ಚಳ್ಳಕೆರೆ: ಈ ಬಾರಿ ಊರಿನಲ್ಲಿ 45 ವರ್ಷದ ಬಳಿಕ ಕೆರೆ ತುಂಬಿತ್ತು..ಬಯಲುಸೀಮೆಯ ಬಡವರ ಬಾದಾಮಿ ಕಡಲೆಕಾಯಿ ಬೆಳೆದ ಜನರ ಕೈಯಲ್ಲಿ ಕಾಸು ಝಣ-ಝಣ ಎನ್ನುತ್ತಿತ್ತು…ನಿಂತಿದ್ದ ಕೊಳವೆಬಾವಿಗಳಲ್ಲಿ ಗಂಗೆ ಉಕ್ಕಿ ಹರಿದ ಕಾರಣ ಸುತ್ತಲೂ ಹಸಿರುಹೊದ್ದು ಮಲಗಿತ್ತು…ಇಡೀ ಊರು ಮದುವಣಗಿತ್ತಿಯಂತೆ ಶೃಂಗಾರಗೊಂಡಿತ್ತು. ಇವೆಲ್ಲವನ್ನು ನೋಡಿದ ಕರಿಬಸವೇಶ ತನ್ನ ಭಕ್ತರಿಗೆ ಇನ್ನಷ್ಟು ಘೋಷಣೆಗಳನ್ನು ಪ್ರೇರೆಪಿಸಿದನು..ಭಕ್ತರು “ಎಡಬಲಂದಡೆ’ ಎನ್ನುತ್ತಾ ಕರಿಬಸವೇಶ ಕುಳಿತ ರಥವನ್ನು ಎಳೆಯುತ್ತಾ ದೇವರ ನಾಮಸ್ಮರಣೆ ಮಾಡಿದರು. ವೀರಗಾಸೆ, ಗೊಂಬೆ ಕುಣಿತ, ಕೋಲಾಟ, ರಥೋತ್ಸವಕ್ಕೆ ಸಾಥ್ ನೀಡಿದವು.
ಇಡೀ ಊರಿನಲ್ಲಿ ಸಡಗರ ಸಂಭ್ರಮ ಹೆಚ್ಚಿತ್ತು..ರಥಕ್ಕೆ ಲೆಕ್ಕವಿಲ್ಲದಷ್ಟು ಹಾರಗಳು ಬಿದ್ದಿದ್ದವು..ಈ ನಡುವೆ ರಥದಲ್ಲಿ ಕುಳಿತ ಕರಿಬಸವೇಶ ಜನರ ಭಕ್ತಿ ನೋಡಿ ಮೂಕ ವಿಸ್ಮಿತನಾದ..ರಥ ಹೆಜ್ಜೆಯಿಂದ ಹೆಜ್ಜೆ ಹಾಕುತ್ತಾ ಮುಂದೆ ಸಾಗಿದಂತೆಲ್ಲ ಭಕ್ತರ ಘೋಷಣೆ ಮುಗಿಲುಮುಟ್ಟಿತ್ತು. ಈ ನಡುವೆ ಹೆಂಗಳೆಯರು ಮನೆ ಅಂಗಳಕ್ಕೆ ಜಲಸಿಂಪರಣೆ ಮಾಡಿ ಆರತಿ ಹಿಡಿದು ದೇವರನ್ನು ಸ್ವಾಗತಿಸಿದರು.
ಹೌದು…ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಜನರು ಶುಕ್ರವಾರ ಕರಿಬಸವೇಶನ ನಾಮಸ್ಮರಣೆಯಲ್ಲಿ ಮುಳುಗಿದ್ದರು..ಹಳ್ಳಿ ತೊರೆದು ರಾಜಾಧಾನಿ ಬೆಂಗಳೂರು, ವಿದೇಶಕ್ಕೆ ಹೋದ ಊರಿನ ಯುವಪಡೆ ಜಾತ್ರೆ ನಿಮಿತ್ತ ಹುಟ್ಟಿದ ಸ್ಥಳಕ್ಕೆ ಆಗಮಿಸಿದ್ದರು. ಬಿಳಿ ಶರ್ಟ್, ಲುಂಗಿ ಧರಿಸಿದ ಯುವಕರು ರಥದ ಮಣಿ ಎಳೆಯುತ್ತಾ ದೇವರನ್ನು ಪಾದಗಟ್ಟೆಗೆ ಕರೆತಂದರು. ರಥ ಮುಂದೆ ಹೋದಂತೆಲ್ಲ ಡೊಳ್ಳಿನ ನಾದ, ತಮಟೆ ಸದ್ದು ಭಕ್ತರನ್ನು ಇನ್ನಷ್ಟು ಭಕ್ತಿ ಪಾಶಕ್ಕೆ ಕರೆದುಕೊಂಡು ಹೋಗಿತ್ತು.
ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಜನ
ಜನರ ಕೈಯಲ್ಲಿ ಕಡಲೆಕಾಯಿ ಬೆಳೆದ ಹಣ ಕೈ ಸೇರಿದ ಕಾರಣ ಪ್ರತಿಯೊಬ್ಬರು ತಮಗೂ ಮತ್ತು ತಮ್ಮ ಕುಟುಂಬಕ್ಕೂ ಹೊಸಬಟ್ಟೆ ಖರೀದಿಸಿ ಜಾತ್ರೆಗೆ ಮೆರಗುತಂದರು. ಈ ನಡುವೆ ಜಾತ್ರೆಗೆ ಬಂದ ಬಳೆ ಅಂಗಡಿ, ಆಟಿಕೆ ಸಾಮಾನುಗಳ ಅಂಗಡಿಗಳಿಗೆ ಯುವತಿಯರು, ಹೆಂಗಸರು, ಮಕ್ಕಳು ಲಗ್ಗೆ ಇಟ್ಟರು. ಅಲ್ಲದೇ ಮನೆಯಲ್ಲಿ ನೆಂಟರಿಷ್ಟರು ಹೆಚ್ಚು ಬಂದಿದ್ದ ಕಾರಣ ಜಾತ್ರೆಗೆ ಒಂದು ಜತೆ ಬಳೆನಾದರೂ ಕೊಡಿಸು ಎಂದು ಮಾವಂದಿರಿಗೆ ಸೊಸೆಯಂದಿರು ಛೇಡಿಸುತ್ತಿದ್ದರು. ಎಲ್ಲರ ಮನೆಯಲ್ಲಿ ಹಬ್ಬದ ಸಂಭ್ರಮ ಮನೆಕಟ್ಟಿತ್ತು. ಬಾಳೆಹಣ್ಣು, ತರಕಾರಿ ವ್ಯಾಪಾರಿಗಳು ಮನೆಮನೆಗೆ ಹೋಗಿ ಏನು ಬೇಕಮ್ಮ ಎಂಬ ಪ್ರಶ್ನೆ ಇಡುತ್ತಿದ್ದರು. ಭಿಕ್ಷÄಕರು ಅಮ್ಮ ಏನಾದರೂ ಇದ್ದರೆ ಕೊಡಮ್ಮ ಎಂದು ಮುಂಜಾನೆ ಮನೆ ಮುಂದೆ ಕೇಳಿದ ವೇಳೆ ಆ ಕಡೆಯಿಂದ ನಮ್ಮನೆಗೆ ಇನ್ನೂ ಅಡುಗೆನೇ ಆಗಿಲ್ಲ, ನಾವೇ ತಿಂದಿಲ್ಲ ಮುಂದೆ ಹೋಗಮ್ಮ ಎಂಬ ಮಾತು ಸಾಮಾನ್ಯವಾಗಿತ್ತು.
ಹೇಗಿತ್ತು ರಥೋತ್ಸವ
ಎರಡು ದಿನವೇ ಮೊದಲೇ ಬಂದ ನೆಂಟರಿಷ್ಟರು, ಊರ ಮಂದಿ ಬೆಳ್ಳಂಬೆಳ್ಳಗ್ಗೆ ಸ್ನಾನ ಮಾಡಿ, ಹಣೆಗೆ ಮುಕ್ಕಣ್ಣ ಧರಿಸುವ ವಿಭೂತಿ ಧರಿಸಿ ಘಂಟೆ ಹೊಡೆದು ದೇವರ ದರ್ಶನ ಮಾಡಿ ಒಟ್ಟಿಗೆ ಸೇರಿದರು. ಇದಾದ ಬಳಿಕ ಊರ ಬಸವನಿಗೆ ಸುಂದರವಾಗಿ ಅಲಂಕಾರ ಮಾಡಲಾಯಿತು.
ಬಸವಣ್ಣನನ್ನು ಮುಂದೆ ಕಳಿಸಿದ ನಂತರ ಕರಿಬಸವೇಶ ಪಲ್ಲಕ್ಕಿಯಲ್ಲಿ ಬಂದು ಸುಮಾರು 50 ಅಡಿ ರಥದಲ್ಲಿ ಬೆಳಗ್ಗೆ 10.30ಕ್ಕೆ ಕುಳಿತು, ಹೊರಡಿ ಭಕ್ತರೇ ನಾನು ನಿಮ್ಮ ಸೇವೆಗೆ ಮಗ್ನಾನಾಗಿದ್ದೇನೆ ಎಂಬ ಮಾತುಗಳನ್ನಾಡಿ ಹೊರಟನು. ರಥಕ್ಕೆ ಕೈ ಹಾಕಿದ ಗ್ರಾಮಸ್ಥರು ಸಂತಸದಿಂದ ತನ್ನ ಸ್ವಾಮಿಯನ್ನು ಪಲ್ಲಾಗಟ್ಟೆತನಕ ಎಳೆದರು.
ಶೃಂಗಾರದ ಮಾಡಿದ ಪಟ್ಟದ ಗೂಳಿ ರಾಜ ಗಾಂಭೀರ್ಯದಿಂದ ಮುಂದೆ ಹೊರಟರೆ ಅದರ ಹಿಂದೆ ಭಕ್ತರು ಮೆಲ್ಲನೆ ಹೆಜ್ಜೆ ಮೇಲೆ ಹೆಜ್ಜೆ ಹಾಕಿದರು. ಪಾದಗಟ್ಟೆಯಿಂದ ಬಂದ ರಥದಲ್ಲಿ ಕುಳಿತ ಕರಿಬಸವೇಶ ಪುನಃ ಪಲ್ಲಕ್ಕಿಯಲ್ಲಿ ಕುಳಿತು ತನ್ನ ಆಸ್ಥಾನಕ್ಕೆ ಹೊರಟನು. ಈ ಸಂದರ್ಭದಲ್ಲಿ ಭಕ್ತರು, ಯುವತಿಯರು ದಿಂಡುಳ್ಳಿ ಇಷ್ಟಾರ್ಥಗಳನ್ನು ನೆರವೇರಿಸು ಕರಿಬಸವೇಶ ಎಂದು ಕೇಳಿಕೊಂಡರು…
ರೂ.1,15,000 ಗುರು ಕರಿಬಸವೇಶ್ವರ ಮುಕ್ತಿ ಬಾವುಟ ಹರಾಜು
ದೇವರ ಮೇಲಿರುವ ಮುಕ್ತಿ ಬಾವುಟ ತೆಗೆದುಕೊಂಡರೇ ಒಳ್ಳೆಯದಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಹರಾಜು ಕೂಗಲಾಯಿತು. ಮೊದಲಿಗೆ ಮಾಂತಣ್ಣ ತಿಪ್ಪೇಶಿ 50 ಸಾವಿರಕ್ಕೆ ಹರಾಜು ಆರಂಭಿಸಿದರು. ಬಳಿಕ ಈ ಹರಾಜು 75 ಸಾವಿರಕ್ಕೆ ಹೋಯಿತು. ಅಲ್ಲಿಂದ ಒಂದು ಲಕ್ಷಕ್ಕೆ ಏರಿತು. ಅಂತಿಮವಾಗಿ ಶ್ರೀ ಗುರು ಕರಿಬಸವೇಶ್ವರ ಮುಕ್ತಿ ಬಾವುಟ ರೂ.1,15,000 ಜಂತ್ಕಲ್ ದಿ|| ಮಲ್ಲಿಕಾರ್ಜುನಪ್ಪನವರ ಪುತ್ರ ತಿಪ್ಪೇಸ್ವಾಮಿ ಹರಾಜು ಕೂಗಿ ತಮ್ಮದಾಗಿಸಿಕೊಂಡರು.
ಸುಮಾರು ಎರಡು ಲಕ್ಷ ರೂ.ಗೂ ಹೆಚ್ಚು ಹಾರ
ಈ ಬಾರಿ ದೇವರಿಗೆ ಬಡವರು, ಕೂಲಿಕಾರ್ಮಿಕರು ಸೇರಿದಂತೆ ಇತರರು ರೂ.500ರೂ.ಗೂ ಹೆಚ್ಚು ಮೌಲ್ಯದ ಹಾರವನ್ನು ದೇವರಿಗೆ ಅರ್ಪಿಸಿದರು. ಪ್ರತಿ ಮನೆಯವರು ಕೂಡ ದೊಡ್ಡ ಹಾರವನ್ನು ಈ ಬಾರಿ ಹಾಕಿದ್ದರು. ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮೌಲ್ಯದ ಹಾರಗಳು ದೇವರಿಗೆ ಅರ್ಪಿತವಾಗಿದ್ದವು.
5 ಸಾವಿರಕ್ಕೂ ಹೆಚ್ಚು ಜನ
ಈ ಬಾರಿ ತಿಮ್ಮಪ್ಪಯ್ಯನಹಳ್ಳಿ ಗ್ರಾಮಕ್ಕೆ ಸುಮಾರು 5 ಸಾವಿರಕ್ಕೂ ಹೆಚ್ಚು ಜನ ಆಗಮಿಸಿದ್ದರು. ಚಿತ್ರದುರ್ಗ, ಆಂಧ್ರಪ್ರದೇಶ, ಚಳ್ಳಕೆರೆ, ಭದ್ರಾವತಿ, ಉಡೇಗೋಳ, ಗಂಗಾವತಿ, ಕಾನಾಮಡಗು ಸೇರಿದಂತೆ ಇತರೆಡೆಯಿಂದ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿ ದರ್ಶನ ಪಡೆದರು.
ಭಕ್ತಿ ಭಾವ ಮತ್ತು ಧಾರ್ಮಿಕ ಭಾವನೆಗಳ ನೆಲೆ ನಾಡು
ಭಕ್ತಿ ಭಾವ ಮತ್ತು ಧಾರ್ಮಿಕ ಭಾವನೆಗಳ ನೆಲೆ ನಾಡು ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕು ಎಂದು ನಿಕಟ ಪೂರ್ವ ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು. ಎಲ್ಲಿ ಭಕ್ತಿ ಮತ್ತು ನಂಬಿಕೆಗಳಿರುತ್ತದೆಯೋ ಅಲ್ಲೇ ಶಾಂತಿ ಮತ್ತು ಸಮೃದ್ಧಿ ನೆಲೆಸಿರುತ್ತದೆ. ಜಾತಿ ಪಕ್ಷ ಮತ್ತು ವರ್ಗರಹಿತವಾದಂತ ಸಮಾಜ ನಿರ್ಮಾಣವಾಗಬೇಕಾದರೆ ಇಂತಹ ಭಾವನೆಗಳು ಸರ್ವಕಾಲಕ್ಕೂ ಜೀವಂತವಾಗಿರಬೇಕು. ಈ ತಾಲೂಕುಗಳಲ್ಲಿರುವಂತಹ ಈ ವಾತಾವರಣವನ್ನು ರಾಜ್ಯದ ಬೇರೆ ಎಲ್ಲೂ ಕೂಡ ಕಾಣಲು ಸಾಧ್ಯವಿಲ್ಲ. ಕರಿಬಸವೇಶ್ವರ ಸ್ವಾಮಿ ಇಡೀ ತಾಲೂಕಿನ ಎಲ್ಲ ಜನತೆಗೆ ಸುಖ ಶಾಂತಿ ನೆಮ್ಮದಿ ಮತ್ತು ಐಶ್ವರ್ಯವನ್ನು ನೀಡಿ ಆಶೀರ್ವದಿಸಲಿ ಎಂದರು.
ದೊಡ್ಡಗೌಡ್ರ ವಂಶಸ್ಥರಿಂದ ಅನ್ನಸಂತರ್ಪಣೆ
ರಥೋತ್ಸವಕ್ಕೆ ಆಗಮಿಸಿದ ಭಕ್ತಾಧಿಗಳಿಗೆ ತಿಮ್ಮಪ್ಪಯ್ಯನಹಳ್ಳಿ ಗ್ರಾಮದ ದೊಡ್ಡಗೌಡ್ರ ವಂಶಸ್ಥರಿAದ ಅನ್ನಸಂತರ್ಪಣೆ ನೆರವೇರಿಸಲಾಯಿತು.ರಥೋತ್ಸವಕ್ಕೆ ಜಾನಪದ ಕಲೆಗಳಾದ ಕೋಲಾಟ, ವೀರಗಾಸೆ, ನಂದಿಕೋಲು, ತಮಟೆ, ಜನರು ನೋಡುವುದಕ್ಕೆ ಎರಡು ಕಣ್ಣು ಸಾಲದಾಯಿತು. ರಥೋತ್ಸವಕ್ಕೆ ಜೆ.ಸಿ.ಬಿ. ಮುಖಾಂತರ ಸೇಬಿನ ಹಾರ ಹಾಕಿದರು.
ನಿವೃತ್ತ ಉಪನ್ಯಾಸಕ ಡಿ.ಟಿ. ನಂದೀಶ್ ಮಾತನಾಡಿ, ತಿಮ್ಮಪ್ಪಯ್ಯನಹಳ್ಳಿ ಗ್ರಾಮವು ಅತ್ಯಂತ ಭಕ್ತಿ ಕೇಂದ್ರವಾಗಿದ್ದು ಈ ರಥೋತ್ಸವಕ್ಕೆ ಶತಮಾನಗಳ ಇತಿಹಾಸವಿದೆ. ಈ ರಥಕ್ಕೆ 102 ವರ್ಷಗಳ ಕಾಲದಿಂದಲೂ ನಿರಂತರವಾಗಿ ಸುತ್ತಮುತ್ತಲಿನ ಎಲ್ಲಾ ಗ್ರಾಮಸ್ಥರು ಯಾವುದೇ ಜಾತಿ, ಮತ ಬೇಧಗಳಿಲ್ಲದೇ ಇದೂ ಒಂದು ಸರ್ವಜನಾಂಗದ ಶಾಂತಿಯತೋಟ ಎಂಬAತೆ ವರ್ಷದಿಂದ ವರ್ಷಕ್ಕೆ ಅಭೀವೃದ್ಧಿಯಾಗುತ್ತಾ ಬಂದಿದೆ. ಈ ಗ್ರಾಮದಲ್ಲಿ ನಾಟಕ ಸಂಘಗಳಿವೆ. ಈ ವರ್ಷ ಭರ್ಜರಿ ಮಳೆಯಾಗಿರುವುದರಿಂದ ಭಕ್ತಾಧಿಗಳು ಉತ್ಸುಕರಾಗಿದ್ದಾರೆ ಎಂದು ಹೇಳಿದರು. ಅಂತಿಮವಾಗಿ ಸಂಜೆ ದೇವರು ಗುಡಿದುಂಬಿದ ಮೇಲೆ ಭಕ್ತರು ಅವರ ಮನೆಗಳಿಗೆ ಹೋಗಿ ಹೋಳಿಗೆ, ಕರಿಗಡುಬು, ಕೋಸಂಬರಿ, ಸೊಂಡಿಗೆ, ಅನ್ನ, ತಿಳಿಸಾರು ಊಟ ಮಾಡಿ ಕರಿಬಸವೇಶನ ನೆನೆಯುತ್ತಾ ದಿಂಬಿಗೆ ಹೊರಗಿ ನಿದ್ದೆಗೆ ಜಾರಿದರು. ಈ ಸಂದರ್ಭದಲ್ಲಿ ಜಿ.ತಿಪ್ಪೇಸ್ವಾಮಿ (ಕೋಟಿ), ತಿಪ್ಪೇಶ್ ಎಲಿಯಾರ್, ಎಚ್.ಬಿ.ರವೀಂದ್ರ, ಕೆ.ಎಸ್.ತಿಪ್ಪೇಸ್ವಾಮಿ, ದುರ್ಗದ ಬಸವರಾಜ್, ಎಂ.ಎನ್.ಬಸವರಾಜಯ್ಯ, ಜಿ.ಎಸ್.ಎನ್.ಸತೀಶ್, ಟಿ.ಎಂ.ತಿಪ್ಪೇಸ್ವಾಮಿ, ಗುಮ್ಮ ಶ್ರೀಧರ್, ಜಿ.ಎಸ್.ಸತೀಶ್ಕುಮಾರ್, ಜವಳಿ ಕಿರಣ್, ಆರ್.ಟಿ.ರಾಜು, ಜಿ.ಆರ್.ತಿಪ್ಪೇಸ್ವಾಮಿ, ಜಾಲಕ್ಕರ ಬಸವರಾಜ್, ಎ.ಎಂ.ವಿನಯ್ಕುಮಾರ್, ಅಂಗಡಿ ತಿಪ್ಪೇಸ್ವಾಮಿ, ರುದ್ರಮುನಿ, ವೃಷಬೇಂದ್ರಪ್ಪ, ಅಂಗಡಿ ಮಂಜಣ್ಣ, ಮಾಜಿ ಜಿ.ಪಂ. ಅಧ್ಯಕ್ಷ ಬಾಲರಾಜ್, ವಿಧಾನಪರಿಷತ್ ಮಾಜಿ ಸದಸ್ಯ ಜಯಮ್ಮ, ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರವೀಂದ್ರ ಗ್ರಾಮ ಪಂಚಾಯತಿ ಸದಸ್ಯರುಗಳಾದಂತಹ ರೇವಣ್ಣ, ಶೈಲಜಾ ತಿಪ್ಪೇಸ್ವಾಮಿ, ಅಶೋಕ, ಶಾಂತಮ್ಮ ರಾಜಣ್ಣ, ಕೋಟೆಪ್ಪ, ರಾಜು, ರೇವಣ್ಣ, ಶೈಲಜಮಂಜಣ್ಣ, ಶಿಕ್ಷಕರಾದ ಶಿವಣ್ಣ, ತಿಮ್ಮಪ್ಪಯ್ಯನಹಳ್ಳಿ ಗ್ರಾಮಸ್ಥರು, ಭಕ್ತಾಧಿಗಳು, ಪೊಲೀಸ್ ಇಲಾಖೆಯ ಸಿಬ್ಬಂದಿವರ್ಗ, ದೇವಸ್ಥಾನ ಸಮಿತಿ ಸದಸ್ಯರು, ಮುಂತಾದವರು ಉಪಸ್ಥಿತರಿದ್ದರು.
—
102ನೇ ವರ್ಷದ ಶ್ರೀ ಗುರು ಕರಿಬಸವೇಶ್ವರ ಕಾರ್ತಿಕ
ತಿಮ್ಮಪ್ಪಯ್ಯನಹಳ್ಳಿ ಗ್ರಾಮದಲ್ಲಿ ಯಾವುದೇ ಜಾತಿ,ಮತ ಬೇಧವಿಲ್ಲದ ಎಲ್ಲಾರು ಒಟ್ಟುಗೂಡಿ 102ನೇ ವರ್ಷದ ಶ್ರೀ ಗುರು ಕರಿಬಸವೇಶ್ವರ ಕಾರ್ತಿಕ ಶುಕ್ರವಾರದಂದು ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ವೈಭವದಿಂದ ಜರುಗಿತು.ಗ್ರಾಮದಲ್ಲಿ ಹಬ್ಬದ ವಾತಾವರಣ ಮೂಡಿತು. ಸಾವಿರಾರು ಭಕ್ತರು ಆಗಮಿಸಿ ಸ್ವಾಮಿ ದರ್ಶನ ಪಡೆದು ಸ್ವಾಮಿ ಕೃಪೆಗೆ ಪಾತ್ರರಾದರು. ಸ್ವಾಮಿಯ ರಥವು ಪಾದಗಟ್ಟೆಯವರೆಗೆ ಸಂಚರಿಸಿ ಸಾಯಂಕಾಲ 3:15ಕ್ಕೆ ರಥ ವಾಪಾಸ್ಸಾಯಿತು. ಅನೇಕ ಭಕ್ತಾಧಿಗಳು ರಥದ ಮುಂಭಾಗದಲ್ಲಿ ಉರುಳು ಸೇವೆ ಮಾಡಿದರು.