
ಶಿವಮೊಗ್ಗ: ವಿನೋಬನಗರದ ಶನೈಶ್ವರ ದೇವಾಲಯ ಸಮಿತಿ ಟ್ರಸ್ಟ್ ವತಿಯಿಂದ ಜು.6ರಂದು ಶ್ರೀಶನೈಶ್ವರ ಜಯಂತಿ ಹಾಗೂ ಮಹಾರಥೋತ್ಸವ ನಡೆಯಲಿದೆ ಎಂದು ಟ್ರಸ್ಟ್‍ನ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶನೈಶ್ವರ ದೇವಾಲಯ ಪ್ರಾರಂಭವಾಗಿ 16 ವರ್ಷಗಳಾದವು ಪ್ರತಿನಿತ್ಯವು ಪೂಜೆ ನೆರವೇರುತ್ತ ಬಂದು ಅಪಾರ ಭಕ್ತರನ್ನು ಪಡೆದಿದೆ. ಅನೇಕ ಭಾಗಗಳಿಂದ ದೇವರ ಸನ್ನಿಧಿಗೆ ಬಂದು ಭಕ್ತರು ಧನ್ಯರಾಗುತ್ತಿದ್ದಾರೆ. ರಾಜ್ಯದ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿ ಇದು ರೂಪುಗೊಳ್ಳುತ್ತಿದೆ ಎಂದರು. ಈಗ ದೇವಾಲಯ ಸಮಿತಿ ಟ್ರಸ್ಟ್ ವತಿಯಿಂದ ಮಹಾರಥೋತ್ಸವ, ದಿವ್ಯ ಸತ್ಸಂಗ,ಕುಂಭಾಭಿಷೇಕ, ಭೂತಬಲಿ ಶಯನೋತ್ಸವ , ಶನಿಶಾಂತಿ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಜು.6ರಂದು ಬೆಳಿಗ್ಗೆ 10.30ಕ್ಕೆ ವೈಶಾಖ ಬಹುಳ ಅಮಾವಾಸೆಯಂದು ಶನೈಶ್ವರ ಜಯಂತಿಯ ಅಂಗವಾಗಿ ಗಣೇಶ ಪೂಜೆ, ಗ್ರಹಯಾಗ ಮತ್ತು ಮಹಾರಥೋತ್ಸವ ನಡೆಯಲಿದೆ. ನಂತರ ತೀರ್ಥ ಪ್ರಸಾಧ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ರಥೋತ್ಸವದ ಅಂಗವಾಗಿ ವಿಶೇಷ ಹೋಮ ಹವನಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜು.5ರಂದು ಸಂಜೆ 6.30ಕ್ಕೆ ದೇವಾಲಯದ ಮುಂಭಾಗದ ಆವರಣದಲ್ಲಿ ಹಾರ್ಟ್‍ಆಫ್‍ಲೀವಿಂಗ್‍ನ ಶ್ರೀರವಿಶಂಕರ್ ಗುರೂಜಿಯವರ ಶಿಷ್ಯ ಹಾಗೂ ಖ್ಯಾತ ಗಾಯಕರಾದ ಶ್ರೀನಿವಾಸ್ ಮತ್ತು ಶಾಲಿನಿ ಶ್ರೀನಿವಾಸ್ ತಂಡದಿಂದ ಸತ್ಸಂಗ ನಡೆಯಲಿದೆ. ಜು.7ರಂದು ಪ್ರಭೋದೋತ್ಸವ, 108 ಕಲಶ ಸ್ಥಾಪನೆ, ಕುಂಭಾಭಿಷೇಕ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಈ ಎಲ್ಲಾ ಕಾರ್ಯಕ್ರಮಗಳು ಜನರ ಕ್ಷೇಮಾರ್ಥವಾಗಿ ನಡೆಯುತ್ತವೆ. ಅತ್ಯಧಿಕ ಪುಣ್ಯ ಲಭಿಸುತ್ತದೆ ಎಂಬುವುದು ಶಾಸ್ತ್ರ ವಾಕ್ಯವಾಗಿದೆ. ಆದ್ದರಿಂದ ಭಕ್ತರು ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಮತ್ತು ತನುಮನಧನ ಸಹಾಯ ನೀಡಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿನ ಕಾರ್ಯದರ್ಶಿ ಸ.ನ.ಮೂರ್ತಿ ಪ್ರಮುಖರಾದ ವಿ.ರಾಜು, ಕೆ.ಕಾಂತೇಶ್, ವಿನಾಯಕ ಬಾಯಿರಿ, ಶಬರಿಕಣ್ಣನ್, ಪವನ್‍ಭಟ್ಟರು ಇದ್ದರು.