ನಂದೀಶ್ ಭದ್ರಾವತಿ, ದಾವಣಗೆರೆ
ದೇವನಗರಿ ದಾವಣಗೆರೆಯಲ್ಲಿ ಬಿಜೆಪಿ ಎಸ್.ಟಿ.ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ ನೇತೃತ್ವದಲ್ಲಿ ನಾಯಕರ ರಣಕಹಳೆ ಮಾ. 11ರ ಬೆಳಗ್ಗೆ 11ಕ್ಕೆ ವಿನೋಬನಗರದ ದಾವಣಗೆರೆ ಹರಿಹರ ಅರ್ಬನ್ ಕೋ.ಆಪರೇಟಿವ್ ಸಮುದಾಯ ಭವನದಲ್ಲಿ ಮೊಳಗಲಿದೆ.
ಬಿಜೆಪಿ ಯುವ ನಾಯಕನಾಗಿ, ಯೂತ್ ಐಕಾನ್ ಎಂದೇ ಖ್ಯಾತಿ ಹೊಂದಿರುವ ಶ್ರೀನಿವಾಸ ದಾಸಕರಿಯಪ್ಪ ನಾಯಕ ಸಮಾಜದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದು, ಸಮಾಜಕ್ಕೆ ಬೇಕಾದ ಮೀಸಲಾತಿ, ಸರಕಾರದಿಂದ ಸಿಗಬೇಕಾದ ಸೌಲಭ್ಯಗಳು, ಕುಂದುಕೊರತೆ ಬಗ್ಗೆ ಚರ್ಚೆ ನಡೆಸುವರು.
ಸಂಘಟಿತರಾದಾಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಾಗಿದ್ದು, ನಾಳಿನ ಭಾರತ ನಮ್ಮ ಭಾರತ ಆಗಬೇಕಾದರೆ ತಳ ಸಮುದಾಯಗಳು ಸಂವಿಧಾನದ ಅಡಿಯಲ್ಲಿ ಒಂದಾಗಬೇಕು ಎಂಬ ಧೇಯೋದ್ದೇಶವನ್ನು ಹೊಂದಿದೆ. ವ್ಯವಸ್ಥೆಯ ಸುಧಾರಣೆ, ಸಂಘಟನೆಯ ಅಸ್ತ್ರವಾಗಲು ತೆಗೆದುಕೊಂಡ ನಿರ್ಧಾರಗಳು ಸಾಮೂಹಿಕ ನಾಯಕತ್ವದಿಂದ ಮಾತ್ರ ಸಾಧ್ಯವೆಂದು ಪರಿಶಿಷ್ಟ ಜಾತಿ ಸಮಾವೇಶ ನಡೆಯುತ್ತಿದೆ.
ಸರಕಾರದ ಸೌಲಭ್ಯಗಳ ಜಾಗೃತಿ
ಕೇಂದ್ರ ಸರಕಾರ ಎಸ್ಟಿಗಳಿಗೆ ಏನು ಸೌಲಭ್ಯ ನೀಡಿದೆ, ರಾಜ್ಯ ಸರಕಾರದ ಹುಳುಕುಗಳು, ಮುಂದೆ ಎಸ್ಟಿ ಸಮುದಾಯಗಳ ಅಭಿವೃದ್ಧಿ, ಮುಂದಿನ ದಿನಗಳಲ್ಲಿ ರಾಜ್ಯ ಸರಕಾರದ ವಿರುದ್ಧ ಹೋರಾಟ, ಎಸ್ಟಿ ನೌಕರರ ಒಗ್ಗೂಡುವಿಕೆ,ಹಿಂದಿನ ಬಿಜೆಪಿ ಸರಕಾರ ನೀಡಿದ ಸೌಲಭ್ಯಗಳು, ಮುಂದೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಹೋರಾಟ, ಕೇಂದ್ರ ಸರ್ಕಾರದ ಸೌಲಭ್ಯಗಳ ಜಾಗೃತಿ ಈ ಸಮಾವೇಶದ ಅಜೆಂಡಾವಾಗಿದೆ.
ವಾಲ್ಮೀಕಿ ಶ್ರೀಗಳ ಬಗ್ಗೆ ಸರಕಾರ ಏನು ಮಾಡಿದೆ ಎಂಬುದಕ್ಕೆ ಉತ್ತರ
ಶ್ರೀ ರಾಮಮಂದಿರ ನಿರ್ಮಾಣದ ವೇಳೆ ವಾಲ್ಮೀಕಿ ಶ್ರೀಗಳನ್ನು ಕೇಂದ್ರ ಸರಕಾರ ಮರೆತಿದೆ ಎಂಬುದಕ್ಕೆ ಠಕ್ಕರ್ ಕೊಡಲು ಈ ಸಮಾವೇಶ ಮುಂದಾಗಿದೆ. ಅಯೋಧ್ಯೆಯ ವಿಮಾನನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಅವರ ಹೆಸರನ್ನು ನಾಮಕರಣ ಮಾಡಿದ ಪ್ರಧಾನಿ ನರೇಂದ್ರ ಮೋದಿಜೀ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಿಗೆ ಈ ಸಮಾವೇಶದಲ್ಲಿ ಕೃತಜ್ಞತೆ ಸಲ್ಲಿಸಲಾಗುವುದು.
ಲೋಕಸಭೆ ಚುನಾವಣೆ ಹಿನ್ನೆಲೆ ಒಗ್ಗೂಡುವಿಕೆ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಎಸ್ಟಿ ಸಮಾವೇಶ ನಡೆಯಲಿದೆ. ದಾವಣಗೆರೆ ಜಿಲ್ಲೆಯಲ್ಲಿ ಸುಮಾರು ನಾಲ್ಕುವರೆ ಲಕ್ಷ ಮತಗಳು, ರಾಜ್ಯದಲ್ಲಿ ಸುಮಾರು 50 ಲಕ್ಷ ಮತಗಳಿದ್ದು, ಈ ಮತಗಳನ್ನು ಸೆಳೆಯುವುದು. ಅಲ್ಲದೇ ಬಿಜೆಪಿ ಸರಕಾರ ನೀಡಿದ ಕೊಡುಗೆಗಳ ಬಗ್ಗೆ ತಿಳಿಸಿ ಮತಗಳ ಬೇಟೆ ಮಾಡುವುದು ಈ ಕಾರ್ಯಕ್ರಮದ ಪ್ರಮುಖ ಅಜೆಂಡವಾಗಿದೆ.
ಶ್ರೀರಾಮುಲು, ರಾಜುಗೌಡ ಬರೋದು ಡೌಟ್
ಎಸ್ಟಿ ಸಮಾವೇಶಕ್ಕೆ ಶ್ರೀರಾಮುಲು, ರಾಜುಗೌಡ ಬರೋದು ಡೌಟ್ ಆಗಿದೆ. ಇವರಿಬ್ಬರು ದೆಹಲಿಗೆ ಹೋಗಿರುವ ಕಾರಣ ಸಮಾವೇಶಕ್ಕೆ ಬರುತ್ತಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಯಾರು ಬರಲಿದ್ದಾರೆ ಈ ಕಾರ್ಯಕ್ರಮಕ್ಕೆ
ಈ ಸಮಾವೇಶಕ್ಕೆ ಎಸ್.ಟಿ.ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ, ಎಸ್.ಟಿ. ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ, ಪ್ರಭಾರಿ ವಿ.ಸುನೀಲ್ ಕುಮಾರ್, ಮಾಜಿ ಸಚಿವರಾದ ಬಿ.ಶ್ರೀರಾಮುಲು, ರಾಜುಗೌಡ, ಎಸ್.ಎ.ರವೀಂದ್ರನಾಥ್, ಹರಿಹರ ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಪ್ರೊ. ಎನ್.ಲಿಂಗಣ್ಣ, ಎಂ.ಬಸವರಾಜ ನಾಯ್ಕ, ಮಾಡಾಳು ವಿರೂಪಾಕ್ಷಪ್ಪ, ಗುರುಸಿದ್ದನಗೌಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ, ಎಸ್.ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಯಶವಂತರಾವ್ ಜಾಧವ್ ಮತ್ತಿತರರು ಆಗಮಿಸಲಿದ್ದಾರೆ. ಒಟ್ಟಾರೆ ಎಸ್ಟಿ ಮುಂಗಡ ಸಮಾವೇಶ ಅದ್ದೂರಿಯಾಗಿ ನಡೆಯಲಿದ್ದು, ಎಲ್ಲ ಕಾರ್ಯ ಮುಗಿದಿದೆ.
ನಾಯಕ ಸಮಾಜದ ಏಳ್ಗೆಗಾಗಿ, ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ತಿಳಿಸುವುದು, ಬಿಜೆಪಿ ಸರಕಾರ ಆಡಳಿತ ಇದ್ದ ವೇಳೆ ಎಸ್ಟಿ ಸಮುದಾಯಕ್ಕೆ ಏನು ಮಾಡಿದೆ ಎಂಬುದರ ಬಗ್ಗೆ ಜಾಗೃತಿ ಮೂಡಿಸುವುದು ಈ ಸಮಾವೇಶ ಉದ್ದೇಶ
–ತ್ಯಾವಣಗಿ ಕೃಷ್ಣಮೂರ್ತಿ, ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ