
ಶಿವಮೊಗ್ಗ: ಜಿಲ್ಲೆಯ ತ್ಯಾವರೆಕೊಪ್ಪ ಹುಲಿ-ಸಿಂಹಧಾಮದ ವ್ಯಾಪ್ತಿಯಲ್ಲಿ ಕಲ್ಲು ಕ್ವಾರಿ, ಹಾಗೂ ಪ್ರಾಣಿ ಸಂಗ್ರಹಾಲಯದ ಪಕ್ಕದಲ್ಲಿ ನಿರ್ಮಾಣ ಹಂತದ ಲೇಔಟ್ ನಡೆಯುತ್ತಿದ್ದು, ಈ ಬಗ್ಗೆ ಸರ್ಕಾರದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ವರದಿ ಕೇಳಿದ್ದಾರೆ.
ಶಿವಮೊಗ್ಗ ಮೃಗಾಲಯದ 200ರಿಂದ 300 ಮೀಟರ್ ಅಂತರದಲ್ಲಿಯೇ ಕ್ವಾರಿ ನಡೆಯುತ್ತಿದ್ದು, ಇಲ್ಲಿರುವ ಪ್ರಾಣಿಗಳಿಗೆ ತೊಂದರೆ ಆಗುತ್ತಿದೆ. ಜೊತೆಗೆ ಶೆಟ್ಟಿಹಳ್ಳಿ ಅಭಯಾರಣ್ಯದ ಗಡಿ ಗುರುತು ಮಾಡಲು ರಚಿಸಿದ್ದ ಪರಿಸರ ಸೂಕ್ಷ್ಮ ವಲಯ ಸಮಿತಿಯ ಸಭೆಯನ್ನೇ ರದ್ದುಗೊಳಿಸಲಾಗಿದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೇ ಮೃಗಾಲಯದ ಪಕ್ಕದಲ್ಲಿಯೇ ಖಾಸಗಿ ನಿರ್ಮಾಣ ಸಂಸ್ಥೆಯೊAದು ಲೇಔಟ್ ನಿರ್ಮಾಣ ಮಾಡುತ್ತಿದೆ. ಈ ಪ್ರದೇಶ ಬಫರ್ ವಲಯವಾಗಿದ್ದು, ಚಿರತೆ ಸೇರಿದಂತೆ ಕಾಡು ಪ್ರಾಣಿಗಳು ನಿರಂತರವಾಗಿ ಓಡಾಡುವ ಪ್ರದೇಶವಾಗಿದೆ ಎಂದೂ ಹೇಳಲಾಗಿದೆ. ಇಲ್ಲಿ ಲೇಔಟ್ ನಿರ್ಮಿಸಲು ಅನುಮತಿ ನೀಡಲಾಗಿದೆಯೇ? ಈ ಲೇಔಟ್ ನಿರ್ಮಾಣ ಮತ್ತು ಕ್ವಾರಿಯಿಂದ ಕಾಡು ಮತ್ತು ಕಾಡು ಪ್ರಾಣಿಗಳಿಗೆ ತೊಂದರೆ ಆಗುತ್ತದೆಯೇ? ಇದು ಬಫರ್ ವಲಯಕ್ಕೆ ಬರುತ್ತದೆಯೇ ಎಂಬ ಪೂರ್ಣ ಮಾಹಿತಿಯನ್ನು ಜೂನ್ 19ರೊಳಗೆ ಸಲ್ಲಿಸಲು ಸಚಿವರು ಸೂಚಿಸಿದ್ದಾರೆ. ಶಿವಮೊಗ್ಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೂ ಪ್ರತಿ ಸಲ್ಲಿಸಲಾಗಿದೆ.
