


ದಾವಣಗೆರೆ: ಹನಿ ನೀರಾವರಿ ಯೋಜನೆಗೆ ನೀಡುತ್ತಿದ್ದ ಸಹಾಯಧನದ ಮೊತ್ತವನ್ನು ದಿಢೀರನೆ ಶೇ.75 ರಿಂದ ಶೇ.45ಕ್ಕೆ ಇಳಿಸಿ ರಾಜ್ಯದ ಕಾಂಗ್ರೆಸ್ ಸರ್ಕಾರ ಆದೇಶ ಹೊರಡಿಸಿದೆ.
ಇದು 2024-25ನೇ ಸಾಲಿನ ಆರ್ಥಿಕ ವರ್ಷಕ್ಕೆ ಅನ್ವಯವಾಗಲಿದೆ ಇದು ರೈತರಿಗೆ ಮತ್ತಷ್ಟು ಆರ್ಥಿಕ ಹೊರೆಯಾಗಲಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಬಿ.ಎಂ ಸತೀಶ್ ಕಾಂಗ್ರೆಸ್ ಸರ್ಕಾರದ ವಿರುದ್ದ ಹರಿಹಾಯ್ದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ *ಪ್ರತಿ ಹನಿಗೆ ಅಧಿಕ ಬೆಳೆ ಘೋಷಣೆ ವಾಕ್ಯದಡಿ ಕೃಷಿಯಲ್ಲಿ ನೀರಿನ ಬಳಕೆಯ ದಕ್ಷತೆ ಹೆಚ್ಚಿಸಲು ಹನಿ,ತುಂತುರು ನೀರಾವರಿಯಂತಹ ಸೂಕ್ಷ್ಮ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದಾಗಿದೆ.

ನೀರಿನ ಬಳಕೆಯ ಸಾಮರ್ಥ್ಯ ಮತ್ತು ಸೂಕ್ತ ನಿರ್ವಹಣೆಯಿಂದ ಬೆಳೆಗಳ ಉತ್ಪಾದನೆ ಹೆಚ್ಚಿಸಿ, ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
2023-24ನೇ ಸಾಲಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 5466 ರೈತರು ಈ ಯೋಜನೆಯಡಿ ಫಲಾನುಭವಿಗಳಾಗಿದ್ದು, ₹211450000.00 ಸಹಾಯಧನ ಬಿಡುಗಡೆಯಾಗಿದೆ. ಅಂದ್ರೆ 21.145 ಕೋಟಿ ರೂಗಳು ಬಿಡುಗಡೆಯಾಗಿದೆ. ಆಗ ರೈತರಿಗೆ ಶೇ.75 ರಷ್ಟು ಸಬ್ಸಿಡಿ ದೊರೆಯುತ್ತಿತ್ತು. ಇದರಲ್ಲಿ ಕೇಂದ್ರ ಸರ್ಕಾರದ ಪಾಲು ಶೇ.27 ಮತ್ತು ರಾಜ್ಯ ಸರ್ಕಾರದ ಪಾಲು ಶೇ.48 ರಷ್ಟು ಇತ್ತು. ಕೇಂದ್ರದ ಬಿಜೆಪಿ ಸರ್ಕಾರ ಪ್ರತಿ ವರ್ಷದಂತೆ ಈ ವರ್ಷವೂ ಶೇ.27 ರಷ್ಟು ಸಬ್ಸಿಡಿ ಮುಂದುವರೆಸಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಸಬ್ಸಿಡಿಯನ್ನು ಶೇ.48ರ ಬದಲಿಗೆ ಶೇ.18ಕ್ಕೆ ಇಳಿಸಿ ಆದೇಶ ಹೊರಡಿಸಿದೆ. ಇದರಿಂದ ರೈತರಿಗೆ ಸಿಗುತ್ತಿದ್ದ ಸಬ್ಸಿಡಿ ಶೇ.75 ರಿಂದ ಶೇ.45ಕ್ಕೆ ಇಳಿಕೆಯಾಗಿದೆ. ಇದರಿಂದ ರೈತರಿಗೆ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಸಂಕಷ್ಟ ತಂದೊಡ್ಡಿದೆ.
ಗ್ಯಾರಂಟಿ ಯೋಜನೆಗಳ ಪರಿಣಾಮ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ರಾಜ್ಯ ಸರ್ಕಾರದಲ್ಲಿ ಆರ್ಥಿಕ ಶಿಸ್ತು ಇಲ್ಲವಾಗಿದ್ದು, ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಆರೋಪಿಸಿದರು.
ಮೊದಲಿಗೆ ಹಾಲಿನ ಮಾರಾಟ ದರ ಹೆಚ್ಚಳ ಮಾಡಿ ಗ್ರಾಹಕರಿಗೆ ಶಾಕ್ ನೀಡಿದ ಬೆನ್ನಲ್ಲೇ ಕೋಚಿಮುಲ್ (ಕೋಲಾರ-ಚಿಕ್ಕಬಳ್ಳಾಪುರ) ಹಾಲು ಒಕ್ಕೂಟ ರೈತರಿಂದ ಖರೀದಿಸುವ ದರವನ್ನು 2 ರೂ ಕಡಿಮೆ ಮಾಡಿ ಆದೇಶ ಹೊರಡಿಸಿದೆ. ಹಾಲು ಉತ್ಪಾದನೆ ಹೆಚ್ಚಾಗಿದೆ ಎಂಬ ಕಾರಣ ನೀಡಿ, ಇಂದು ಬೆಳಿಗ್ಗೆಯಿಂದಲೇ ಜಾರಿಗೆ ಬರುವಂತೆ ರೈತರಿಂದ ಖರೀದಿಸುವ ಪ್ರತಿ ಲೀಟರ್ ದರವನ್ನು ₹33.40 ರಿಂದ ₹31.40ಕ್ಕೆ ಇಳಿಸಿ ಆದೇಶಿಸಲಾಗಿದೆ. ರೈತರು ಹೆಚ್ಚು ಹಾಲು ಉತ್ಪಾದಿಸುತ್ತಿದ್ದಾರೆ. ರೈತರ ಹಾಲಿನ ಉತ್ಪಾದನಾ ಸಾಮರ್ಥ್ಯ ಕುಗ್ಗಿಸಬೇಕು ಎಂಬ ಕುತಂತ್ರದಿಂದ ಹಾಲಿನ ಖರೀದಿ ದರ ಕಡಿತ ಮಾಡಿರುವುದು ರಾಜ್ಯದ ಕಾಂಗ್ರೆಸ್ ಸರ್ಕಾರದ ದುರಾಡಳಿತದ ಪರಮಾವಧಿಯಾಗಿದೆ. ಇದು ರೈತರ ಸಾಮರ್ಥ್ಯದ ಕಗ್ಗೊಲೆ. ಇಂತಹ ರೈತ ವಿರೋಧಿ ಜನ ವಿರೋಧಿ ಸರ್ಕಾರ ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿಯೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಾಲಿನ ದರ ಹೆಚ್ಚಿಸಿಲ್ಲ. ಪ್ರತಿ ಪ್ಯಾಕೆಟ್ ನಲ್ಲಿ 50 ಎಂ.ಎಲ್ ಹೆಚ್ಚು ನೀಡಿ, ₹2.10 ಬದಲು ₹2.00 ಹೆಚ್ಚಳ ಮಾಡಿದೆ ಎಂದು ಸಮರ್ಥಿಸಿಕೊಂಡ ಆರ್ಥಿಕ ತಜ್ಞ ಎಂದು ಕರೆಸಿಕೊಳ್ಳುವ 15 ಬಾರಿ ಬಜೆಟ್ ಮಂಡಿಸಿರುವ ಅನುಭವಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಲಿನ ಉತ್ಪಾದನೆ ಹೆಚ್ಚಳದ ಕಾರಣ ನೀಡಿ, ರೈತರಿಂದ ಖರೀದಿಸುವ ದರವನ್ನು ಕಡಿಮೆ ಮಾಡಿರುವುದಕ್ಕೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು. ಎಲ್ಲಾ ದರಗಳನ್ನು ಹೆಚ್ಚಿಸಿ ಇದೀಗ ರೈತರಿಗೆ ಹೊರೆ ಮಾಡಲು ಹೊರಟಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಳಲ್ಕೆರೆ ಸದಾನಂದ,ಬಲ್ಲೂರು ಬಸವರಾಜ್, ಕಬ್ಬೂರು ಶಿವಕುಮಾರ್, ಆರನೇಕಲ್ ವಿಜಯಕುಮಾರ್,ಅಣಜಿ ಗುಡ್ಡೇಶ್,ಬಾತಿ ಬಿ.ಕೆ ಶಿವಕುಮಾರ್,ಅಣಬೇರು ಶಿವಪ್ರಕಾಶ್ ಉಪಸ್ಥಿತರಿದ್ದರು