ಲಿ ಆಗಬೇಕಾಗಿದೆ. ಕಾಲೇಜಿನ ಸಂದರ್ಭದಲ್ಲಿಯೂ ವಿದ್ಯಾರ್ಥಿನಿಯರು ಆರೋಗ್ಯದ ಮತ್ತು ಶುಚಿತ್ವದ ಪರಿಸರದ ಕಡೆ ಗಮನಹರಿಸಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಸೈಯದ್ ಸನಾವುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ನ ಅಧ್ಯಕ್ಷೆ ಶೋಭಾ ದೇವರಾಜ್, ಪ್ರಮುಖರಾದ ಜಯಶ್ರೀ, ಗೀತಾ ಗೌಡರ್, ಡಾ. ಹಾಲಮ್ಮ, ಮಮತಾ ನಾರಾಯಣ್, ಬಸವರಾಜ್, ಪ್ರದೀಪ್, ಹರ್ಷಿತಾ, ಕವಿತಾ, ಮಂಜುಳಾ ಮುಂತಾದವರಿದ್ದರು.
(ಪೋಟೋ ಇದೆ)
….