
ದಾವಣಗೆರೆ : ಶಿಕಾರಿ. ಶಿವಮೊಗ್ಗದಲ್ಲಿ ಅಪ್ಪ ಮಕ್ಕಳ ಶಿಕಾರಿ ಮಾಡೇ ಮಾಡ್ತೀನಿ ಅಂತೇಳಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತೊಡೆ ತಟ್ಟಿದ್ದಾರೆ. ಇತ್ತ ಪಕ್ಷದ ವಿರುದ್ಧವೇ ಸೆಡ್ಡು ಹೊಡೆದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರೋ ಕೆ.ಎಸ್ ಈಶ್ವರಪ್ಪನವರನ್ನ ಪಕ್ಷದಿಂದ ಉಚ್ಚಾಟಿಸ್ತೀವಿ ಅಂತೇಳಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಗುಡುಗಿದ್ದಾರೆ. ಇದಕ್ಕೆ ಈಶ್ವರಪ್ಪ ಕೊಟ್ಟ ತಿರುಗೇಟು ಹೇಗಿತ್ತು ಗೊತ್ತಾ..?
ರಾಜ್ಯ ಬಿಜೆಪಿಗೆ ಬಿವೈ ವಿಜಯೇಂದ್ರ ಅವರ ಕೊಡುಗೆ ಏನು.? ಕೆ.ಎಸ್ ಈಶ್ವರಪ್ಪನವರ ಕೊಡುಗೆ ಏನು ಅನ್ನೋದನ್ನ ಇಡೀ ರಾಜ್ಯ ಕಂಡಿದೆ.. ಅಪ್ಪನ ನೆರಳಲ್ಲಿ ಅದು ಕೂಡ ಶಾರ್ಟ್ಕಟ್ಟಲ್ಲಿ ರಾಜ್ಯಾಧ್ಯಕ್ಷರಾಗಿರೋ ಬಿವೈ ವಿಜಯೇಂದ್ರ ಈಶ್ವರಪ್ಪನವರ ವಯಸ್ಸಿಗಾದ್ರೂ ಗೌರವ ಕೊಡದೆ ವಾಗ್ದಾಳಿ ನಡೆಸಿದ್ದಾರೆ. ಈಶ್ವರಪ್ಪ ನಾಮಪತ್ರ ವಾಪಸ್ ತಗೊಂಡಿಲ್ಲ ಅಂದ್ರೆ ಈಶ್ವರಪ್ಪನವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕಾಗುತ್ತೆ ಅಂತೇಳಿ ಗುಡುಗಿದ್ರು. ಇದಕ್ಕೆ ಈಶ್ವರಪ್ಪ ಕೊಟ್ಟ ತಿರುಗೇಟು ಹೇಗಿತ್ತು ಗೊತ್ತಾ?
ಈಶ್ವರಪ್ಪನವರು ಪಕ್ಷೇತರವಾಗಿ ನಿಂತ್ಮೇಲೆ ಬಿಜೆಪಿ ಪಕ್ಷ ಅದ್ಯಾವ ಶಿಸ್ತು ಕ್ರಮ ತಗೊಳ್ಳುತ್ತೆ..? ತಗೊಳ್ಳಲಿ ಬಿಡಿ. ಇಂಥ ಗೊಡ್ಡು ಬೆದರಿಕೆಗಳಿಗೆಲ್ಲ ಹೆದರಲ್ಲ ನಾನು ಅಂತೇಳಿ ಈಶ್ವರಪ್ಪ ಗುಡುಗಿದ್ದಾರೆ. ಇದಕ್ಕೆ ರಿಯಾಕ್ಟ್ ಮಾಡಿರೋ ಬಿವೈ ವಿಜಯೇಂದ್ರ ಶಿವಮೊಗ್ಗದಲ್ಲಿ ಈಶ್ವರಪ್ಪನವರ ಪುಗಸಟ್ಟೆ ಮಾತುಗಳಿಗೆ ಬೆಲೆ ಸಿಗಲ್ಲ ಅಂತೇಳಿದ್ರು. ಇದಕ್ಕೂ ಮಾತಲ್ಲೇ ಈಶ್ವರಪ್ಪ ಕುಟ್ಟಿ ಕೆಡವಿದ್ದೇಗೆ ಅನ್ನೋದನ್ನ ಒಮ್ಮೆ ನೋಡ್ಕೊಂಡುಬಿಡಿ.

ಹೀಗೆ ಈಶ್ವರಪ್ಪ ತಿರುಗೇಟನ್ನ ಕೊಟ್ರೂ ವಿಜಯೇಂದ್ರ ಮಾತ್ರ ಈ ಸಲ ಶಿವಮೊಗ್ಗದಲ್ಲಿ ಸಂಸದ ರಾಘವೇಂದ್ರ ಮತ್ತೆ 2 ಲಕ್ಷ ಮತಗಳ ಅಂತರದಿಂದ ಗೆದ್ದು ಬರ್ತಾರೆ ಅಂತೇಳಿದ್ರು. ಇದಕ್ಕೆ ಈಶ್ವರಪ್ಪ ದುಡ್ಡಿನ ರಾಜಕಾರಣದ ಅಸಲಿ ಗುಟ್ಟನ್ನ ಬಿಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲ., ಈ ಸಲ ಅಪ್ಪ ಮಕ್ಕಳ ಶಿಕಾರಿ ನಡೆಸೋದಾಗಿ ವಾಗ್ದಾಳಿ ನಡೆಸಿದ್ದಾರೆ.
ಇಷ್ಟಕ್ಕೆ ನಿಲ್ಲದ ಈಶ್ವರಪ್ಪ, ವಿಜಯೇಂದ್ರ ರಾಜ್ಯಾಧ್ಯಕ್ಷನಾಗೋದಕ್ಕೆ ಏನು ಯೋಗ್ಯತೆ ಇದೆ ಅಂತ ಪ್ರಶ್ನೆ ಮಾಡಿದ್ದಾರೆ. ನಾನು 40 ವರ್ಷ ರಾಜ್ಯ ಬಿಜೆಪಿಗಾಗಿ ಶ್ರಮ ಹಾಕಿದ್ದೇನೆ. ಆದ್ರೆ ನೀನು ನಿಮ್ಮಪ್ಪ ಶ್ರಮ ಹಾಕಿದ್ರು ಅಂತೇಳಿ, ಆ ಶ್ರಮದಿಂದ ನೀನು ರಾಜ್ಯಾಧ್ಯಕ್ಷನಾಗಿದ್ದೀಯಾ.? ನೀನಿನ್ನೂ ಬಚ್ಚಾ ನನ್ನ ವಿರುದ್ಧ ಮಾತನಾಡಬೇಕಾದ್ರೆ ಹುಷಾರ್ ಅಂತೇಳಿ ಕಿಡಿಕಾರಿದ್ದಾರೆ.
ಕೇಂದ್ರದಲ್ಲಿ ಮೋದಿ ಕುಟುಂಬ ರಾಜಕಾರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ ಇಲ್ಲಿ ರಾಜ್ಯ ಬಿಜೆಪಿಯಲ್ಲಿ ಅಪ್ಪ ಮಕ್ಕಳು ಕುಟುಂಬ ರಾಜಕಾರಣ ಮಾಡ್ತಿದ್ದಾರೆ. ವಿಜಯೇಂದ್ರ ರಾಜ್ಯಾಧ್ಯಕ್ಷ, ಅವರ ಸಹೋದರ ಸಂಸದ, ತಂದೆ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಎಂದು ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ಕುಟುಂಬದಲ್ಲಿ ಯಾರಿಗಾದರೂ ಸ್ಥಾನ ತಪ್ಪಿದ್ದರೆ ಅವರಿಗೂ ಸ್ಥಾನ ನೀಡಿ, ಪಕ್ಷ ಇರುವುದು ನಿಮ್ಮ ಹಾಗೂ ನಿಮ್ಮ ಕುಟುಂಬದ ಸೇವೆ ಮಾಡುವುದಕ್ಕಾಗಿ, ಪಕ್ಷ ಕಟ್ಟಲು ಲಕ್ಷಾಂತರ ಕಾರ್ಯಕರ್ತರು ರಕ್ತ, ಬೆವರು ಸುರಿಸಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಹಾಗಾದ್ರೆ ಶಿವಮೊಗ್ಗದಲ್ಲಿ ಕುರುಬ ಸಮುದಾಯದ ಮತಗಳು ಬಿವೈ ರಾಘವೇಂದ್ರ ಅವರಿಗೆ ವಿರುದ್ಧವಾಗಿ ಬೀಳ್ತಾವಾ..? ಕೆ.ಎಸ್ ಈಶ್ವರಪ್ಪ ಅಖಾಡದಲ್ಲಿದ್ರೆ ರಾಘವೇಂದ್ರ ಗೆಲುವು ಕಷ್ಟವಾಗುತ್ತಾ.? ಅಥವಾ ಇಬ್ಬರ ಜಗಳದಲ್ಲಿ ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ಕುಮಾರ್ ಗೆದ್ದು ಬೀಗ್ತಾರಾ?