ದಾವಣಗೆರೆಯಲ್ಲಿ ನಡೆಯುತ್ತಿರುವ 24 ನೇ ಅಧಿವೇಶನಕ್ಕೆ ಸಾಕಷ್ಟು ಜನರು ದುಡಿಯುತ್ತಿದ್ದು, ಅದರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯದರ್ಶಿ ರೇಣುಕಾ ಪ್ರಸನ್ನ ಕೂಡ ಒಬ್ಬರು. ಸದ್ಯ ಕಾರ್ಯಕ್ರಮದ ಜವಾಬ್ದಾರಿ ತೆಗೆದುಕೊಂಡಿರುವ ಇವರು ಯಾಕಾಗಿ ಸಮಾವೇಶ ನಡೆಯುತ್ತಿದೆ. ಇದರ ಹಿಂದೆ ಇರುವ ಉದ್ದೇಶವೇನು. ಅಜೆಂಡಾ ಏನಿದೆ ಸೇರಿದಂತೆ ಇನ್ನಿತರ ವಿಷಯಗಳನ್ನು ಹೇಳಿದ್ದಾರೆ. ಅದರ ಸಂಪೂರ್ಣ ಡೀಟೆಲ್ಸ್ ನಿಮ್ಮ ಮಂದೆ ಇದೆ ತಪ್ಪದೇ ಓದಿ.
ನಂದೀಶ್ ಭದ್ರಾವತಿ, ದಾವಣಗೆರೆ
ವೀರಶೈವ ಲಿಂಗಾಯಿತ ಸಮಾಜದ ಬಗ್ಗೆ ಜಾಗೃತಿ, ಸಂಘಟನೆ ನನ್ನ ಮೂಲ ಉದ್ದೇಶ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯದರ್ಶಿ ರೇಣುಕಾ ಪ್ರಸನ್ನ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಸಮಾಜ, ಸಂಘಟನೆಯೇ ನನ್ನ ಮೂಲ ಗುರಿ. ಅಲ್ಲದೇ ಎಲ್ಲರನ್ನು ಒಟ್ಟುಗೂಡಿಸಿ ಸಮಾಜದ ಯಶಸ್ಸಿಗೆ ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದೇನೆ. ನಾನು ಅನ್ನುವುದಕ್ಕಿಂತ ನಾವು ಎಂಬುದೇ ಮೂಲ ಉದ್ದೇಶ.. ಸಮಾಜವೇ ಎಲ್ಲ ಎಂದು ಅವರು ಹೇಳಿದರು.
ವೀರಶೈವ ಮತ್ತು ಲಿಂಗಾಯತ ಸಮುದಾಯಗಳು ಒಂದೇ ಎಂಬ ಒಮ್ಮತದ ನಿರ್ಣಯವನ್ನು ಮಾಡಲಾಗಿದೆ. ವೀರಶೈವ ಲಿಂಗಾಯತದ ಬಗ್ಗೆ ಯಾವುದೇ ಗೊಂದಲ ಇಲ್ಲ. ಒಗ್ಗೂಡಿಸುವ ಕಾರ್ಯದಲ್ಲಿ ತೊಡಗಿದ್ದೇವೆ. ವಿಘಟನೆಗೆ ಅವಕಾಶ ನೀಡುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.
ಒಬಿಸಿ ಸೇರ್ಪಡೆಗೆ ಆಗ್ರಹ!
ವೀರಶೈವ ಮತ್ತು ಲಿಂಗಾಯತ ಸಮುದಾಯದವರನ್ನು ಕೇಂದ್ರ ಸರಕಾರದ ಒಬಿಸಿ ಪಟ್ಟಿಯಲ್ಲಿಇನ್ನೂ ಸೇರ್ಪಡೆ ಮಾಡಿಲ್ಲ. ಈ ಬಗ್ಗೆ ಬೇಗ ಸರಕಾರ ನಿರ್ಣಯ ತೆಗೆದುಕೊಳ್ಳಬೇಕು. ಅದಕ್ಕಾಗಿ ಸದನದ ಹೊರಗಡೆ, ಒಳಗಡೆ ಎರಡರಲ್ಲೂ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಾಗುವುದು,” ಎಂದು ಅವರು ಎಚ್ಚರಿಕೆ ನೀಡಿದರು.
ವೀರಶೈವ ಲಿಂಗಾಯತರು ಮುಂದುವರಿದವರು ಎಂದು ಕೆಲವರು ವಾದಿಸುತ್ತಾರೆ. ಆದರೆ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿಯೂ ಅತ್ಯಂತ ಹಿಂದುಳಿದಿರುವ ಸಮುದಾಯದಲ್ಲಿ ಲಿಂಗಾಯತ ವೀರಶೈವ ಸಮುದಾಯವೂ ಸೇರುತ್ತದೆ,” ಎಂದು ಹೇಳಿದರು.
ಕೇಂದ್ರ ಲೋಕಸೇವಾ ಆಯೋಗ, ಬ್ಯಾಂಕಿಂಗ್, ರೈಲ್ವೆ ನೇಮಕಾತಿ ಮಂಡಳಿ, ಸ್ಟಾಫ್ ಸೆಲೆಕ್ಷನ್ ಕಮಿಷನ್ ಮತ್ತು ಕೇಂದ್ರ ಸರಕಾರದ ಉದ್ದಿಮೆಗಳ ನೇಮಕಾತಿಯಲ್ಲಿ ಲಿಂಗಾಯತ ವೀರಶೈವ ಸಮುದಾಯದಿಂದ ಆಯ್ಕೆಯಾಗಿ ನೇಮಕಗೊಂಡಿರುವವರ ಪಾಲು ತುಂಬಾ ಕಡಿಮೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಈ ಸಮುದಾಯ ಹಿಂದುಳಿದಿರುವುದೇ ಕಾರಣವಾಗಿದೆ. ಅದಕ್ಕಾಗಿ ನಮ್ಮ ಸಮಾಜದ ಎಲ್ಲ ಒಳಪಂಗಡಗಳಿಗೆ ಒಬಿಸಿ ಸಿಗಲಿ ಎಂದು ಹೋರಾಟ ನಡೆಯುತ್ತಿದೆ. ಈ ಬಗ್ಗೆ ಅಧಿವೇಶನದಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಹೇಳುತ್ತಾರೆ ರೇಣುಕಾ.
ಜಾತಿಜನಗಣತಿ ದೃಷ್ಟಿಯಿಂದ ಕಾರ್ಯಕ್ರಮ ನಡೆಯುತ್ತಿಲ್ಲ.
ಎರಡು ಮೂರು ಪ್ರಮುಖ ವಿಚಾರಗಳಿಗೆ ಸಭೆ ನಡೆಯುತ್ತಿದೆ. ಅದರಲ್ಲಿ ಜಾತಿಗಣತಿ ಸಹ ಒಂದು. ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತ ಮತ್ತು ಎಲ್ಲ ಒಳಪಂಗಡಗಳ ಸೇರಿಸುವ ಬೇಡಿಕೆ ಪ್ರಮುಖ ಅಜೆಂಡವಾಗಿದೆ. ಅಲ್ಲದೇ ಸಮಾಜ ಜಾಗೃತಿ ಮತ್ತು ಸಂಘಟನೆ ಮಾಡಲು ಏನು ಬೇಕು ಅದರ ಬಗ್ಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.
ಜಾತಿ ಗಣತಿಗೆ ಮಹಾಸಭಾ ವಿರೋಧವಿಲ್ಲ
ನಮ್ಮದು ಯಾವುದೇ ಕಾರಣಕ್ಕೂ ಜಾತಿಗಣತಿಗೆ ವಿರೋಧವಿಲ್ಲ. ಆದರೆ ಜಾತಿಗಣತಿ ಸರಿಯಾಗಿಲ್ಲ. ಅದಕ್ಕಾಗಿ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಸಿಎಂಗೆ ಮನವಿ ಕೊಟ್ಟಿದ್ದಾರೆ. ಇದಕ್ಕೆಅಖಿಲ ಭಾರತ ವೀರಶೈವ ಮಹಾಸಭಾ, ಸಚಿವರು ಸೇರಿದಂತೆ ಅನೇಕ ಸಮುದಾಯದ ಮುಖಂಡರು ಸಹಿ ಮಾಡಿದ್ದಾರೆ. ಸತ್ಯಗಳನ್ನು ಆಧರಿಸಿ ತಾಜಾ ಮತ್ತು ವೈಜ್ಞಾನಿಕ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಜನಗಣತಿ ಲೋಪದೋಷದಿಂದ ಬಳಲುತ್ತಿದೆ
2015ರಲ್ಲಿ ನಡೆದ ಜನಗಣತಿ ಲೋಪದೋಷದಿಂದ ಬಳಲುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಲಾಗಿದೆ. “ಈ ಸಮಸ್ಯೆಯನ್ನು ಸರಿಪಡಿಸುವ ಅವಶ್ಯಕತೆಯಿದೆ. ಹೀಗಾಗಿ ವಾಸ್ತವಾಂಶ ಆಧರಿಸಿ ಹೊಸದಾಗಿ ವೈಜ್ಞಾನಿಕ ಜಾತಿ ಸಮೀಕ್ಷೆ ಕೈಗೊಳ್ಳುವಂತೆ ಮನವಿ ಮಾಡುತ್ತಿದ್ದೇವೆ ಎಂದು ರೇಣುಕಾ ಪ್ರಸನ್ನ ಹೇಳಿದರು.
ಜಾತಿ ಗಣತಿಯ ಗಣತಿದಾರರು ವಿವರಗಳಿಗಾಗಿ ತಮ್ಮ ಕುಟುಂಬದವರನ್ನು ಸಂಪರ್ಕಿಸಿಲ್ಲ ಎಂದು ನಮ್ಮ ಸಮಾಜದ ಹಲವರು ಹೇಳಿದ್ದಾರೆ. ಮೀಸಲಾತಿಯನ್ನು ಕಳೆದುಕೊಳ್ಳುವ ಭಯದಿಂದ, ಅನೇಕ ವೀರಶೈವ/ಲಿಂಗಾಯತರು ತಮ್ಮ ಉಪಜಾತಿ ಹೆಸರನ್ನು ಮಾತ್ರ ನಮೂದಿಸಿದ್ದಾರೆ. ಮತ್ತೊಂದೆಡೆ, ಇತರ ಜಾತಿಗಳ ಬಗ್ಗೆ ಮಾಡಲಾದ ನಮೂದುಗಳ ಬಗ್ಗೆ ಅನುಮಾನಗಳಿವೆ. ಬೇರೆ ಯಾವುದೇ ಸಮುದಾಯದ ಹಕ್ಕುಗಳನ್ನು ಕಸಿದುಕೊಳ್ಳಲು ನಾವು ಬಯಸುವುದಿಲ್ಲ.
ಹೊಸದಾಗಿ ಸಮೀಕ್ಷೆ ನಡೆಯಲಿ
ಸಮೀಕ್ಷಾ ವರದಿಗೆ ಎಂಟು ವರ್ಷ ತುಂಬಿರುವುದರಿಂದ ಜಾತಿ ಸಮೀಕ್ಷೆಯ ವರದಿಯನ್ನು ಒಪ್ಪಿಕೊಳ್ಳುವುದು ಸೂಕ್ತವಲ್ಲ ಬದಲಿಗೆ ಹೊಸದಾಗಿ ಸಮೀಕ್ಷೆ ನಡೆಸಬೇಕು ಎಂದು ಮಹಾಸಭಾ ಹೇಳಿದೆ ಎಂದು ರೇಣುಕಾ ಪ್ರಸನ್ನ ಜಾತಿಗಣತಿ ಬಗ್ಗೆ ವಾದ ಮಂಡಿಸಿದ್ದಾರೆ. ಒಟ್ಟಾರೆ ವೀರಶೈವ ಲಿಂಗಾಯಿತ ಸಮಾಜದ ಬಗ್ಗೆ ಇರುವ ಕಾಳಜಿಯನ್ನು ಸ್ಪಷ್ಟಪಡಿಸಿದರು.