
ದಾವಣಗೆರೆ: ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಬಾವಿಹಾಳ್ ಎಂಬ ಸಣ್ಣ ಹಳ್ಳಿಯ ರಸ್ತೆ, ಇನ್ನೂ ಅಭಿವೃದ್ಧಿಯಾಗಿಲ್ಲ ಎಂದರೆ ನಾಚಿಕೆಗೇಡಿನ ಸಂಗತಿ ಎಂದು ಚಿತ್ರದುರ್ಗ ತಾಲೂಕಿನ ಸಿರಿಗೆರೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ತಾಲೂಕಿನ ಬಾವಿಹಾಳ್ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಕರಿಯಮ್ಮ ದೇವಿ ದೇವಸ್ಥಾನದ ಕಟ್ಟಡ ಉದ್ಘಾಟನೆ ಮತ್ತು ಕಳಸಾರೋಹಣ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಪ್ರೊ.ಲಿಂಗಣ್ಣ ಐದು ವರ್ಷ ಶಾಸಕರಾಗಿದ್ದರು. ಈ ಹಿಂದೆ ಎಷ್ಟೋ ಜನ ಶಾಸಕರಾಗಿದ್ರು. ಈಗ ಬಸವಂತಪ್ಪ ಶಾಸಕರಾಗಿದ್ದಾರೆ. ಆದರೀಗ ಲಿಂಗಣ್ಣನವರೇ ನೀವು ಐದು ವರ್ಷ ಶಾಸಕರಾಗಿದ್ದಾಗ ಈ ರಸ್ತೆಯಲ್ಲಿ ಓಡಾಡಿದ್ದಿಯೋ ಇಲ್ಲವೋ, ನೀನು ಹೇಳು. ಐದು ವರ್ಷವಾದರೂ ರಸ್ತೆ ಹೀಗಿದಿಯೆಲ್ಲ ಎಂದರೆ ಹೇಗೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಅದೆಷ್ಟೋ ವರ್ಷಗಳು ಕಳೆದವು.

ಗ್ರಾಮೀಣ ರಸ್ತೆಗಳು ಯಾರು ಓಡಾಡಲು ಆಗದಂತೆ ಕೆಟ್ಟದಾಗಿವೆ. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಸಾಮಾಜಿಕ ಕಳಕಳಿ, ಸಾಮಾಜಿಕ ಬದ್ಧತೆ ಇರಬೇಕು. ಜನರಿಗೆ ಮೂಲಭೂತ ಸೌಲಭ್ಯ ಒದಗಿಸುವುದು ಪ್ರತಿಯೊಬ್ಬ ಜನಪ್ರತಿನಿಧಿಗಳ ಜವಾಬ್ದಾರಿ.ಒಂದು ಸಣ್ಣ ಗ್ರಾಮದ ರಸ್ತೆ ಅಭಿವೃದ್ಧಿ ಆಗಿಲ್ಲ ಎಂದರೆ ನಾಚಿಕೆಯಾಗಬೇಕೆಂದರು.
ಈ ವೇಳೆ ಬಾವಿಹಾಳ್ ರಸ್ತೆ ಅಭಿವೃದ್ಧಿಗೆ ನನ್ನ ಅವಧಿಯಲ್ಲಿ 1 ಕೋಟಿ ರೂ. ಅನುದಾನ ಮಂಜೂರಾಗಿತ್ತು ಎಂದು ಪ್ರೊ.ಲಿಂಗಣ್ಣ ಹೇಳಿದರು.
ಎಂಜಿನಿಯರ್ ಅಮಾನತು ಮಾಡಲು ಶ್ರೀಗಳ ಆಗ್ರಹ
ಇದಕ್ಕೆ ಪ್ರತಿಕ್ರಿಯಿಸಿದ ಜಗದ್ಗುರುಗಳು, ಹಾಗಾದರೆ 1 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದರೆ ರಸ್ತೆ ಅಭಿವೃದ್ಧಿ ಯಾಕೆ ಆಗಿಲ್ಲ. ನಮ್ಮ ನ್ಯಾಯಪೀಠದಲ್ಲಿ ವಾಗ್ದಾನ ಮಾಡಿದ್ದೀರಿ. ಆದರೂ ರಸ್ತೆ ಅಭಿವೃದ್ಧಿ ಆಗಿಲ್ಲ. ಇದಕ್ಕೆ ಸಂಬಂಧಪಟ್ಟ ಇಂಜಿನಿಯರ್ ಯಾರು, ಅವರನ್ನು ಅಮಾನತುಗೊಳಿಸಬೇಕು.ಈ ಕೆಲಸವನ್ನು ಶಾಸಕ ಬಸವಂತಪ್ಪ ಮಾಡಬೇಕು ಎಂದು ಶ್ರೀಗಳು ಹೇಳಿದರು.
ಶಾಸಕ ಬಸವಂತಪ್ಪ ವಾಗ್ದಾನ
ಹಳ್ಳಿ ಜನ, ನಿಮ್ಮನ್ನು ಕರೆದು ಗೌರವಿಸುತ್ತಾರೆ. ಅವರಿಗೆ ಬೇಕಾದ ಸೌಲಭ್ಯ ಕೊಡುವುದು ನಿಮ್ಮ ಕರ್ತವ್ಯ ಎಂದು ಶ್ರೀಗಳು ಕಿವಿಮಾತು ಹೇಳಿದರು.ಇದೇ ಸಂದರ್ಭದಲ್ಲಿ ಜಗದ್ಗುರುಗಳಿಗೆ ವಾಗ್ದಾನ ಮಾಡಿದ ಶಾಸಕ ಕೆ.ಎಸ್.ಬಸವಂತಪ್ಪ, ಸುಲ್ತಾನಿಪುರದಿಂದ ಬಾವಿಹಾಳ್ ಗ್ರಾಮದವರೆಗಿನ ರಸ್ತೆ ಅಭಿವೃದ್ಧಿಗೆ ಈಗಾಗಲೇ 5 ಕೋಟಿ ರೂ. ಅನುದಾನ ಮಂಜೂರಾಗಿದೆ. ಶೀಘ್ರವೇ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ನನ್ನ ಆದೇಶವನ್ನು ಇಬ್ಬರು ಪಾಲಿಸುತ್ತಾರೆ.
ಲಿಂಗಣ್ಣ ಆಗಲಿ, ಬಸವಂತಪ್ಪ ಆಗಲಿ ನನ್ನ ಆದೇಶವನ್ನು ಇಬ್ಬರು ಪಾಲಿಸ್ತಾರೆ. ಲಿಂಗಣ್ಣ ಬಿಜೆಪಿ ಇರಬಹುದು, ಬಸವಂತಪ್ಪ ಕಾಂಗ್ರೆಸ್ ಇರಬಹುದು, ನಾನು ಯಾವ ಪಾರ್ಟಿಯಲ್ಲ. ನಾನು ನಿಮ್ಮ ಪಾರ್ಟಿ ಎಂದು ಹಾಸ್ಯಚಟಕಿ ಹಾರಿಸಿದರು. ದೇವಸ್ಥಾನಕ್ಕೆ ಹೋಗುವಾಗ ಸ್ನಾನ ಮಾಡಿ, ಮಡಿಯಿಂದ ಹೇಗೆ ಹೋಗುತ್ತೀರಿ. ಅದೊಂದು ಪವಿತ್ರ ಸ್ಥಾನ ಅದು. ಹಾಗೆಯೇ ಪವಿತ್ರವಾಗಿರುವ ದೇವಸ್ಥಾನದಂತೆ ಶರೀರವನ್ನು, ಮನಸ್ಸನ್ನು ಪವಿತ್ರವಾಗಿಟ್ಟುಕೊಂಡು ನೆಮ್ಮದಿ ಬದುಕು ಸಾಗಿಸಬೇಕೆಂದರು.
ಗಣಪತಿ ಪೂಜೆ ಬಗ್ಗೆ ಗೊಂದಲ ಬೇಡ
ಇತ್ತೀಚಿಗೆ ಒಂದು ಗೊಂದಲ ಶುರುವಾಗಿದೆ. ಗಣಪತಿ ಪೂಜೆ ಮಾಡಬಾರದು. ಅದು ನಮ್ಮ ಸಂಸ್ಕೃತಿಯಲ್ಲ, ಅದು ಕಾಲ್ಪನಿಕ ಎಂದು ಮಾಧ್ಯಮಗಳಲ್ಲಿ ವರದಿ ಬಂದಿದೆ. ಈಗ ನಿಮ್ಮ ಎಲ್ಲ ಮನೆಗಳಲ್ಲಿ ಗಣಪತಿ ಫೋಟೋವಿದೆ. ಅದು ನಿಮ್ಮ ಸ್ವಾತಂತ್ರ್ಯ. ಪೂಜಾ ಸ್ವಾತಂತ್ರ್ಯವನ್ನು ನಮಗೆ ಸಂವಿಧಾನ ಕೊಟ್ಟಿದೆ. ಸಂವಿಧಾನದಲ್ಲಿ ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಪೂಜೆ ಎಂಬ ಐದು ಗ್ಯಾರಂಟಿ ಕೊಟ್ಟಿದೆ. ಇವುಗಳನ್ನು ಆಯ್ಕೆ ಮಾಡಿಕೊಳ್ಳುವುದು ನಿಮಗೆ ಬಿಟ್ಟಿದ್ದು ಎಂದರು.
ಕಾರ್ಯಕ್ರಮದಲ್ಲಿ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಮಾಜಿ ಶಾಸಕ ಪ್ರೊ.ಲಿಂಗಣ್ಣ, ನರಗನಹಳ್ಳಿ ಗ್ರಾಪಂ ಅಧ್ಯಕ್ಷೆ ಆಶಾ ನಾಗರಾಜ್, ಬಾವಿಹಾಳ್ ಗ್ರಾಪಂ ಸದಸ್ಯರಾದ ಕಲ್ಲೇಶಪ್ಪ, ಮೀನಾಕ್ಷಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
–ಬಾಕ್ಸ್—