
ದಾವಣಗೆರೆ: ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಮತ್ತು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (ವಿಟಿಯು) ರಾಜ್ಯಪಾಲರಿಂದ ನಾಮನಿರ್ದೇಶಿತ ಸದಸ್ಯತ್ವ ಕೊಡಿಸುವುದಾಗಿ ನಂಬಿಸಿ ರೂ.2,78,720 ವಂಚಿಸಿದ್ದ ಆರೋಪಿಯನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಹಲ್ಲೇಹಾಳ್ ಗ್ರಾಮದ ಸದ್ರುಲ್ಲಾ ಖಾನ್ ಬಂಧಿತ. ಆತನಿಂದ ರೂ.40,000 ಬೆಲೆ ಬಾಳುವ 2 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ರೂ.2,19,058 ಮೊತ್ತವನ್ನು ಆರೋಪಿ ಮತ್ತು ಆರೋಪಿಯ ಪರಿಚಯಸ್ಥರ ಬ್ಯಾಂಕ್ ಖಾತೆಯಲ್ಲಿ ಫ್ರೀಜ್ ಮಾಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
‘ ರಾಜ್ಯಪಾಲರ ಕಚೇರಿಯಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ವಿಶ್ವವಿದ್ಯಾಲಯಗಳಿಗೆ ರಾಜ್ಯಪಾಲರ ನಾಮನಿರ್ದೇಶಿತ ಸದಸ್ಯರ ಹೆಸರನ್ನು ನಾನೇ ನಾಮಿನೇಟ್ ಮಾಡುತ್ತೇನೆ’ ಎಂದು ವೈದ್ಯ ದಂಪತಿಗೆ ದೂರವಾಣಿ ಕರೆ ಮಾಡಿ ನಂಬಿಸಿದ್ದ ಆರೋಪಿ, ಅವರಿಂದ ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡಿದ್ದ. ಆ ಬಳಿಕ ಬೆದರಿಕೆಯನ್ನೂ ಒಡ್ಡಿದ್ದ. ಈ ಬಗ್ಗೆ ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಡಿವೈಎಸ್‌ಪಿ ಪದ್ಮಶ್ರೀ ಗುಂಜೀಕರ್ ಮಾರ್ಗದರ್ಶನದಲ್ಲಿ ಪ್ರಭಾರ ಪಿಐ ಶಿಲ್ಪಾ ವೈ., ಪಿಎಸ್‌ಐಗಳಾದ ಸುನೀಲ್ ತೇಲಿ, ರೂಪಾ ತೆಂಬದ್ ಹಾಗೂ ಸಿಬ್ಬಂದಿಯಾದ ಅಶೋಕ, ಗೋವಿಂದರಾಜ್, ಸೋಮಶೇಖರ್, ಲೋಹಿತ್, ಯೋಗೀಶ್ ನಾಯ್ಕ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.
ಆರೋಪಿಯು ಈ ಹಿಂದೆ ಇದೇ ರೀತಿ ವಿಶ್ವವಿದ್ಯಾಲಯಗಳಲ್ಲಿ ರಾಜ್ಯಪಾಲರ ನಾಮನಿರ್ದೇಶಿತ ಸದಸ್ಯತ್ವ ಕೊಡಿಸುವುದಾಗಿ ಮತ್ತು ಸರ್ಕಾರಿ ಕೆಲಸ ಕೊಡಿಸುವುದಾಗಿ ಸಾರ್ವಜನಿಕರಿಗೆ ವಂಚನೆ ಮಾಡಿದ್ದು, ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆ, ಗೋವಿಂದರಾಜನಗರ, ಹೆಬ್ಬಗೋಡಿ ಪೊಲೀಸ್ ಠಾಣೆ, ಚಿತ್ರದುರ್ಗದ ಕೋಟೆ ಪೊಲೀಸ್ ಠಾಣೆ, ಕೋಲಾರದ ಗೌಣಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ