ಬೆಂಗಳೂರು.
ನಗರದ ಎರಡು ಚಿನ್ನದಂಗಡಿ ಮಾಲೀಕರಿಗೆ ಕೋಟ್ಯಂತರ ರೂಪಾಯಿ ವಂಚಿರುವ ಮಹಿಳೆಯರ ಪ್ರಕರಣದ ಬೆನ್ನಲ್ಲೇ, ಟೀ ಕುಡಿದು ಹೋಗುವಿರಂತೆ ಮನೆಗೆ ಬನ್ನಿ ಎಂದು ಕರೆದು ಗುತ್ತಿಗೆದಾರನಿಗೆ ಮಹಿಳೆಯೋರ್ವಳು ಹನಿಟ್ರ್ಯಾಪ್ ಬಲೆಗೆ ಬಿಳಿಸಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಪರಿಚಿತ ಮಹಿಳೆ ಕರೆದಳೆಂದು ಮನೆಗೆ ಹೋದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಎಂದು ಬೆದರಿಸಿ ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರಂಗನಾಥ ಎಂಬ ಸಿವಿಲ್ ಗುತ್ತಿಗೆದಾರ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಂತೋಷ್, ಅಜಯ್ ಹಾಗೂ ಜಯರಾಜ್ ಎಂಬುವರನ್ನು ಬಂಧಿಸಿದ್ದಾರೆ.
ವಂಚನೆಯ ಪ್ರಮುಖ ರೂವಾರಿಯಾಗಿರುವ ಮಹಿಳೆ ನಯನಾ ಸೇರಿ ಇನ್ನೂ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬಿಸಿದ್ದಾರೆ.
ದೂರುದಾರ ವ್ಯಕ್ತಿಗೆ ಕಳೆದ ಐದಾರು ತಿಂಗಳ ಹಿಂದಷ್ಟೇ ಪರಿಚಯವಾಗಿದ್ದ ನಯನಾ ಆಗಾಗ ತನ್ನ ಮಗುವಿನ ಆರೋಗ್ಯ ಸರಿಯಿಲ್ಲ ಎಂದು 3-4 ಸಾವಿರ ರೂಪಾಯಿ ಪಡೆದುಕೊಳ್ಳುತ್ತಿದ್ದಳು. ಆಗಾಗ ಮನೆಗೆ ಬನ್ನಿ ಎಂದು ನಯನಾ ಕರೆಯುತ್ತಿದ್ದಳಾದರೂ ದೂರುದಾರ ವ್ಯಕ್ತಿ ಹೋಗಿರಲಿಲ್ಲ. ಡಿಸೆಂಬರ್ 9 ರಂದು ಮಾಗಡಿ ರಸ್ತೆಯ ತುಂಗಾನಗರ ಕ್ರಾಸ್ ಬಳಿ ದೂರುದಾರನಿಗೆ ಎದುರಾಗಿದ್ದ ನಯನಾ, ನಮ್ಮ ಮನೆ ಸಮೀಪದಲ್ಲಿಯೇ ಇದೆ, ಟೀ ಕುಡಿದು ಹೋಗುವಿರಂತೆ ಬನ್ನಿ ಎಂದು ಆಹ್ವಾನಿಸಿದ್ದಳು.
ಬಟ್ಟೆ ಬಿಚ್ಚಿಸಿ ವಿಡಿಯೊ ಚಿತ್ರೀಕರಣ.
ಅದರಂತೆ ದೂರುದಾರ ಆಕೆಯ ಮನೆಗೆ ಹೋಗಿದ್ದರು. ಮನೆಯಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಏಕಾಏಕಿ ಬಂದ ಉಳಿದ ಮೂವರು ಆರೋಪಿಗಳು, ನಾವು ಅಪರಾದ ವಿಭಾಗದ ಪೊಲೀಸರು, ನೀವು ವೇಶಾವಾಟಿಕೆ ದಂಧೆಯಲ್ಲಿ ತೊಡಗಿದ್ದೀರಾ ಎಂದು ಬೆದರಿಸಿ ದೂರುದಾರನ ಬಟ್ಟೆ ಬಿಚ್ಚಿಸಿ ವಿಡಿಯೊ ಚಿತ್ರೀಕರಿಸಿಕೊಂಡಿದ್ದರು. ಬಳಿಕ ಎರಡು ಲಕ್ಷ ಕೊಡದಿದ್ದರೆ, ನಿಮ್ಮಿಬ್ಬರ ಅಕ್ರಮ ಸಂಬAಧದ ಕುರಿತು ನಿಮ್ಮ ಪತ್ನಿಗೆ ಹೇಳುತ್ತೇವೆ ಎಂದು ಬೆದರಿಸಿದ್ದರು ಎಂದು ಗುತ್ತಿಗೆದಾರ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರು ಕೊಟ್ಟರೆ ಮಗುವಿನೊಂದಿಗೆ ಮನೆಗೆ ಬರುತ್ತೇನೆ
ದೂರುದಾರನ ಮೈಮೇಲಿದ್ದ ಚಿನ್ನದ ಚೈನ್, ಉಂಗುರ ಬಿಚ್ಚಿಸಿಕೊಂಡು 55 ಸಾವಿರ ನಗದು ಪಡೆದುಕೊಂಡು ಸ್ಥಳದಿಂದ ತೆರಳಿದ್ದ ವಂಚಕರು. ಕೃತ್ಯಕ್ಕೆ ಸಂಚು ರೂಪಿಸಿದ್ದ ಆರೋಪಿ ಮಹಿಳೆ ನಯನಾ ಸಹಚರರೊಂದಿಗೆ ತಾನೂ ತೆರಳಿದ್ದಳು.
ನಯನಾಳ ಬಗ್ಗೆ ಅನುಮಾನಗೊಂಡ ಸಂತ್ರಸ್ತ ಗುತ್ತಿಗೆದಾರ ಆಕೆಗೆ ಕರೆ ಮಾಡಿ ಪೊಲೀಸರಿಗೆ ದೂರು ಕೊಡಲು ಕರೆದಿದ್ದರು. ಆದರೆ, ಪೊಲೀಸರಿಗೆ ದೂರು ಕೊಟ್ಟರೆ ಮಗುವಿನೊಂದಿಗೆ ನಿಮ್ಮ ಮನೆಗೆ ಬಂದು, ನನ್ನೊಂದಿಗೆ ಅಕ್ರಮ ಸಂಬAಧ ಹೊಂದಿದ್ದೀಯ ಎಂದು ನಿಮ್ಮ ಪತ್ನಿಗೆ ಹೇಳುತ್ತೇನೆ ಎಂದು ನಯನಾ ಬೆದರಿಕೆ ಹಾಕಿದ್ದಳು ಎಂದು ದೂರುದಾರ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.
———————————————————-
ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹನಿಟ್ರಾ÷್ಯಪ್ ಪ್ರಕರಣ ನಡೆದಿದೆ. ರಂಗನಾಥ್ ಎನ್ನುವ ಗುತ್ತಿಗೆದಾರನಿಗೆ ಮಹಿಳೆ ಮನೆಗೆ ಕರೆದ ಗುಂಪು ಸಿಸಿಬಿ ಪೊಲೀಸ್ ಹೆಸರಿನಲ್ಲಿ ಬೆದರಿಸಿ ಹಣ ಕಿತ್ತುಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ಇನ್ನುಳಿದ ನಾಲ್ವರು ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.
-ಎಸ್.ಗಿರೀಶ್
ಪಶ್ಚಿಮ ವಿಭಾಗದ ಡಿಸಿಪಿ