


ನಂದೀಶ್ ಭದ್ರಾವತಿ ದಾವಣಗೆರೆ
ಕಾಂತರಾಜು ಆಯೋಗದ ಅಂತಿಮ ವರದಿಯನ್ನು ಇಂದು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅಧಿಕೃತವಾಗಿ ಸಲ್ಲಿಸಿದ್ದು, ಇದನ್ನು ಅಖಿಲ ಭಾರತ ವೀರಶೈವ ಮಹಾಸಭಾ ವಿರೋಧಿಸಿದೆ. ಅಲ್ಲದೇ ಈ ವರದಿಯನ್ನು ಅಂಗೀಕರಿಸಬಾರದು ಎಂದು ಒತ್ತಾಯಿಸಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕಾರ್ಯದರ್ಶಿ ರೇಣುಕಾ ಪ್ರಸನ್ನ, ಈ ವರದಿಯ ಬಗ್ಗೆ ಈಗಾಗಲೇ ಹಲವು ಅನುಮಾನಗಳಿರುವ ಹಿನ್ನೆಲೆಯಲ್ಲಿ ಈ ವರದಿಯನ್ನು ಸರ್ಕಾರ ಅಂಗೀಕರಿಸಬಾರದು.

ಮೊದಲಿಗೆ ಜಾತಿಗಣತಿ ಸಮೀಕ್ಷೆಯ ಉದ್ದೇಶದಿಂದಲೇ ಕಾಂತರಾಜು ಆಯೋಗ ರಚಿಸಲಾಯಿತು. ತದನಂತರ ಇದು “ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ”ಯಾಗಿ ಬದಲಾಯಿಸಲಾಯಿತು. ಈ ವರದಿ ಸಿದ್ದವಾಗಿ ಸುಮಾರು 8 ವರ್ಷಗಳಾಗಿದ್ದು, ಈ ಅವಧಿಯಲ್ಲಿ ಜಾತಿವಾರು ಜನಸಂಖ್ಯೆಯಲ್ಲಿ ಸಾಕಷ್ಟು ಏರುಪೇರುಗಳಾಗಿವೆ. ಕೋವಿಡ್ ನಂತರದ ಕಾಲಘಟ್ಟದಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿವೆ. ವರದಿಯನ್ನು ಯಥಾವತ್ ಅಂಗೀಕರಿಸುವುದರಿಂದ ಎಲ್ಲಾ ಸಮುದಾಯಗಳಿಗೂ ಅನ್ಯಾಯವಾಗುತ್ತದೆ. ಹೀಗಾಗಿ ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ ಈ ವರದಿಗೆ ಮೊದಲಿನಿಂದಲೂ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ ಎಂದಿದ್ದಾರೆ.
ದಾವಣಗೆರೆಯಲ್ಲಿ ತಿಂಗಳಲ್ಲಿ ನಡೆದ 24ನೇ ಮಹಾಧಿವೇಶನದಲ್ಲಿ ಕೂಡಾ ಈ ವರದಿಯನ್ನು ಅಂಗೀಕರಿಸದಂತೆ ನಿರ್ಣಯ ಕೈಗೊಳ್ಳಲಾಗಿದೆ. ವೀರಶೈವ ಲಿಂಗಾಯತ ಸಮುದಾಯ ಕರ್ನಾಟಕದ ಅತಿದೊಡ್ಡ ಸಮುದಾಯಗಳಲ್ಲಿ ಒಂದಾಗಿದ್ದು ನಮ್ಮ ಸಮುದಾಯದವರು 8 ವರ್ಷಗಳ ಹಿಂದೆ ಅರಿವಿನ ಕೊರತೆ ಮತ್ತು ಮಾಹಿತಿ ಕೊರತೆಯಿಂದ ನಿಗದಿಪಡಿಸಿದ ಸಂಕೇತವನ್ನು ನಮೂದಿಸದೇ ಇರುವುದರಿಂದ ಇಡೀ ಸಮುದಾಯದ ಜನಸಂಖ್ಯೆಯೇ ಕ್ಷೀಣಿಸಿದೆ. ಗಣತಿಗೆ ನಿಯುಕ್ತರಾದ ಸಿಬ್ಬಂದಿ ಹಲವರ ಮನೆಗಳಿಗೆ ಖುದ್ದು ಭೇಟಿ ನೀಡದೇ ಸರಿಯಾದ ಮಾಹಿತಿಯನ್ನೂ ದಾಖಲಿಸಿಲ್ಲ.
ಈ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಇದನ್ನು ತರಾತುರಿಯಲ್ಲಿ ಅಂಗೀಕರಿಸಿದರೆ ಇದರಿಂದ ಉಪಯೋಗಕ್ಕಿಂತ ಹಾನಿಯೇ ಹೆಚ್ಚಾಗುತ್ತದೆ. ಈ ಹಿನ್ನಲೆಯಲ್ಲಿ ಈ ವರದಿ ತಿರಸ್ಕರಿಸಬೇಕು ಎಂದು ಮಹಾಸಭಾ ಮತ್ತೊಮ್ಮೆ ಒತ್ತಾಯಿಸಿದೆ.
ಸರ್ಕಾರ ವಿವಿಧ ಸಮುದಾಯದ ವಿರೋದ ನಿರ್ಲಕ್ಷಿಸಿ ವರದಿ ಅಂಗೀಕರಿಸಿದರೆ ರಾಜ್ಯದ ಎಲ್ಲಾ ಹರ-ಗುರು ಚರಮೂರ್ತಿಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟವನ್ನು ಮಹಾಸಭಾ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.