ನಂದೀಶ್ ಭದ್ರಾವತಿ ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯಲ್ಲಿ ಅಖಿಲ ವೀರಶೈವ ಮಹಾಸಭಾ ಅಧ್ಯಕ್ಷರ ಚುನಾವಣೆ ಜೋರಾಗಿ ನಡೆಯುತ್ತಿದ್ದು, ತೀವ್ರಹಣಾಹಣಿ ನಡೆಯುತ್ತಿದೆ. ಜಿಲ್ಲೆಯ ಆರು ತಾಲೂಕುಗಳಲ್ಲಿ ಚುನಾವಣೆ ನಡೆಯಲಿದ್ದು, ರಾಜ್ಯದ ಎಲ್ಲಾ ಅಧ್ಯಕ್ಷರ ಸ್ಥಾನಕ್ಕೆ ಜು.21 ರಂದು ಚುನಾವಣೆ ನಡೆಯಲಿದೆ. ಅದರಂತೆ ಶಿವಮೊಗ್ಗದಲ್ಲಿ ಅಧ್ಯಕ್ಷಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಶಿವಮೊಗ್ಗ ಜಿಲ್ಲೆಯ ಎರಡು ಕಡೆ ಮಾತ್ರ ಅವಿರೋಧ ಆಯ್ಕೆ ನಡೆದಿದ್ದು, ಬಹುತೇಕ ಕಡೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಇನ್ನು ತಾಲ್ಲೂಕು ವೀರಶೈವ ಮಹಾಸಭಾದ ಚುನಾವಣೆಗೂ ನೇರಹಣಾಹಣಿ ನಡೆಯುತ್ತಿದೆ. ಕೆಲ ಕಡೆ ಅಗತ್ಯಬಿದ್ದರೆ ಚುನಾವಣೆಗೂ ಸಿದ್ದ ಎಂದು ತಾಲೂಕು ವೀರಶೈವ ಮಹಾಸಭಾದ ಮುಖಂಡರು ಹೇಳಿದ್ದು, ಅಖಾಡಕ್ಕೆ ಇಳಿದಿದ್ದಾರೆ.
ಕೆಲ ಕಡೆ ಹಾಲಿ ಆಡಳಿತಮಂಡಳಿ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದೆ. ತಾಲ್ಲೂಕಿನ ವೀರಶೈವ ಸಮಾಜದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದೇ, ಅಭಿವೃದ್ದಿ ಮಾಡದೇ ಕೇವಲ ಭಾಷಣಕ್ಕೆ ಸೀಮಿತವಾಗಿದೆ ಇದರಿಂದ ತಾಲ್ಲೂಕಿನ ವೀರಶೈವ ಸಮಾಜದ ಬಂಧುಗಳು ಬೇಸರ ವ್ಯಕ್ತಪಡಿಸಿದ್ದಾರೆ ಎಂಬ ಅಭಿಪ್ರಾಯ ಕೂಡ ಕೇಳಿ ಬಂದಿದೆ.
ಚುನಾವಣಾ ಸಮಯ ಬಂದಿದ್ದು ಎಲ್ಲರೂ ಒಗ್ಗೂಡಿ ಅವಿರೋಧವಾಗಿ ಮಾತುಕತೆಯ ಮೂಲಕ ಎಲ್ಲವನ್ನು ಬಗೆಹರಿಸಿಕೊಳ್ಳಲು ಮಾತುಕತೆ ನಡೆದರೂ, ಕೆಲವರು ಅಪಸ್ವರ ಎತ್ತಿದ ಕಾರಣಕ್ಕೆ
ಸರ್ವ ಸಮ್ಮತ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಪರಿಣಾಮ ಚುನಾವಣೆಗೆ ಹೋಗಲು ಸಿದ್ದರಿದ್ದೇವೆ. ಆದ್ದರಿಂದ ಸಮಾಜದ ಮುಖಂಡರುಗಳು ಚುನಾವಣೆಯ ಆಯ್ಕೆ ಸಂಬಂಧ ಉತ್ತಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದು ನಮ್ಮ ಅನಿಸಿಕೆಯಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಮುಖಂಡರು ಹೇಳುತ್ತಾರೆ. ಸದ್ಯ ತಾಲೂಕಿನಲ್ಲಿ ವೀರಶೈವ ಸಮುದಾಯ ಬಿಟ್ಟರೆ ಬೇರೆ ಯಾವ ಸಮುದಾಯದಲ್ಲೂ ಚುನಾವಣೆ ನಡೆಯುತ್ತಿಲ್ಲ. ಅಲ್ಲದೇ ರಾಜಕೀಯ ನಾಯಕರೂ ಕೂಡ ಈ ಚುನಾವಣೆಗೆ ಎಂಟ್ರಿ ಕೊಟ್ಟಿದ್ದಾರೆ.
ರಾಜಕೀಯ ಎಂಟ್ರಿ
ಶಿವಮೊಗ್ಗ ಜಿಲ್ಲೆಯಲ್ಲಿ ವೀರಶೈವ ಲಿಂಗಾಯಿತ ಮತಗಳು ಹೆಚ್ಚಿದ್ದು, ಬಿಜೆಪಿ-ಕಾಂಗ್ರೆಸ್ ನಾಯಕರು ನೇರವಾಗಿ ಈ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಇಲ್ಲಿ ಯಾರು ಅಧ್ಯಕ್ಷರಾಗುತ್ತಾರೆ ಅವರು ಪಕ್ಷಗಳಿಗೆ ಬೆಂಬಲವಾಗಿರುತ್ತಾರೆ. ಈ ಕಾರಣದಿಂದ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಅಲ್ಲದೇ ವೀರಶೈವಲಿಂಗಾಯಿತ ಮತಗಳು ಬಿದ್ದ ಪಕ್ಷ ಅಧಿಕಾರಕ್ಕೆ ಬರುವುದು ಗ್ಯಾರಂಟಿ ಎಂಬ ಹಿನ್ನೆಲೆಯಲ್ಲಿ ಎಲೆಕ್ಷನ್ ಜೋರಾಗಿದ್ದು, ಹಿಂಬಂದಿಯ ಆಟ ಜೋರಾಗಿದೆ.
ಎಷ್ಟು ಮತದಾರರು
ಜಿಲ್ಲೆಯಲ್ಲಿ 3115 ಜನ ಮತದಾರರಿದ್ದು ಇವರು ಗಳು ನಿರ್ದೇಶಕರನ್ನ ಆಯ್ಕೆ ಮಾಡಲಿದ್ದಾರೆ. 3115 ಜನರಲ್ಲಿ 20 ಪುರುಷರು 10 ಮಹಿಳೆಯರು ಆಯ್ಕೆಯಾಗಲಿದ್ದು ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಒಟ್ಟು 31 ಜನ ಆಯ್ಕೆಯಾಗಲಿದ್ದಾರೆ. ಈಗಾಗಲೇ 30 ಜನ ನಿರ್ದೇಶಕರ ಅವಿರೋಧ ಆಯ್ಕೆ ನಡೆದಿದೆ. ಜಿಲ್ಲೆ ಮತ್ತು ತಾಲೂಕು ಅಧ್ಯಕ್ಷರ ಸ್ಥಾನಕ್ಕೆ ಜು.21 ರಂದು ನಡೆಯಲಿದೆ. ಹೊಸನಗರ ತಾಲೂಕು ವೀರಶೈವ ಲಿಂಗಾಯಿತ ಮಹಾಸಭಾಕ್ಕೆ ಶಿಕಾರಿಪುರದಲ್ಲಿ ಅಧ್ಯಕ್ಷರ ಆಯ್ಕೆಯಾಗಿದೆ. ತೀರ್ಥಹಳ್ಳಿಯಲ್ಲಿ ಯಾರು ಸ್ಪರ್ಧಿಸುತ್ತಿಲ್ಲ. ಭದ್ರಾವತಿ, ಸಾಗರದಲ್ಲಿ ಚುನಾವಣೆ ನಡೆಯಬೇಕಿದೆ. ಜಿಲ್ಲೆಗೆ ಚುನಾವಣೆ ಅಧಿಕಾರಿಯಾಗಿ ನೇಮಕ ವಿಶ್ವನಾಥಯ್ಯ, ತಾಲೂಕಿಗೆ ಉಜ್ಜನಪ್ಪ ಬಸಯ್ಯ ನೇಮಕರಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ
ಶಿವಮೊಗ್ಗ ಜಿಲ್ಲೆಯ ಅಧ್ಯಕ್ಷರ ಸ್ಥಾನಕ್ಕೆ ರುದ್ರಮುನಿ ಸಜ್ಜನ್, ಅಶ್ವಿನ್ ಕೆಪಿ, ನಂಜಪ್ಪ ಈ ಮೂವರು ಸ್ಪರ್ಧಿಸುತ್ತಿದ್ದಾರೆ. ಇದರಲ್ಲಿ ರುದ್ರಮುನಿ ಸಜ್ಜನ್ ಚಿರಪರಿಚಿತರಾಗಿದ್ದು, ಶಿವಮೊಗ್ಗ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ್ ಸ್ವಾಮಿ ಸೇರಿದಂತೆ ಅನೇಕರು ಬೆಂಬಲಕ್ಕೆ ನಿಂತಿದ್ದಾರೆ. ಅಶ್ವಿನ್ ಕೆಪಿ, ನಂಜಪ್ಪ ಕೂಡ ಅವರದ್ದೇ ಆದ ರೀತಿಯಲ್ಲಿ ಚುನಾವಣೆಗೆ ಮತಗಳನ್ನು ಭೇಟೆಯಾಡುತ್ತಿದ್ದಾರೆ. ವೀರಶೈವ ಕಲ್ಯಾಣ ಮಂದಿರದ ಪಕ್ಕವಿರುವ ಬಸವೇಶ್ವರ ಸ್ಕೂಲ್ ಆಫ್ ಎಜುಕೇಷನ್ ಸೊಸೈಟಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ತಾಲೂಕು ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಶಿವಮೊಗ್ಗ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ
ಶಿವಮೊಗ್ಗ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಜಿ.ಮಲ್ಲಿಕಾರ್ಜುನ್ ಸ್ವಾಮಿ, ಸಂಗಮೇಶ್ ಮಠದ್ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಇದರಲ್ಲಿ ಜಿ.ಮಲ್ಲಿಕಾರ್ಜುನ್ ಸ್ವಾಮಿ ರುದ್ರಮುನಿ ಸಜ್ಜನ್ಗೆ ಬೆಂಬಲವಾಗಿ ನಿಂತಿದ್ದಾರೆ. ಈಗಾಗಲೇ ಎಲ್ಲ ಮನೆಗಳಿಗೆ ಭೇಟಿ ನೀಡಿ ಮತ ಹಾಕುವಂತೆ ಮನವೊಲಿಸಿದ್ದಾರೆ.
ವೀರಶೈವ ಮಹಾಸಭಾ ಯುವ ಘಟಕದಿಂದಲೂ ಎಲೆಕ್ಷನ್
ವೀರಶೈವ ಮಹಾಸಭಾ ಯುವ ಘಟಕಕೂಡ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಬೆಂಬಲ ನೀಡಿದ್ದು, ಯುವ ಘಟಕ ಮಾಜಿ ಅಧ್ಯಕ್ಷ ಶಿವಯೋಗಿ ಹಂಚಿನಮನೆ, ಯುವ ಘಟಕ ಮಾಜಿ ನಿರ್ದೇಶಕ ಸಚಿನ್ ಪೂಜಾರ್ ಕೂಡ ರುದ್ರಮುನಿ ಸಜ್ಜನ್ ಪರ ಬ್ಯಾಟಿಂಗ್ ಬೀಸಿದ್ದಾರೆ ಎಂಬ ಮಾಹಿತಿ ಇದೆ.
ಪ್ರತಿಷ್ಠಿತ ಪ್ರಶ್ನೆ
ರಾಜ್ಯದಲ್ಲಿ ವೀರಶೈವ ಲಿಂಗಾಯಿತ ಮಹಾಸಭಾ ತನ್ನದೇ ಆದ ಪ್ರತಿಷ್ಠೆ ಹೊಂದಿದ್ದು, ಇಲ್ಲಿ ಆಯ್ಕೆಯಾಗುವ ಪ್ರತಿನಿಧಿಗಳಿಗೆ ಅದರದ್ದೇ ಆದ ಗೌರವವಿದೆ. ಅಲ್ಲದೇ ಬಹುತೇಕ ಲಿಂಗಾಯಿತ ಜನಪ್ರತಿನಿಧಿಗಳಿಗೆ ರಾಜಕೀಯವಾಗಿ ಸ್ಥಾನ ಮಾನ ಸಿಕ್ಕಿರುವ ಕಾರಣ ಅವರ ಜತೆ ಗುರುತಿಸಿಕೊಳ್ಳಲು ಇಲ್ಲಿ ಗೆಲ್ಲಲೇಬೇಕಾಗಿದೆ. ಅಲ್ಲದೇ ಮುಂಬರುವ ಚುನಾವಣೆಗೆ ಸ್ಫರ್ಧೆ ಸೇರಿದಂತೆ ರಾಜಕೀಯ ಭವಿಷ್ಯಕ್ಕಾಗಿ ವೀರಶೈವ ಮಹಾಸಭಾ ಚುನಾವಣೆಯಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಇದೆ. ಒಟ್ಟಾರೆ ಶಿವಮೊಗ್ಗ ಜಿಲ್ಲೆಯಲ್ಲಿ ವೀರಶೈವ ಮಹಾಸಭಾ ಅಧ್ಯಕ್ಷೀಯ ಚುನಾವಣೆ ಕುತುಹೂಲ ಮೂಡಿಸಿದ್ದು, ಅಖಾಡದಲ್ಲಿ ಗೆಲ್ಲೋರು ಯಾರು ಎಂದು ಕಾದುನೋಡಬೇಕಿದೆ.
—