ಶಿವಮೊಗ್ಗ: ನಾಡು ಕಂಡ ಅತ್ಯಂತ ಶ್ರೇಷ್ಠ ಕವಿ ಡಾ. ಎಚ್.ಎಸ್.ವೆಂಕಟೇಶಮೂರ್ತಿ. ಸುಗಮ ಸಂಗೀತ ಕ್ಷೇತ್ರದಲ್ಲಿ ತಮ್ಮ ವಿಶೇಷ ಅರ್ಥಪೂರ್ಣ ಗೀತೆಗಳೊಂದಿಗೆ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ಮಥುರಾ ರಜತೋತ್ಸವ ಸಮಿತಿ ಅಧ್ಯಕ್ಷ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ್ ಹೋಬಳಿದಾರ್ ಹೇಳಿದರು.
ನಗರದ ಮಥುರಾ ಪಾರಾಡೈಸ್ ಸಭಾಂಗಣದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕ, ಮಥುರಾ ರಜತೋತ್ಸವ ಸಮಿತಿ ಜಂಟಿಯಾಗಿ ಎಚ್‌ಎಸ್‌ವಿ ಅವರ 80ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಡಾ. ಎಚ್.ಎಸ್.ವೆಂಕಟೇಶಮೂರ್ತಿ ಅವರ ಗೀತಗಾಯನ ಸ್ಪರ್ಧೆಯ ಸಮಾರೋಪದಲ್ಲಿ ಮಾತನಾಡಿ, ಸಂಗೀತದಿಂದ ಸದಾ ಉಲ್ಲಾಸದಿಂದ ಇರುವುದರ ಜತೆಗೆ ಧ್ವನಿ ಸಂಸ್ಕರಣಗೊಳ್ಳುತ್ತದೆ. ಸದಾ ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸುಗಮ ಸಂಗೀತ ಪರಿಷತ್ ಗೌರವಾಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಮಥುರಾ ಪಾರಾಡೈಸ್ ರಜತ ಮಹೋತ್ಸವ ಅಂಗವಾಗಿ 50 ಸಂಸ್ಥೆಗಳ ಆಶ್ರಯದಲ್ಲಿ ಸಮಾಜಮುಖಿ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, 6ನೇ ಕಾರ್ಯಕ್ರಮವಾಗಿದೆ. ಸುಗಮ ಸಂಗೀತ ಪರಿಷತ್‌ಗೆ ತನ್ನದೇ ಆದ ವಿಶೇಷ ಸ್ಥಾನಮಾನವಿದೆ. ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಶಾಂತಾ ಶೆಟ್ಟಿ ಗೀತಗಾಯನ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು. ಸುಪ್ರಿಯಾ ಸಂತೋಷ್ ಪ್ರಥಮ ಬಹುಮಾನ, ಶ್ವೇತಾ ಪಾಟೀಲ್ ದ್ವಿತೀಯ ಬಹುಮಾನ, ಎಂ.ಸುಜಾತಾ, ವರ್ಷಿಣಿ ಭಟ್‌ಗೆ ನಗದು ಬಹುಮಾನ ನೀಡಲಾಯಿತು.ಇದೇ ಸಂದರ್ಭದಲ್ಲಿ ಪರಿಷತ್ ಸದಸ್ಯರಿಂದ ಡಾ. ಎಚ್.ಎಸ್.ವೆಂಕಟೇಶಮೂರ್ತಿ ಅವರ ಗೀತೆಗಳ ಗಾಯನ ನೆರವೇರಿತು. ಜಿಲ್ಲಾ ಖಜಾಂಚಿ ಜಿ.ವಿಜಯಕುಮಾರ್, ಕಾರ್ಯದರ್ಶಿ ಕೆ.ಎಸ್.ಮಂಜುನಾಥ, ಸಂಚಾಲಕರಾದ ಭದ್ರಾವತಿ ವಾಸು, ಸಹ ಕಾರ್ಯದರ್ಶಿ ತ್ರಿವೇಣಿ, ಸಹ ಸಂಚಾಲಕರಾದ ಶೋಭಾ ಸತೀಶ್, ವಿದುಷಿ ಲಲಿತಮ್ಮ, ಜಯಶ್ರೀ ಶ್ರೀಧರ್, ದಾಕ್ಷಾಯಿಣಿ, ರಾಜಕುಮಾರ, ಮಥುರಾ ನಾಗರಾಜ್, ಉಮಾ ದಿಲೀಪ್, ಲಕ್ಷ್ಮೀ ಮಹೇಶ್, ಹೇಮಾ ವರ್ಷಿಣಿ, ಪರಿಷತ್ ಸದಸ್ಯರು ಉಪಸ್ಥಿತರಿದ್ದರು.