
ದಾವಣಗೆರೆ :ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಕಾರ್ಮಿಕ ವರ್ಗದ ಹಿತ ಕಾಪಾಡಿಲ್ಲ ಎಂದು ಕಾರ್ಮಿಕ ಮುಖಂಡ ರಾಘವೇಂದ್ರ ನಾಯರಿ ಪ್ರಕಟಣೆ ಮೂಲಕ ಕಿಡಿಕಾರಿದ್ದಾರೆ.
ಕಾರ್ಮಿಕ ವರ್ಗದ ಹಿತವನ್ನು ಕಡೆಗಣಿಸಲಾದ ಬಜೆಟ್ ಇದು. ಅಂಗನವಾಡಿ, ಬಿಸಿಯೂಟ ಮತ್ತು ಆಶಾ ಕಾರ್ಯಕರ್ತೆಯರ ಹೋರಾಟ, ಬೇಡಿಕೆಗೆ ಮನ್ನಣೆ ನೀಡದೇ ಗೌರವಧನದಲ್ಲಿ ಕೇವಲ ಒಂದು ಸಾವಿರ ರೂಪಾಯಿಗಳ ಏರಿಕೆ ಮಾಡಲಾಗಿದೆ. ಇದು ಕಾರ್ಮಿಕವರ್ಗದ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ನಮ್ಮ ಹೋರಾಟವನ್ನು ಎಐಟಿಯುಸಿ ಸಂಘಟನೆಯ ನೇತೃತ್ವದಲ್ಲಿ ಮುಂದುವರೆಸುತ್ತೇವೆ.
ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸಬೇಕೆಂಬ ಒತ್ತಾಯಕ್ಕೂ ಸರಕಾರವು ಮನ್ನಣೆ ನೀಡಿಲ್ಲ. ಈ ಬಗ್ಗೆಯೂ ಹೋರಾಟ ಮುಂದುವರೆಯಲಿದೆ.


ಇನ್ನುಳಿದಂತೆ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸಲು ವಸತಿ ಶಾಲೆಗಳ ಆರಂಭ, ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಡಿ 5 ಲಕ್ಷ ರೂಪಾಯಿಗಳ ಮಿತಿ ಪೂರ್ಣಗೊಂಡಲ್ಲಿ ಹೃದ್ರೋಗ, ಕ್ಯಾನ್ಸರ್ ಚಿಕಿತ್ಸೆಗೆ ಹೆಚ್ಚುವರಿಯಾಗಿ 5 ಲಕ್ಷ ರೂಪಾಯಿ ನೀಡುವ ಯೋಜನೆ, 2500 ಪತ್ರಕರ್ತರಿಗೆ ಮಾಧ್ಯಮ ಸಂಜೀವಿನಿ ಯೋಜನೆ ಕಲ್ಪಿಸಿರುವುದು ಸ್ವಾಗತಾರ್ಹವಾಗಿದೆ.