
ಭದ್ರಾವತಿ : ಸದ್ಯ ಉಕ್ಕಿನನಗರಿ ಈಗ ರಾಜ್ಯಮಟ್ಟದ ಸುದ್ದಿಯಲ್ಲಿ ಇದ್ದು ಶಾಸಕ ಬಿ.ಕೆ.ಸಂಗಮೇಶ್ ಪುತ್ರನ ಮೇಲಿರುವ ಆರೋಪ ಹಿನ್ನೆಲೆ ಪ್ರಸ್ತುತ ಜೆಡಿಎಸ್, ಬಿಜೆಪಿ ಮುಗಿಬಿದಿದ್ದು, ದಿನೇ, ದಿನೇ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ನ ಶಾರದ ಅಪ್ಪಾಜಿ ಈಗ ಫಿಲ್ಡ್ ಗೆ ಎಂಟ್ರಿಕೊಟ್ಟಿದ್ದು, ಶಾಸಕ ಸಂಗಮೇಶ್ ವಿರುದ್ಧ ಹರಿಹಾಯ್ದಿದ್ದಾರೆ.
ಶಾಸಕರ ಬೆಂಬಲಿಗರಿಂದ ಗಾಂಜಾ ಮಾಫಿಯಾ
ಭದ್ರಾವತಿಯಲ್ಲಿರುವುದು ವಿಭಿನ್ನ ರಾಜಕಾರಣ. ಶಾಸಕರ ಬೆಂಬಲಿಗರಿಂದ ಅರಣ್ಯ, ಮರಳು, ಇಸ್ಪೀಟ್ ಹಾಗೂ ಗಾಂಜಾ ಮಾಫಿಯಾ ವ್ಯಾಪಕವಾಗಿದೆ’ ಎಂದು ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿ ಆರೋಪಿಸಿದ್ದಾರೆ.
‘ಭದ್ರಾವತಿಯಲ್ಲಿ ಅಧಿಕಾರಿಗಳಿಗೆ ಕೆಲಸ ಮಾಡಲು ಬಿಡುತ್ತಿಲ್ಲ. ಅವರೆಲ್ಲ ಶಾಸಕರ ಹಾಗೂ ಸಂಬಂಧಿಗಳ ಚೇಲಾಗಳಾಗಿದ್ದಾರೆ’ . ‘ಅಧಿಕಾರಿಗಳ ಬಳಿ ಯಾವುದಾದರೂ ಸಣ್ಣ ದೂರು ಒಯ್ದರೂ ಒಮ್ಮೆ ಎಂಎಲ್ಎ ಮನೆಗೆ ಹೋಗಿ ಬನ್ನಿ ಎಂದು ವಾಪಸ್ ಕಳಿಸುತ್ತಾರೆ. ಈ ಮಟ್ಟಿಗೆ ಅಧಿಕಾರಿಗಳು ಅಸಹಾಯಕರಾದರೆ ಭದ್ರಾವತಿ ಜನರು ಯಾರ ಬಳಿ ನ್ಯಾಯ ಕೇಳಬೇಕು?’ ಎಂದು ಪ್ರಶ್ನಿಸಿದ್ದಾರೆ.
‘ಇದುವರೆಗೂ ಎಷ್ಟೇ ದೂರು ಕೊಟ್ಟರೂ ಯಾವ ಎಸ್ಪಿ, ಡಿವೈಎಸ್ಪಿಯೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ತಾಲ್ಲೂಕು ಕಚೇರಿಯಲ್ಲೂ ಕೆಲಸ ಆಗುತ್ತಿಲ್ಲ. ಎಸಿ, ಡಿಸಿಯೂ ಕೆಲಸ ಮಾಡುತ್ತಿಲ್ಲ. ಅವರಿಗೆ ಕಚೇರಿ ಏಕೆ ಬೇಕು? ಸರ್ಕಾರಿ ಸಂಬಳ ಏಕೆ ಬೇಕು’ ಎಂದು ಕಿಡಿಕಾರಿದರು.


‘ಭದ್ರಾವತಿಯಲ್ಲಿ ಹೆಣ್ಣುಮಕ್ಕಳು ಮುಖ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. ಇಷ್ಟೆಲ್ಲ ದೂರುಗಳು ಬಂದರೂ ಸಚಿವರು, ಗೃಹ ಸಚಿವರು ಹೀಗೆ ಎಲ್ಲರೂ ಕಣ್ಣು ಮುಚ್ಚಿ ಕುಳಿತಿದ್ದಾರೆ. ಈ ಪರಿಸ್ಥಿತಿ ಬದಲಾಗಬೇಕು. ನೊಂದವರಿಗೆ ನ್ಯಾಯ ಬೇಕು. ಇನ್ನು ಸ್ವಲ್ಪ ದಿನವಾದರೆ ಯಾವ ಹೆಣ್ಣುಮಕ್ಕಳೂ ಸಾರ್ವಜನಿಕವಾಗಿ ಓಡಾಡಲು ಆಗುವುದಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
‘ಭದ್ರಾವತಿಯಲ್ಲಿ ಎರಡು ವರ್ಷಗಳಿಂದ ಒಂದು ಪೈಸೆಯ ಅಭಿವೃದ್ಧಿ ಕೆಲಸವೂ ಆಗಿಲ್ಲ. ಮಟ್ಕಾ, ಇಸ್ಪೀಟ್ ಬಿಟ್ಟರೆ ಯಾವುದಕ್ಕೂ ಅಲ್ಲಿ ಬೆಂಬಲ ಇಲ್ಲ. ದೊಡ್ಡೇರಿ ಭಾಗದಲ್ಲಿ 15 ಎಕರೆ ಕಾಡು ಕಡಿದಿದ್ದಾರೆ. ಡಿಎಫ್ಒಗೆ ದೂರು ಕೊಟ್ಟರೂ ಯಾವ ಕ್ರಮವನ್ನೂ ಕೈಗೊಂಡಿಲ್ಲ. ವಾಚರ್ ಅನ್ನು ರೂಂನಲ್ಲಿ ಕೂಡಿ ಹಾಕಿ ಹೊಡೆದಿದ್ದಾರೆ’ ಎಂದು ಆರೋಪಿಸಿದ್ದಾರೆ.
‘2 ವರ್ಷಗಳಿಂದ ಎಂಎಲ್ಎ ನಾಪತ್ತೆ’
ಭದ್ರಾವತಿ ಎಂಎಲ್ಎ ಎಲ್ಲಿದ್ದಾರೆ?. ಗೆದ್ದು ಎರಡು ವರ್ಷವಾಗಿದೆ. ಇವತ್ತಿನವರೆಗೂ ಕಾಣಿಸಿಕೊಂಡಿಲ್ಲ. ಅವರು ಎಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಅಲ್ಲಿ ಎಂಎಲ್ಎ ಪ್ರೋಟೊಕಾಲ್ ಸತ್ತು ಹೋಗಿದೆ. ಯಾವುದೇ ಕಾಮಗಾರಿಯ ಭೂಮಿ ಪೂಜೆ ಮಾಡಿದರೂ ಅವರ ಸಂಬಂಧಿಗಳು ಬರುತ್ತಾರೆ. ಎಂಎಲ್ಎ ಕೆಲಸ ಅವರೇ ಮಾಡಬೇಕು. ಚುನಾಯಿತ ಪ್ರತಿನಿಧಿಯ ಕೆಲಸ ಅವರ ಸಂಬಂಧಿಕರು ಮಾಡಬೇಕಾ’ ಎಂದು ಶಾರದಾ ಅಪ್ಪಾಜಿ ಪ್ರಶ್ನಿಸಿದರು.
ಬ್ಯಾಚ್, ಶಿಫ್ಟ್ವೈಸ್ ಇಸ್ಪೀಟ್ ಆಟ!
ಭದ್ರಾವತಿಯಲ್ಲಿ 12 ಕಡೆ ಇಸ್ಪೀಟ್ ಆಡಿಸಲಾಗುತ್ತಿದೆ. ಎಲ್ಲೆಲ್ಲಿ ಇಸ್ಪೀಟ್ ಅಡ್ಡೆಗಳಿವೆ ಎಂಬುದನ್ನು ಬೇಕಿದ್ದರೆ ನಾನೇ ಕಾರಿನಲ್ಲಿ ಕರೆದೊಯ್ದು ತೋರಿಸುವೆ. ಕೆಲಸದಲ್ಲಿ ಶಿಫ್ಟ್ವೈಸ್, ಬ್ಯಾಚ್ವೈಸ್ ಇರುವಂತೆ ಅಲ್ಲಿ ಇಸ್ಪೀಟ್ ಆಡಿಸಲು ಶಿಫ್ಟ್, ಬ್ಯಾಚ್ ಮಾಡುತ್ತಾರೆ. ಯಾರಾದರೂ ವಿರೋಧಿಸಿದರೆ 307 ಇಲ್ಲವೇ ಅಟ್ರಾಸಿಟಿ ಕೇಸ್ ಹಾಕಿ ಹೆದರಿಸುವ ಕೆಲಸ ನಡೆಯುತ್ತಿದೆ ಎಂದು ಶಾರದಾ ಗಂಭೀರವಾಗಿ ಆರೋಪಿಸಿದ್ದಾರೆ.
ಜೆಡಿಎಸ್ ಪ್ರತಿಭಟನೆ ನಾಳೆ, ನಿಖಿಲ್ ಭಾಗಿ
ಭದ್ರಾ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ತಡೆಯಲು ಹೋಗಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಕೆ.ಕೆ.ಜ್ಯೋತಿ ಅವರಿಗೆ ಅವಾಚ್ಯವಾಗಿ ನಿಂದಿಸಿರುವುದನ್ನು ಖಂಡಿಸಿ ಫೆ. 14ರಂದು ಬೆಳಿಗ್ಗೆ 11ಕ್ಕೆ ಭದ್ರಾವತಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕಡಿದಾಳ್ ಗೋಪಾಲ್ ತಿಳಿಸಿದರು.
ರಾಜಿ ಪ್ರಶ್ನೆಯೇ ಇಲ್ಲ; ಅಧಿಕಾರಿಗಳ ರಕ್ಷಣೆಗೆ ಬದ್ಧ: ಮಧು ಬಂಗಾರಪ್ಪ
ಶಿವಮೊಗ್ಗ: ‘ಅಧಿಕಾರಿಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಸಾರ್ವಜನಿಕರ ಕೆಲಸಗಳಿಗಾಗಿಯೇ ಇರುವ ಅಧಿಕಾರಿಗಳನ್ನು ಯಾರೇ ಅವಾಚ್ಯವಾಗಿ ನಿಂದಿಸಿ, ಅವಮಾನಿಸಿ, ದೌರ್ಜನ್ಯ ಎಸಗಿದರೂ ಅವರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಹಿಂದೇಟು ಹಾಕುವುದಿಲ್ಲ’ ಎಂದು ಹೇಳಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೇ ರಿಪಬ್ಲಿಕ್ ಇಲ್ಲ ಎಂದು ಹೇಳಿದರು.
ಭದ್ರಾವತಿಯಲ್ಲಿ ಮಹಿಳಾ ಅಧಿಕಾರಿಗೆ ಅವಾಚ್ಯವಾಗಿ ನಿಂದಿಸಿ, ಅವಮಾನಿಸಿದ ಪ್ರಕರಣದ ಕುರಿತ ಹೊಸನಗರದಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರಿಗೆ ಕರೆ ಮಾಡಿ ಕಾನೂನು ಪ್ರಕ್ರಿಯೆ ಬಗ್ಗೆ ಮಾಹಿತಿ ಪಡೆದಿದ್ದೇನೆ. ಪ್ರಕರಣದ ತನಿಖೆ ವಿಚಾರದಲ್ಲಿ ಅವರಿಗೆ ಸಂಪೂರ್ಣ ಅಧಿಕಾರ ಕೊಟ್ಟಿದ್ದೇನೆ. ನಮ್ಮ ಅಧಿಕಾರಿಗಳ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ’ ಎಂದರು.
ಕ್ರಮಕ್ಕೆ ಕೆ.ಎನ್.ರಾಜಣ್ಣ ಒತ್ತಾಯ
ಬೆಂಗಳೂರು: ‘ಅಧಿಕಾರಿಗಳನ್ನು ಅವಾಚ್ಯ ಪದಗಳಿಂದ ನಿಂದಿಸುವುದು ಶಿಕ್ಷಾರ್ಹ ಅಪರಾಧ’ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಶಾಸಕರ ಮಕ್ಕಳೇ ಇರಬಹುದು, ಮಂತ್ರಿಗಳ ಮಕ್ಕಳೇ ಇರಬಹುದು, ಅಧಿಕಾರಿಗಳನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದರೆ ತಕ್ಷಣವೇ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದ್ದಾರೆ.