![](https://davangerevijaya.com/wp-content/uploads/2025/01/IMG-20250116-WA0145.jpg)
ದಾವಣಗೆರೆ : ಸೃಜನಶೀಲ ಸಾಹಿತ್ಯ ಕೃಷಿಯ ಮೂಲಕ ಸಾಹಿತ್ಯಾಸಕ್ತರ ಮನ ಗೆದ್ದಿದ್ದ ನಾ.ಡಿಸೋಜರವರು ನಾಡು ಕಂಡ ಒಬ್ಬ ಪರಿಪೂರ್ಣ ಸಾಹಿತಿಯಾಗಿದ್ದರು. ಅವರ ಸಾಹಿತ್ಯವು ಬಹು ಆಯಾಮಗಳಲ್ಲಿ ರಚನೆಯಾಗುತ್ತಿತ್ತು ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪರವರು ನಾ.ಡಿಸೋಜರನ್ನು ಬಣ್ಣಿಸಿದರು.
ಅವರಿಂದು ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ನಾ.ಡಿಸೋಜ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ನಾ.ಡಿಸೋಜರ ಕಾದಂಬರಿಗಳು ಪ್ರಮುಖವಾಗಿ ಪರಿಸರ ನಾಶ, ಕ್ರೈಸ್ತ ಜನಾಂಗದ ಹಿನ್ನೆಲೆ, ಭ್ರಷ್ಟಾಚಾರದ ವಸ್ತು, ಹಿಂದುಳಿದ ಬುಡಕಟ್ಟು ಜನಾಂಗದ ಚಿತ್ರಣ ಹೀಗೆ ಹಲವು ಹತ್ತು ವಿಷಯಗಳನ್ನೊಳಗೊಂಡಿದ್ದವು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಹೋದಂತಹ ಸಂದರ್ಭದಲ್ಲಿ ಅವರು ಹೆಚ್ಚು ಸಮಯವನ್ನು ಸಾರ್ವಜನಿಕ ಗ್ರಂಥಾಲಯಗಳಲ್ಲಿ ಕಳೆಯುತ್ತಿದ್ದರು. ಮಾಸ್ತಿ, ಕುವೆಂಪು, ಅ.ನ.ಕೃ., ಕಾರಂತರು, ಗೋಕಾಕ್, ಗೊರೂರು ಇವರುಗಳಲ್ಲದೆ ಪರ್ಲ್‌ಬಕ್, ಸಾಮರ್ ಸೆಟ್ ಮಾಮ್, ಡಿಕನ್ಸ್ ಮುಂತಾದವರ ಕೃತಿಗಳನ್ನು ವ್ಯಾಪಕವಾಗಿ ಅಧ್ಯಯನ ಮಾಡಿದ್ದು ಅವರೊಬ್ಬ ಪರಿಪೂರ್ಣ ಸಾಹಿತಿಯಾಗಲು ಕಾರಣವಾಯಿತು ಎಂದು ವಾಮದೇವಪ್ಪರವರು ನಾ.ಡಿಸೋಜರಿಗೆ ನುಡಿನಮನವನ್ನು ಸಲ್ಲಿಸಿದರು.
![](https://davangerevijaya.com/wp-content/uploads/2025/01/IMG-20241225-WA0105.jpg)
![](https://davangerevijaya.com/wp-content/uploads/2025/01/IMG-20250116-WA0230.jpg)
ಸಿದ್ದಗಂಗಾ ವಿದ್ಯಾ ಸಂಸ್ಥೆಯ ಜಸ್ಟಿನ್ ಡಿಸೋಜ ಅವರು ಮಾತನಾಡಿ ನಾ.ಡಿಸೋಜ ಅವರು ಶ್ರೇಷ್ಠ ಸಾಹಿತಿಯಾಗಿದ್ದರೂ ಅತ್ಯಂತ ಸರಳವಾದ ವ್ಯಕ್ತಿತ್ವವನ್ನು ಹೊಂದಿದ್ದರು. ಅವರು ವ್ಯಕ್ತಿಗಿಂತ ಅವರಲ್ಲಿರುವ ವ್ಯಕ್ತಿತ್ವಕ್ಕೆ ಗೌರವ ಕೊಡುವ ಸಹೃದಯಿ ಸಾಹಿತಿಯಾಗಿದ್ದರು.
ಸಮಾಜಮುಖಿಯಾಗಿ ಕಿರಿಯ ಸಾಹಿತಿಗಳನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದರು ಹಾಗೂ ಸಾಹಿತ್ಯ ವಲಯದೊಂದಿಗೆ ನಿಕಟವಾದ ಸಂಬಂಧವನ್ನು ಇರಿಸಿಕೊಂಡು ಆಪ್ತತೆಯನ್ನು ತೋರಿಸುತ್ತಿದ್ದರು. ಮುಳುಗಡೆಯಾದ ಪ್ರದೇಶಗಳ ಜನರ ನೋವು ಮತ್ತು ಸಂಕಟವನ್ನು ತಮ್ಮ ಬರವಣಿಗೆಯ ಮೂಲಕ ಸಮಾಜಕ್ಕೆ ಮತ್ತು ಸರಕಾರಕ್ಕೆ ಪರಿಣಾಮಕಾರಿಯಾಗಿ ಮುಟ್ಟಿಸುವ ಸಂವೇದನಾಶೀಲ ಸಾಹಿತಿ ಅವರಾಗಿದ್ದರು ಎಂದು ಜಸ್ಟಿನ್ ಡಿಸೌಜ ತಮ್ಮ ನುಡಿ ನಮನ ಸಲ್ಲಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಪ್ರಾಸ್ತಾವಿಕವಾಗಿ ಮಾತಾಡಿ ನಾ.ಡಿಸೋಜ ಅವರು ಮುಳುಗಡೆ, ಕಾಡಿನ ಬೆಂಕಿ, ದ್ವೀಪ, ಬೆಟ್ಟದಾಪುರ ಮಕ್ಕಳು, ಅಂತರ್ಯ, ಕೆಂಜಾಲು ಕಣಿವೆಯ ಕೆಂಪು ಹೂವು, ಬಂಜೆ ಬೆಂಕಿ, ಮಂಜಿನ ಕಾನು, ಬಳುವಳಿ, ಈ ನೆಲ ಈ ಜಲ, ಕೆಂಪು ತ್ರಿಕೋನ, ನೆಲೆ, ಮಾನವ ಸೇರಿದಂತೆ 40 ಕಾದಂಬರಿಗಳನ್ನು ರಚಿಸಿದ್ದಾರೆ.
ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ 12 ಕೃತಿಗಳನ್ನು ರಚಿಸಿದ್ದಾರೆ. ಹಾಗೂ 9 ಕಥಾ ಸಂಕಲನಗಳು, 2 ಸಮಗ್ರ ಕಥೆಗಳ ಸಂಪುಟ ಪ್ರಕಟಗೊಂಡಿವೆ. ಇವರ ಕಾದಂಬರಿಗಳಾದ ಕಾಡಿನ ಬೆಂಕಿ ಹಾಗೂ ದ್ವೀಪ ಚಲನಚಿತ್ರಗಳಾಗಿ ರಜತಕಮಲ ಮತ್ತು ಸ್ವರ್ಣಕಮಲ ಪ್ರಶಸ್ತಿಗಳನ್ನು ಪಡೆದಿವೆ.ಬಳುವಳಿ ಕಾದಂಬರಿಯು ಕೊಂಕಣಿ ಭಾಷೆಯಲ್ಲಿ ಚಲನಚಿತ್ರವಾಗಿದೆ. ಅವರ ಅನೇಕ ಕೃತಿಗಳು ಪಠ್ಯಪುಸ್ತಕವಾಗಿವೆ, ಚಲನಚಿತ್ರಗಳಾಗಿವೆ, ನಾಟಕಗಳಾಗಿವೆ ಎಂದು ನಾ.ಡಿಸೋಜರ ಬಗ್ಗೆ ಹಲವು ಮಾಹಿತಿಯನ್ನು ಹಂಚಿಕೊಂಡರು.
ಶ್ರದ್ಧಾಂಜಲಿ ಸಭೆಯಲ್ಲಿ ಸಾಹಿತಿ ಜಿ.ಕೆ.ಕುಲಕರ್ಣಿ, ಕಾದಂಬರಿಕಾರ್ತಿ ಡಿ.ಸಿ.ಚಂಪಾ ಅವರು ನಾ.ಡಿಸೋಜ ಅವರೊಂದಿಗಿನ ತಮ್ಮ ಒಡನಾಟವನ್ನು ಹಂಚಿಕೊಂಡರು.
ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಬಿ.ದಿಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ, ಸಂಘಟನಾ ಕಾರ್ಯದರ್ಶಿಗಳಾದ ಜಗದೀಶ್ ಕೂಲಂಬಿ, ಜಿಗಳಿ ಪ್ರಕಾಶ್, ಡ್ಯಾನಿಯಲ್ ಚಿಂದವಾಳ, ನಿವೃತ್ತ ಪದವಿಪೂರ್ವ ಉಪ ನಿರ್ದೇಶಕ ರುದ್ರಮುನಿ, ವೆಂಕಟರಮಣ ಬೆಳೆಗೆರೆ, ಕೆ.ಪಿ.ಮರಿಯಾಚಾರ್, ಎಸ್.ಎಂ.ಮಲ್ಲಮ್ಮ, ಲೇಖಕಿಯರ ಸಂಘದ ಅಧ್ಯಕ್ಷೆ ವೀಣಾ ಕೃಷ್ಣಮೂರ್ತಿ, ರುದ್ರಾಕ್ಷಿ ಬಾಯಿ, ರುದ್ರಮುನಿ ಹಿರೇಮಠ, ವೀಣಾ ಮಹಾಂತೇಶ್, ಸತ್ಯಭಾಮಾ ಮಂಜುನಾಥ್, ಗಿರಿಜ ಸಿದ್ದಲಿಂಗಪ್ಪ ಮುಂತಾದವರು ಉಪಸ್ಥಿತರಿದ್ದರು.
![](https://davangerevijaya.com/wp-content/uploads/2025/01/IMG-20250116-WA01462.jpg)