ಶಿವಮೊಗ್ಗ : ಪತ್ರಕರ್ತರಲ್ಲಿ ಕೇಳಿಸಿಕೊಳ್ಳುವ, ಆಲೋಚನೆ ಮಾಡುವ, ಚಿಂತನೆ ಮಾಡುವ ಗುಣ ಕಡಿಮೆ ಆಗಿದೆ. ಹಾಗಾಗಿ ಪತ್ರಿಕೋದ್ಯಮದ ಗುಣ ಮಟ್ಟವೂ ಕುಸಿಯುತ್ತಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ವಿಷಾಧಿಸಿದರು.
ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆ ಶಿವಮೊಗ್ಗ ಪ್ರೆಸ್ ಟ್ರಸ್ಟ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಇವರ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಶಿವಮೊಗ್ಗ ಜಿಲ್ಲೆ ಚಳವಳಿಗಳ ತವರೂರು, ಇಲ್ಲಿನ ಅನೇಕ ಮಂದಿ ಪತ್ರಕರ್ತರು ರಾಜ್ಯ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ .ಇದು ಈ ಊರಿನ ವಿಶೇಷ. ಪತ್ರಕರ್ತರು ಹೆಚ್ಚಾಗಿದ್ದಾರೆ, ಪತ್ರಿಕೆಗಳು ಹೆಚ್ಚಿವೆ. ಇದು ಗೌರವದ ಸಂಕೇತವು ಹೌದು ಎಂದರು.
ಆದರೆ ಇಂದಿನ ಪತ್ರಿಕೋಧ್ಯಮ ಯಾವ ಸುದ್ದಿಗೆ ಮಹತ್ವ ಕೊಡಬೇಕೋ ಅದಕ್ಕೆ ಕೊಟ್ಟಿಲ್ಲ. ಕೊಡುವ ಬಗ್ಗೆ ತಾಳ್ಮೆಯೂ ಇಲ್ಲ. ಹಿಂದೆ ಓದುಗರೇ ದೊರೆ ಅಂತ ಎನ್ನುವ ಮಾತು ಇತ್ತು, ಅದು ಈಗ ಇಲ್ಲ. ಓದುಗ ದೊರೆಯಾಗಿ ಉಳಿದಿಲ್ಲ, ಇದು ತುಂಬಾ ವಿಷಾದದ ಸಂಗತಿಯಾಗಿದೆ ಎಂದರು.
ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮದ ಜನರಿಗೆ ತಾಳ್ಮೆ ಇಲ್ಲ. ಕ್ರೀಯಾಶೀಲತೆ ಕಡಿಮೆ ಆಗುತ್ತಿದೆ. ಪತ್ರಿಕೋದ್ಯಮಕ್ಕೆ ಬರುವವರು ಮಧ್ಯಮ ವರ್ಗ, ಬಡವರ ಕುಟುಂಬದಿಂದ ಬಂದವರೆ ಹೆಚ್ಚಿದ್ದಾರೆ. ಆದರೂ ಬಡವರ ಪರವಾದ ಕಾಳಜಿ ಮಾತ್ರ ಕಾಣುತ್ತಿಲ್ಲ. ಜನರಿಗೆ ಏನು ಕೊಡಬೇಕೋ ಅದನ್ನು ನಾವು ಕೊಡುತ್ತಿಲ್ಲ. ಹಾಗಾಗಿ ಪತ್ರಿಕೆಗಳ ಬಗ್ಗೆ ಜನರಲ್ಲಿ ವಿಶ್ವಾಸ ಉಳಿಯುತ್ತಿಲ್ಲ, ಭವಿಷ್ಯದಲ್ಲಿ ಪತ್ರಿಕೋದ್ಯಮಕ್ಕೆ ಬರುವ ವಿದ್ಯಾರ್ಥಿಗಳು ಒಮ್ಮೆ ಈ ಬಗ್ಗೆ ಚಿಂತನೆ ಮಾಡಬೇಕಿದೆ ಎಂದರು.
ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಕೊಡಬೇಕು ಎನ್ನುವುದು ಬಹುದಿನದ ಬೇಡಿಕೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಅದಕ್ಕೆ ಭರವಸೆ ನೀಡಿದ್ದಾರೆ. ಅದು ಶೀಘ್ರದಲ್ಲಿಯೇ ಜಾರಿಗೆ ಬರಲಿದೆ. ಇನ್ನೊಂದು ತಿಂಗಳಲ್ಲಿ ಗ್ರಾಮೀಣ ಬಸ್ ಪಾಸ್ ಸಿಗಲಿದೆ ಎಂದರು.
ಆರೋಗ್ಯದ ವಿಚಾರಕ್ಕೆ ಸಂಬಂಧಿಸಿದಂತೆ ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರಿಗೆ ಅನೇಕ ಕಷ್ಟಗಳು ಎದುರಾದವು. ಈಗಾಗಿ ಪತ್ರಕರ್ತರಿಗೆ ಆರೋಗ್ಯ ವಿಮೆಯ ಅವಶ್ಯಕತೆ ಇದೆ. ಇದರ ಜಾರಿಗೆ ಸುಮಾರು ೧೦ ಕೋಟಿ ರೂ. ಬೇಕಾಗುತ್ತದೆ. ವಿಮೆ ಮಾರ್ಗಸೂಚಿಗಳು ಇಷ್ಟರಲ್ಲಿಯೇ ಹೊರಬರುತ್ತವೆ. ಅದು ಕೂಡ ಜಾರಿಗೆ ಬರಲಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಪತ್ರಕರ್ತರು ಹಾಗೂ ಅವರ ಒಟ್ಟು ಕುಟುಂಬ ಸಂಕಷ್ಟದಲ್ಲಿದೆ. ಪತ್ರಕರ್ತರ ಆರೋಗ್ಯಕ್ಕೆ ವಿಶೇಷ ಒತ್ತು ನೀಡುವಂತಹ ಕೆಲಸ ಆಗಬೇಕು. ಆಂಧÀ್ರ ಪ್ರದೇಶ ಮಾದರಿಯ ಹಾಗೆ ಎಲ್ಲರಿಗೂ ಪತ್ರಕರ್ತರಿಗೂ ಆರೋಗ್ಯದ ಸವಲತ್ತುಗಳು ಸಿಗುವಂತಾಗಬೇಕು ಎಂದರು.
ಇದಕ್ಕಾಗಿ ಪತ್ರಕರ್ತರ ಕ್ಷೇಮಾ ನಿಧಿ ಒಂದು ಸಮಿತಿ ರಚನೆ ಮಾಡಬೇಕು. ೨೫ ಕೋಟಿ ರೂ ಮೀಸಲಿಡಬೇಕು. ಅದರ ಜತೆಗೆ ಎಲ್ಲರಿಗೂ ನಿವೃತ್ತಿ ನಂತರವೂ ಅವರ ಆರೋಗ್ಯಕ್ಕೆ ಸೌಲತ್ತು ಕೊಡಬೇಕು.
ಪತ್ರಕರ್ತರ ಸಂಖ್ಯೆ ಕಮ್ಮಿಯಾದರೆ, ಪ್ರಜಾ ಪ್ದಭುತ್ವಕ್ಕೆ ದಕ್ಕೆಯಾಗುತ್ತದೆ. ಹಾಗಾಗಿ ಇರುವ ಪತ್ರಕರ್ತರಿಗೆ ಪ್ರೋತ್ಸಾಹ ಕೊಡಬೇಕು.ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು ಉಳಿಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ಕೆ.ವಿ.ಶಿವಕುಮಾರ್ ಮಾತನಾಡಿ, ಮಾಧ್ಯಮನ್ನೋದು ಸ್ವತಂತ್ರ ಪೂರ್ವದಲ್ಲಿ, ಸ್ವತಂತ್ರ್ಯನಂತರದಲ್ಲೂ ಇದೆ. ಕಾಲಕ್ಕೆ ತಕ್ಕಂತೆ ರೂಪಾಂತರವಾಗಿ ಬರುತ್ತಿದೆ. ಅದು ಕಾಲಕ್ಕೆ ತಕ್ಕಂತೆ ರೂಪಾಂತರವಾದರೂ ಅದು ಜನರ ಕಾಳಜಿಗೆ ತಕ್ಕಂತೆ ಕೆಲಸ ಮಾಡುತ್ತಾ ಬಂದಿದೆ ಎಂದರು.
ಮಾಧ್ಯಮದ ಅತ್ಯಂತ ಶಕ್ತಿಶಾಲಿಯಾಗಿದೆ, ದೇಶದಲ್ಲಿ ಅದು ಹೊರ ತಂದ ಅನೇಕ ಹಗರಣಗಳೇ ಇದಕ್ಕೆ ಸಾಕ್ಷಿ. ವ್ಯವಸ್ಥೆಯಲ್ಲಿ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದಲ್ಲಿ ನ್ಯಾಯ ಸಿಗದೆ ಹೋದಾಗ ಜನರು ಪತ್ರಿಕಾ ರಂಗದ ಕಡೆ ನೋಡುತ್ತಿದ್ದರು. ಆದರೆ ಈಗ ಜನರ ವಿಶ್ವಾಸವನ್ನು ಮಾಧ್ಯಮ ಉಳಿಸಿಕೊಳ್ಳುತ್ತಿಲ್ಲ. ಅದು ಬದಲಾಗಬೇಕು ಎಂದ ಅವರು, ಗ್ರಾಮೀಣ ಪತ್ರಕರ್ತರ ಬಸ್ ಸೌಲಭ್ಯವನ್ನು ರಾಜ್ಯ ಮಟ್ಟಕ್ಕೆ ವಿಸ್ತರಿಸಬೇಕಾಗಿದೆ ಎಂದರು.ಹಿರಿಯ ಪತ್ರಕರ್ತ ಗೋಪಾಲ್ ಎಸ್ ಯಡಗೆರೆ ಆಶಯ ನುಡಿಗಳನ್ನಾಡಿದರು.
ಸವಾಲು ಕೇವಲ ಪತ್ರಕರ್ತರ ಮುಂದಿಲ್ಲ. ಓದುವವರ ಮುಂದೆ, ಜನರ ಮುಂದೆ ಬರೆಯುವವರ ಮುಂದೆಯೂ ಸವಾಲಿದೆ ಎಂದು ‘ದಿ ಹಿಂದೂ’ ಪತ್ರಿಕೆಯ ಹಿರಿಯ ಸಹಾಯಕ ಋಷಿಕೇಷಾ ಬಹದ್ದೂರು ದೇಸಾಯಿ ಹೇಳಿದರು.
ಅವರು ಇಂದು ಪತ್ರಿಕಾ ದಿನಾಚರಣೆಯಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಭವಿಷ್ಯದ ಸವಾಲುಗಳು ಕುರಿತು ವಿಶೇಷ ಉಪನ್ಯಾಸ ನೀಡಿ ಸುಳ್ಳು ಸುದ್ದಿಯಲ್ಲಿಂದು ನಿಪುಣತೆ ಹೆಚ್ಚಾಗುತ್ತಿದೆ. ೯ ಸಾವಿರ ಪತ್ರಕರ್ತರು ದೇಶದ್ರೋಹದ ಕೇಸಿನಲ್ಲಿ ಜೈಲಿನಲ್ಲಿದ್ದಾರೆ. ೧೦ ವರ್ಷದಲ್ಲಿ, ೫ ಸಾವಿರ ಪತ್ರಕರ್ತರು ಕೋರ್ಟ್ಗೆ ಹಾಜರುಪಡಿಸಿಲ್ಲ.
ಇಂದಿನ ಡಾಟಾ ಯುಗದಲ್ಲಿ ರೇಡಿಯೋ ಕಳೆದುಕೊಂಡಿದ್ದೇವೆ. ಅದಕ್ಕೆ ಡಾಟಾ ಹಾಕುವಂತಿರಲಿಲ್ಲ. ಯೂರೋಪ್ನಲ್ಲಿ ಇಂದಿಗೂ ರೇಡಿಯೋ ಇದೆ. ಅದೇ ರೀತಿಯಲ್ಲಿ ಭಾರತದಲ್ಲಿಯೂ ಯುಗ ಮರಳಬಹುದಾಗಿದೆ ಎಂದರು.
ಆರ್ಟಿಫಿಶಲ್ ಇಂಟಲ್ ಜೆನ್ಸಿಯಲ್ಲಿ ಬುದ್ದಿ ಇಲ್ಲ. ನಾವು ಒಂದು ಹುಡುಕಿದರೆ ಅದು ಇನ್ನೊಂದು ಕೊಡುತ್ತದೆ. ಹೀಗಾಗಿ ಅದನ್ನು ಬಳಸಬೇಕೇ ಬೇಡವೇ ಎಂಬುದನ್ನು ನಾವೇ ತೀರ್ಮಾನಿಸಿಕೊಳ್ಳಬೇಕಿದೆ. ಮನಸು ಬದಲಾಯಿಸದೆ ಭಾಷೆ ಬದಲಾಯಿಸಿದರೆ ಉಪಯೋಗವಿಲ್ಲ ಎಂದ ಅವರು, ವಾಟ್ಸಾಪ್ ಎಂಬುವುದು ಹೊಸದೇ ಆಗಿರಬಹುದು ಆದರೆ, ಅದರ ಹಿಂದಿನ ಮನಸ್ಥಿತಿ ಹಳೆಯದ್ದೇ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕಾರ್ಯಕಾರಿ ಸಮಿತಿ ಸದಸ್ಯ ಟೆಲೆಕ್ಸ್ ಎನ್.ರವಿಕುಮಾರ್, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಡಿ.ಎಸ್. ಷಡಾಕ್ಷರಿ, ಏಷ್ಯನ್ ಮೀಡಿಯಾ ಕಲ್ಚರಲ್ ಅಸೋಷಿಯೇಷನ್ ಶ್ರೀಲಂಕಾದ ಭಾರತದ ಸಂಚಾಲಕ ಹೆಚ್.ಬಿ.ಮದನಗೌಡ, ವಾರ್ತಾಧಿಕಾರಿ ಮಾರುತಿ ಆರ್., ಅಗ್ನಿಗಿರೀಶ್, ರಾಷ್ಟ್ರೀಯ ಮಂಡಳಿ ಸದಸ್ಯ ಬಂಡಿಗಡಿ ನಂಜುಂಡಪ್ಪ, ಸಂಘದ ಪ್ರಧಾನ ಕಾರ್ಯದರ್ಶಿ ವಿ.ಟಿ.ಅರುಣ್, ಕಾರ್ಯದರ್ಶಿ ನಾಗರಾಜ್ ನೇರಿಗೆ, ಹಾಲಸ್ವಾಮಿ ಸೇರಿದಂತೆ ಸಂಘದ ಮತ್ತು ಟ್ರಸ್ಟಿನ ಪದಾಧಿಕಾರಿಗಳು ಹಾಜರಿದ್ದರು