
ಶಿವಮೊಗ್ಗ: ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ಎಂದು ಹೇಳಿಕೊಳ್ಳುತ್ತಿರುವ ಚಂದ್ರಭೂಪಾಲ್ ಅವರು ಮಡಿವಾಳ ಸಮಾಜದಿಂದ ಅಮಾನತುಗೊಂಡು ಈಗ ಹೊಸ ಸಂಘ ರಚಿಸಿದ್ದಾರೆ. ಅದಕ್ಕೆ ಯಾವುದೇ ಮಾನ್ಯತೆ ಇಲ್ಲ. ನಮ್ಮ ಸಂಘದ ಮೇಲೆ ಆರೋಪ ಹೊರಿಸಿದ್ದಾರೆ. ಅವರು ಕೂಡಲೇ ಸಮಾಜದ ಕ್ಷಮೆ ಕೇಳಬೇಕು ಎಂದು ಜಿಲ್ಲಾ ಮಡಿವಾಳ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎನ್. ಮಧುಕುಮಾರ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಂದ್ರಭೂಪಾಲ್ ಅವರು ಸಮಾಜದಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. 3 ಲಕ್ಷ ರೂ. ದುರುಪಯೋಗವಾಗಿದೆ ಎಂದು ಹೇಳುತ್ತಿದ್ದಾರೆ. ನಾವು ತನಿಖೆಗೆ ಸಿದ್ಧ. ಅವರು ಕಟ್ಟಿದ ಸಂಘವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಕಾಂಗ್ರೆಸ್ ನಲ್ಲಿ ನೀಡಿರುವ ಅವರಿಗೆ ಕೊಟ್ಟಿರುವ ಜವಾಬ್ದಾರಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಮಡಿವಾಳ ಸಮಾಜ ಅಧಿಕೃತ ಸಂಘವಾಗಿದೆ. ಸರ್ವ ಸದಸ್ಯರ ಸಭೆ ಕರೆಯಲಾಗಿದೆ. ಲೆಕ್ಕ ಪರಿಶೋಧನೆಗೆ ವರದಿ ಸಲ್ಲಿಸಲಾಗಿದೆ. ಯಾವುದೇ ಹಣ ದುರುಪಯೋಗವಾಗಿಲ್ಲ. ಆದರೂ ಕೂಡ ಸುಳ್ಳು ಆರೋಪ ಮಾಡಿದ್ದಾರೆ ಎಂದರು.
ಜಿಲ್ಲಾ ಮಡಿವಾಳ ಸಮಾಜ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. 2011ರಿಂದಲೂ ಒಟ್ಟಾಗಿ ಕೆಲಸ ಮಾಡಿದ್ದೇವೆ ಎಂದು ಅವರೇ ಹೇಳುತ್ತಾರೆ. ಪ್ರಚಾರಕ್ಕಾಗಿ ಅನಗತ್ಯ ಗೊಂದಲ ಸೃಷ್ಠಿಸುವ ಬದಲು ಮಡಿವಾಳ ಸಮಾಜದ ಏಳಿಗೆಗಾಗಿ ಆ ಸಂಘದವರು ಕಾರ್ಯನಿರ್ವಹಿಸಲಿ. ಪ್ರಾಮಾಣಿಕವಾಗಿ ಕೆಲಸ ಮಾಡುವ ನಮಗೆ ತೊಂದರೆ ಕೊಡಬಾರದು. ಇದು ಹೀಗೆ ಮುಂದುವರೆದರೆ ನಾವು ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಹೆಚ್.ಎಸ್. ಸದಾಶಿವಪ್ಪ, ಪದಾಧಿಕಾರಿಗಳಾದ ಗಣೇಶ್, ಸುಧೀರ್, ಬಾಬಣ್ಣ, ಮಂಜಣ್ಣ, ನಾಗರಾಜ್, ಪರಶುರಾಮಪ್ಪ, ಚಂದ್ರಶೇಖರ್, ಮಂಜುನಾಥ್, ಹುಚ್ಚಪ್ಪ ಇದ್ದರು.