ದಾವಣಗೆರೆ : ತರಳಬಾಳು ಶ್ರೀಗಳ ವಿರುದ್ಧ ಅಪೂರ್ವ ರೆಸಾರ್ಟ್ ನಲ್ಲಿ ಉದ್ಯಮಿ ಸಾಧು-ಸದ್ಧರ್ಮ ವೀರಶೈವ ಲಿಂಗಾಯಿತ ನಾಯಕ ಅಣಬೇರು ರಾಜಣ್ಣ ನೇತೃತ್ವದಲ್ಲಿ ಬೃಹತ್ ಸಮಾಲೋಚನಾ ಸಭೆ ನಡೆಯಿತು.
ಈ ಸಮಾಲೋಚನಾ ಸಭೆಯಲ್ಲಿ ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀ ಬದಲಾವಣೆಗೆ ಆಗ್ರಹ ಪಡಿಸಲಾಯಿತು. ಚಿತ್ರದುರ್ಗ ಜಿಲ್ಲೆ ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿರುದ್ದ ಕೈಗೊಂಡ ಸಭೆಯಲ್ಲಿ ಶಾಮನೂರು ಶಿವಶಂಕರಪ್ಪ, ಬಿ.ಸಿ. ಪಾಟೀಲ್, ಎಸ್ ಎ ರವೀಂದ್ರನಾಥ್ ಸೇರಿದಂತೆ ಸಮಾಜದ ಮುಖಂಡರು ಭಾಗಿಯಾಗಿದ್ದರು.
ಸಿರಿಗೆರೆ ಪೀಠಕ್ಕೆ ಉತ್ತರಾಧಿಕಾರಿ ಹಾಗೂ ನೂತನ ಶ್ರೀ ನೇಮಕವಾಗಿಲ್ಲ. ಮಠದ ನಿಯಮದಂತೆ 65 ವರ್ಷಕ್ಕೆ ಪೀಠ ತ್ಯಾಗ ಮಾಡಬೇಕಿದ್ದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸ್ಥಾನ ಬಿಟ್ಟುಕೊಡುತ್ತಿಲ್ಲ. ಆದ್ರೆ ನಿವೃತ್ತಿ ಪಡೆಯದೇ ಪೀಠಧೀಪತಿಯಾಗಿ ಮುಂದುವರಿದಿದ್ದಾರೆ ಹೀಗಾಗಿ ಪೀಠ ತ್ಯಜಿಸುವಂತೆ ಸಾಧು ಲಿಂಗಾಯತ ಸಮಾಜ ಒತ್ತಾಯಿಸಿತು.
ಏನು ನಿರ್ಣಯ
ದಾವಣಗೆರೆ- ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ , ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪೀಠದಿಂದ ನಿವೃತ್ತಿ ಘೋಷಿಸಿ, ಮುಂದಿನ ಮರಿ ಅಥವಾ ಉತ್ತರಾಧಿಕಾರಿ ಘೋಷಣೆ ಮಾಡಬೇಕು. ಶ್ರೀಮಠದ ಏಕವ್ಯಕ್ತಿ ಡೀಡ್ ರದ್ದುಪಡಿಸಿ, ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳ ಮೂಲ ಬೈಲಾವನ್ನು ಯಥವತ್ತಾಗಿ ಜಾರಿಗೊಳಿಸಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.
ಸಾಧು ಲಿಂಗಾಯಿತ ಮುಖಂಡ ಅಣಬೇರು ರಾಜಣ್ಣ ಮಾತನಾಡಿ, ಇಷ್ಟು ದಿನ ಸಿರಿಗೆರೆ ಶ್ರೀ ನಮ್ಮವರು. ಸಮಾಜಕ್ಕೆ ಕೆಟ್ಟ ಹೆಸರು ಬರಬಾರದೆಂದು ಸುಮನಿದ್ದೇ. ಸಿರಿಗೆರೆ ಮಠಕ್ಕೆ ಹೋದರೆ ಸ್ವಾಮೀಜಿ ಬಾಗಿಲನ್ನೇ ತೆರೆಯುವುದಿಲ್ಲ. ಭಕ್ತರನ್ನು ಕಂಡರೆ ಗೌರವವಿಲ್ಲ.
ಶ್ರೀಮಠ ಹಾಗೂ ಗುರು ಪರಂಪರೆಯ ಮೇಲಿನ ಅಭಿಮಾನ, ಗೌರವದಿಂದ ಇಲ್ಲಿವರೆಗೂ ಸಮಾಧಾನದಿಂದ ಇದ್ದೆವು. ಇದೀಗ ಹೋರಾಟ ಅನಿವಾರ್ಯ ಆಗಿದೆ. ಶ್ರೀಮಠದ ಬೆಳವಣಿಗೆ, ಶ್ರೀಗಳ ನಡೆ ಬಗ್ಗೆ ಪ್ರಶ್ನಿಸಿದರೆ ರೌಡಿಗಳು ಅಡ್ಡಿಪಡಿಸುತ್ತಾರೆ. ಪ್ರಶ್ನಿಸಿದವರ ವಿರುದ್ಧವೇ ಸುಳ್ಳು ದೂರು ದಾಖಲಿಸಲಾಗುತ್ತಿದೆ. ಇದು ಗುರುಗಳಾದವರು ಮಾಡುವ ಕೆಲಸವೇ? ಇನ್ನೊಂದು ವಾರದಲ್ಲೇ ನಮ್ಮ ಬೇಡಿಕೆಗೆ ಸಕಾರಾತ್ಮಕ ಸ್ಪಂದನೆ ಸಿಗಬೇಕು. ಇಲ್ಲವಾದರೆ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ. ಶೀಘ್ರವೇ ಸಾಸಲು ಕ್ರಾಸ್ ನಿಂದ ಶ್ರೀಮಠದವರೆಗೂ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳುವ ಆಲೋಚನೆ ಸಹ ಇದೆ ಎಂದರು.