ಬೆಂಗಳೂರು.
ಲಂಕಾದ ಅಧ್ಯಕ್ಷರಾಗಿದ್ದ ಗೊಟಬಯ ರಾಜಪಕ್ಸ, ಬಾಂಗ್ಲಾದೇಶದ ಪ್ರಧಾನಿ ಆಗಿದ್ದ ಶೇಖ್ ಹಸೀನಾ ಅವರ ಸಾಲಿಗೆ ಈಗ ಸಿರಿಯಾದ ಅಧ್ಯಕ್ಷರಾಗಿದ್ದ ಬಶರ್ ಅಲ್ ಅಸಾದ್ ಅವರೂ ಸೇರಿದ್ದಾರೆ.
ಈ ಮೂವರೂ ಜನತಾ ದಂಗೆಯಿಂದ ಅಧಿಕಾರ ಕಳೆದುಕೊಂಡು ದೇಶ ಬಿಟ್ಟು ಪಲಾಯನ ಮಾಡಿದ ದಾಖಲೆ ಮಾಡಿದ್ದಾರೆ. ಈ ಘಟನೆಗಳು ಆಯಾ ದೇಶಗಳ ಸಂಕೀರ್ಣ ರಾಜಕೀಯ ಸಂದರ್ಭಕ್ಕೆ ಕನ್ನಡಿ ಹಿಡಿಯುತ್ತಲೇ, ಜನತಾ ದಂಗೆಯ ಹೊಸ ಮುಖಗಳನ್ನೂ ಪರಿಚಯಿಸುತ್ತಿವೆ.
ಒಂದು ಕಾಲದಲ್ಲಿ (1946–1970) ಸಿರಿಯಾವು ರಾಜಕೀಯವಾಗಿ ಪಶ್ಚಿಮ ಏಷ್ಯಾದ ಅತ್ಯಂತ ಅಸ್ಥಿರ ದೇಶ ಎಂದು ಹೆಸರಾಗಿತ್ತು. ನಂತರ 30 ವರ್ಷ ದೇಶದ ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದ ಹಫೇಜ್ ಅಲ್ ಅಸಾದ್ ತನ್ನ ಅಧಿಕಾರ ಉಳಿಸಿಕೊಳ್ಳಲು ದಮನಕಾರಿ ಮಾರ್ಗಗಳನ್ನು ಅನುಸರಿಸಿದರು. ಲಂಡನ್ನಲ್ಲಿ ವೈದ್ಯಕೀಯ ಪದವಿ ಪಡೆದುಬಂದಿದ್ದ ಹಫೇಜ್ ಅವರ ಮಗ ಬಶರ್ ಅಲ್ ಅಸಾದ್ ಬಗ್ಗೆ ಅಲ್ಲಿನ ಜನ ಅಪಾರ ಭರವಸೆ ಹೊಂದಿದ್ದರು. ಆದರೆ, ಅಧಿಕಾರಕ್ಕೇರಿದ ಬಳಿಕ ಅಪ್ಪನಿಗಿಂತಲೂ ಹೆಚ್ಚಿನ ಕ್ರೌರ್ಯವನ್ನು ಪ್ರದರ್ಶಿಸಿದ್ದ ಅಸಾದ್, ವಿರೋಧಿಗಳನ್ನು ಹತ್ತಿಕ್ಕಿದ್ದರು.
2010-11ರಲ್ಲಿ ಅರಬ್ ರಾಷ್ಟ್ರಗಳಲ್ಲಿ ‘ಅರಬ್ ದಂಗೆ’, ಉತ್ತರ ಆಫ್ರಿಕಾ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ ಪರ ಹೋರಾಟ ಕಾಣಿಸಿಕೊಂಡಿತ್ತು. ಜನ ಅಧಿಕಾರಸ್ಥರ ವಿರುದ್ಧ ಬೀದಿಗಿಳಿಯತೊಡಗಿದ್ದರು. ಈಜಿಪ್ಟ್, ಟ್ಯುನೀಷಿಯಾಗಳಲ್ಲಿ ಸರ್ಕಾರಗಳು ಪತನಗೊಂಡಿದ್ದವು. ಈ ದಂಗೆ ಸಿರಿಯಾಕ್ಕೂ ಹರಡಿತ್ತು. ಪ್ರಜಾಪ್ರಭುತ್ವ, ಉದ್ಯೋಗ ಮತ್ತು ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದರು. ಪ್ರತಿಭಟನಕಾರರನ್ನು ಬಶರ್ ಸರ್ಕಾರದ ಸೇನಾ ಮುಖಂಡರು ನಿರ್ದಯವಾಗಿ ಹತ್ತಿಕ್ಕತೊಡಗಿದ್ದರು. ನಾಗರಿಕ ಯುದ್ಧ ಸ್ಫೋಟಗೊಂಡಿತ್ತು. ಅದರ ಪರಿಣಾಮಗಳೂ ಘೋರವಾಗಿದ್ದವು. ಸಿರಿಯಾದ ರಸ್ತೆಗಳಲ್ಲಿ ನೆತ್ತರು ಹರಿದಿತ್ತು.
2011ರ ದಂಗೆಯನ್ನು ಕ್ರೂರವಾಗಿ ದಮನ ಮಾಡಿದ ನಂತರ ಅಸಾದ್ ಸರ್ಕಾರದ ವಿರುದ್ಧ ಜನರ ಅಸಮಾಧಾನ, ಆಕ್ರೋಶ ಮತ್ತಷ್ಟು ಹೆಚ್ಚಾಗಿತ್ತು. ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪುಗೊಳ್ಳತೊಡಗಿತ್ತು. ಇದೆಲ್ಲದರ ಅಂತಿಮ ಫಲವೇ ಈಗ ಬಶರ್ ಅಲ್ ಅಸಾದ್ ಜನರ ದಂಗೆಗೆ ಹೆದರಿ ದೇಶ ಬಿಟ್ಟು ಪಲಾಯನ ಮಾಡಿರುವುದು. ವಾಸ್ತವವಾಗಿ, ಹಯಾತ್ ತಹ್ರೀರ್ ಅಲ್–ಶಾಮ್ (ಎಚ್ಟಿಎಸ್) ಸಂಘಟನೆ ನವೆಂಬರ್ ಕೊನೆಯಲ್ಲಿ ಅಲೆಪ್ಪೊ ನಗರವನ್ನು ಹೆಚ್ಚು ಪ್ರತಿರೋಧವಿಲ್ಲದೆ ವಶಕ್ಕೆ ಪಡೆದುಕೊಂಡಾಗಲೇ ಬಶರ್ ನಿರ್ಗಮನ ಸನ್ನಿಹಿತವಾಗಿದೆ ಎನ್ನುವುದರ ಸೂಚನೆ ಸಿಕ್ಕಿತ್ತು. 54 ವರ್ಷದ ಅವರ ಕುಟುಂಬದ ಆಡಳಿತ ಸಿರಿಯಾದಲ್ಲಿ ಅಂತ್ಯವಾಗಿದೆ.
ಶೇಖ್ ಹಸೀನಾ ಪಲಾಯನ
ಬಾಂಗ್ಲಾದೇಶದಲ್ಲಿ ಅವಾಮಿ ಲೀಗ್ ಮುಖ್ಯಸ್ಥೆ ಶೇಖ್ ಹಸೀನಾ ನೇತೃತ್ವದ ಸರ್ಕಾರವೂ ಇದೇ ವರ್ಷದ ಆಗಸ್ಟ್ ತಿಂಗಳಲ್ಲಿ ಜನರ ದಂಗೆಯಿಂದಲೇ ಪತನಗೊಂಡಿತ್ತು. 1971ರ ಬಾಂಗ್ಲಾ ವಿಮೋಚನಾ ಸಂಘರ್ಷದಲ್ಲಿ ಭಾಗಿಯಾದ ಸೈನಿಕರ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ 30ರಷ್ಟು ಮೀಸಲಾತಿ ನೀಡುವುದರ ವಿರುದ್ಧ ಹುಟ್ಟಿಕೊಂಡ ಹೋರಾಟ, ಪ್ರಧಾನಿ ಶೇಖ್ ಹಸೀನಾ ಸರ್ಕಾರದ ವಿರೋಧಿ ಹೋರಾಟವಾಗಿ ರೂಪುತಳೆದಿತ್ತು. ವಿದ್ಯಾರ್ಥಿಗಳು ಆರಂಭಿಸಿದ ಈ ಪ್ರತಿಭಟನೆಗೆ ವಿವಿಧ ರಾಜಕೀಯ ಪಕ್ಷಗಳು, ಗಣ್ಯರು ಬೆಂಬಲ ನೀಡಿದ್ದರು. ಪ್ರತಿಭಟನೆಯ ಸಂದರ್ಭದಲ್ಲಿ 440ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು ಎನ್ನಲಾಗಿತ್ತು. ಕೊನೆಗೆ ಹಸೀನಾ ದೇಶದಿಂದ ಪಲಾಯನ ಮಾಡಬೇಕಾಯಿತು.
ಗೊಟಬಯ ದುರಾಡಳಿತ
ಶ್ರೀಲಂಕಾ ದೇಶದ್ದೂ ಇಂಥದ್ದೇ ಕಥೆ. ಗೊಟಬಯ ರಾಜಪಕ್ಸ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ದೇಶ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಜನ ಸೇವಿಸುವ ಆಹಾರ ಪದಾರ್ಥಗಳಿಂದ ಹಿಡಿದು ದಿನನಿತ್ಯ ಬಳಸುವ ಪೆಟ್ರೋಲ್ ಡೀಸೆಲ್ವರೆಗಿನ ಅತ್ಯವಶ್ಯಕ ವಸ್ತುಗಳ ದರವು ಆಕಾಶ ಮುಟ್ಟಿತ್ತು. ಅಡುಗೆ ಅನಿಲ, ಔಷಧಿಗಳಿಗಾಗಿ ಜನ ಕ್ಯೂ ನಿಲ್ಲಬೇಕಿತ್ತು. ಗೊಟಬಯ ದುರಾಡಳಿತದ ವಿರುದ್ಧ ಪ್ರತಿಭಟನೆಗಳು ಆರಂಭವಾದವು. ಜನತಾ ದಂಗೆಯ ಪರಿಣಾಮ 2022ರ ಜುಲೈನಲ್ಲಿ ಗೊಟಬಯ ದೇಶ ತೊರೆದಿ ದ್ದರು.
ಶ್ರೀಲಂಕಾದಲ್ಲಿ ಜನತಾ ದಂಗೆಯ ಅಂತಿಮ ಹಂತದಲ್ಲಿ ಜನ ಅಧ್ಯಕ್ಷರ ನಿವಾಸಕ್ಕೆ ನುಗ್ಗಿ, ದಾಂಧಲೆ ಎಬ್ಬಿಸಿದ್ದರು. ಐಷಾರಾಮಿ ಬೆಡ್ ರೂಂಗೆ ನುಗ್ಗಿ ಸೆಲ್ಫಿ ತೆಗೆದುಕೊಂಡಿದ್ದರು, ಈಜುಕೊಳದಲ್ಲಿ ಈಜಾಡಿದ್ದರು, ಬಂಗಲೆಯಲ್ಲಿಯೇ ಅಡುಗೆ ಮಾಡಿ ಊಟ ಮಾಡಿದ್ದರು. ಬಾಂಗ್ಲಾ ಪ್ರಧಾನಿಯಾಗಿದ್ದ ಶೇಖ್ ಹಸೀನಾ ನಿವಾಸದ ಮೇಲೂ ದಾಳಿ ಮಾಡಿದ್ದ ಯುವಕರು, ಅಲ್ಲಿದ್ದ ಬಟ್ಟೆ ಸೇರಿದಂತೆ ಹಲವು ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದರು. ಸಿರಿಯಾದಲ್ಲಿಯೂ ಅಸಾದ್ ಅರಮನೆ ಮೇಲೆ ದಾಳಿ ಮಾಡಿರುವ ಜನ, ಮನೆಯನ್ನು ಧ್ವಂಸ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂರೂ ದೇಶಗಳಲ್ಲಿ ಅಧಿಕಾರದ ಕೇಂದ್ರವಾದ ಅಧ್ಯಕ್ಷರ ಕಚೇರಿ/ಪ್ರಧಾನಿ ಕಚೇರಿ, ಅವರ ಮನೆಗಳ ಮೇಲೆ ದಾಳಿ ಮಾಡಿರುವುದು ಜನರ ಪ್ರತಿಭಟನೆಯ, ಸಿಟ್ಟಿನ ಒಂದು ರೂಪ ಎಂದೇ ವಿಶ್ಲೇಷಿಸಲಾಗುತ್ತಿದೆ.
ಜನತಾ ದಂಗೆಯ ಈ ಘಟನೆಗಳು ಮೇಲ್ನೋಟಕ್ಕೆ ಕಾಣುವಷ್ಟು ಸರಳವಲ್ಲ. ಇವುಗಳ ಹಿಂದೆ ಮೂಲಭೂತವಾದಿ ಸಂಘಟನೆಗಳೂ ಸೇರಿದಂತೆ ಹಲವು ಹಿತಾಸಕ್ತ ಗುಂಪುಗಳು, ಚೀನಾ, ಅಮೆರಿಕ, ರಷ್ಯಾದಂಥ ದೊಡ್ಡ ರಾಷ್ಟ್ರಗಳ ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿಗಳೂ ಇವೆ ಎನ್ನುವುದನ್ನು ಅಲ್ಲಗಳೆಯಲಾಗದು.
ಮೂಲಭೂತವಾದಿ ಸಂಘಟನೆಗಳ ಕೈ ಮೇಲಾಗುವ ಆತಂಕ
ನಾಗರಿಕ ಯುದ್ಧ/ಜನರ ದಂಗೆ ನಡೆದು ಸರ್ಕಾರ ಪತನ ಹೊಂದಿದ ಕೆಲ ರಾಷ್ಟ್ರಗಳಲ್ಲಿ ಜನರ ಹೋರಾಟದೊಂದಿಗೆ ಮೂಲಭೂತವಾದಿ ಸಂಘಟನೆಗಳೂ ಸೇರಿವೆ. ಅಸ್ತಿತ್ವಕ್ಕೆ ಬಂದಿರುವ ಹೊಸ ಸರ್ಕಾರಗಳ ಮೇಲೆ ಈ ಸಂಘಟನೆಗಳು ಪ್ರಭಾವ ಬೀರುವ, ಅವುಗಳ ಮುಖಂಡರು ಆಡಳಿತವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಆತಂಕ ವ್ಯಕ್ತವಾಗಿದೆ.
ಬಾಂಗ್ಲಾದೇಶದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಮಾತೆ ಇ–ಇಸ್ಲಾಮಿ ಪಕ್ಷ ಮತ್ತು ಅದರ ವಿದ್ಯಾರ್ಥಿ ಘಟಕ ಸಕ್ರಿಯವಾಗಿ ಭಾಗವಹಿಸಿತ್ತು. ಈ ಸಂಘಟನೆಯು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ ಎಂದು ಆರೋಪಿಸಿದ್ದ ಶೇಖ್ ಹಸೀನಾ ನೇತೃತ್ವದ ಸರ್ಕಾರ ಭಯೋತ್ಪಾದನಾ ತಡೆ ಕಾನೂನು ಅಡಿಯಲ್ಲಿ ಪಕ್ಷಕ್ಕೆ ನಿಷೇಧ ಹೇರಿತ್ತು. ಮಧ್ಯಂತರ ಸರ್ಕಾರವು ಈ ನಿರ್ಬಂಧವನ್ನು ತೆರವುಗೊಳಿಸಿದೆ. ಜಮಾತೆ ಇ–ಇಸ್ಲಾಮಿಯು ಇಸ್ಲಾಂ ಮೂಲಭೂತವಾದ ಬೆಂಬಲಿಸುತ್ತದೆ ಎನ್ನಲಾಗಿದೆ.
ಸಿರಿಯಾದಲ್ಲಿ ಬಶರ್ ಅಸಾದ್ ಸರ್ಕಾರದ ವಿರುದ್ಧದ ಹೋರಾಟದ ನಾಯಕತ್ವ ವಹಿಸಿದ್ದ, ಹಯಾತ್ ತಹ್ರೀರ್ ಅಲ್ ಶಾಮ್ ಬಂಡುಕೋರ ಪಡೆಯ ಮುಖ್ಯಸ್ಥ ಅಬು ಮೊಹಮ್ಮದ್ ಅಲ್ ಗೊಲಾನಿ ಅವರು ಉಗ್ರ ಸಂಘಟನೆ ಆಲ್ ಕೈದಾದೊಂದಿಗೆ ಸಂಪರ್ಕ ಹೊಂದಿದ್ದಾರೆ. ಅವರ ನೇತೃತ್ವದಲ್ಲೇ ಸಿರಿಯಾದಲ್ಲಿ ಹೊಸ ಸರ್ಕಾರ ರಚನೆಯಾಗಬಹುದು ಎಂದು ಹೇಳಲಾಗುತ್ತಿದೆ.
ಯೆಮನ್ನಲ್ಲಿ ಸರ್ಕಾರದೊಂದಿಗೆ ಘರ್ಷಣೆಯಲ್ಲಿ ತೊಡಗಿರುವ ಹೂಥಿ ಸಂಘಟನೆಯು ಇಸ್ಲಾಂ ಮೂಲಭೂತವಾದವನ್ನು ಪಾಲಿಸುತ್ತದೆ. ಪ್ಯಾಲಿಸ್ಟೀನಿನಲ್ಲಿ ಹಮಾಸ್, ಲೆಬನಾನಿನಲ್ಲಿ ಪರ್ಯಾಯ ಆಡಳಿತವನ್ನು ನಡೆಸುತ್ತಿರುವ ಹಿಜ್ಬುಲ್ಲಾ ಸಂಘಟನೆಗಳು ಕೂಡ ಇಸ್ಲಾಂ ಮೂಲಭೂತವಾದದ ಪರವಾಗಿವೆ.
ಸುಡಾನಿನ ಸರ್ವಾಧಿಕಾರಿಯಾಗಿದ್ದ ಒಮರ್ ಅಲ್ ಬಶೀರ್ ಅವರನ್ನು ಐದು ವರ್ಷಗಳ ಹಿಂದೆ ಪದಚ್ಯುತಿಗೊಳಿಸಿದ ನಂತರ ಅಧಿಕಾರಕ್ಕಾಗಿ ಅಲ್ಲಿನ ಸೇನೆ ಮತ್ತು ಅರೆ ಸೇನಾ ಕ್ಷಿಪ್ರ ಬೆಂಬಲ ಪಡೆಗಳ ನಡುವೆ ನಡೆಯುತ್ತಿರುವ ಯುದ್ಧದ ಲಾಭ ಪಡೆದು ಇಸ್ಲಾಂ ಮೂಲಭೂತವಾದಿಗಳು ದೇಶದಲ್ಲಿ ಸಕ್ರಿಯರಾಗಬಹುದು ಎಂದು ಸಾಮಾಜಿಕ ಕಾರ್ಯಕರ್ತರು, ಪ್ರಜಾಪ್ರಭುತ್ವ ಪರ ಇರುವ ರಾಜಕಾರಣಿಗಳು ಕಳವಳ ವ್ಯಕ್ತಪಡಿಸಿದ್ದಾರೆ.