
ದಾವಣಗೆರೆ : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಜೋರಾಗಿದ್ದು ಇದರ ನಡುವೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮೈಸೂರಿಗೆ ದಿಢೀರ್ ಭೇಟಿ ನೀಡಿ, ಸಚಿವ ಮಹದೇವಪ್ಪ ಹಾಗೂ ಸ್ಥಳೀಯ ಶಾಸಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ಕುತೂಹಲ ಮೂಡಿಸಿದೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಬಹುತೇಕ ಫಿಕ್ಸ್ ಎನ್ನಲಾಗಿದೆ. ಡಿಕೆಶಿಗೆ ಸಿದ್ದು ಬಣದ ನಾಯಕರು ಪೆಟ್ಟುಕೊಡಲು ಮುಂದಾಗಿದ್ದಾರೆ. ಹಾಗಾದ್ರೆ ಸಿದ್ದರಾಮಯ್ಯ ಯಾವಾಗ ರಾಜೀನಾಮೆ ಕೊಡ್ತಾರಾ? ಸತೀಶ ಜಾರಕಿಹೊಳಿ ಸಿಎಂ ಆಗ್ತಾರಾ? ಈ ಕುರಿತು ಸ್ಟೋರಿ ಇಲ್ಲಿದೆ ನೋಡಿ..
ಸಿಎಂ ಸಿದ್ದು ಪರಮಾಪ್ತ ಸಚಿವ ಸತೀಶ ಸಚಿವರು, ಶಾಸಕರು ಹಾಗೂ ಸ್ಥಳೀಯ ಮುಖಂಡರ ರಹಸ್ಯ ಸಭೆ ನಡೆಸಿದ್ದಾರೆ. ಚಾಮರಾಜನಗರ ಸಂಸದ ಸುನೀಲ್ ಬೋಸ್ ಮನೆಯಲ್ಲಿ ʻಅಹಿಂದʼ ನಾಯಕರ ಡಿನ್ನರ್ ಮೀಟಿಂಗ್ನಲ್ಲೂ ಭಾಗಿಯಾಗಿದ್ದಾರೆ. ಮುಡಾ ಹಗರಣದಲ್ಲಿ ನಾನು ನಿರಪರಾಧಿಯಾಗಿದ್ದು, ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಛರಿಸುತ್ತಿದ್ದರೂ, ಕಾಂಗ್ರೆಸ್ ಮುಖಂಡರು ಹಾಗೂ ಶಾಸಕರು ಪದೇಪದೇ ಸಭೆ ನಡೆಸುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.
ಮೈಸೂರಿನಲ್ಲಿ ನಡೆದ ಡಿನ್ನರ್ ಮೀಟಿಂಗ್ನಲ್ಲಿ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ, ಗೃಹ ಸಚಿವ ಡಾ.ಜಿ ಪರಮೇಶ್ವರ್, ಸಚಿವ ಸತೀಶ್ ಜಾರಕಿಹೊಳಿ ಭಾಗಿಯಾಗಿದ್ದು, ಮೂವರು ಹಿರಿಯ ಸಚಿವರು ಡಿನ್ನರ್ ನೆಪದಲ್ಲಿ ಮಹತ್ವದ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ಭೇಟಿ ಮಾಡಿರುವ ಸತೀಶ್ ಜಾರಕಿಹೊಳಿ, ದೆಹಲಿ ಭೇಟಿಯ ನಂತರ ಫುಲ್ ಅಲರ್ಟ್ ಆಗಿ ರಾಜ್ಯದ ಪ್ರಮುಖ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ.
ಸತೀಶ್ ಜಾರಕಿಹೊಳಿ ನಿನ್ನೆ ಬೆಳಿಗ್ಗೆಯಿಂದಲೂ ಮೈಸೂರಿನಲ್ಲಿಯೇ ಇದ್ದರು. ತಡರಾತ್ರಿ ಸಚಿವ ಮಹದೇವಪ್ಪ ಮನೆಯಲ್ಲಿ ಡಿನ್ನರ್ ಮೀಟಿಂಗ್ ನಡೆಸಿದ್ದಾರೆ. ಮೈಸೂರು ಭೇಟಿ ವೇಳೆ ಜಾರಕಿಹೊಳಿ ಮೊದಲಿಗೆ ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಲೋಕೇಶ್ ಪಿಯಾ ಮನೆಗೆ ಭೇಟಿ ನೀಡಿ, ಹೆಚ್’ಡಿ.ಕೋಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಜಂಗಲ್ ಲಾಡ್ಜ್ ಅಧ್ಯಕ್ಷ ಅನಿಲ್ ಚಿಕ್ಕಮಾದು ಭೇಟಿಯಾಗಿದ್ದಾರೆ.ನಂತರ ಕೆಜಿ ಕೊಪ್ಪಲಿನಲ್ಲಿರುವ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಹರೀಶ್ಗೌಡ ಮನೆಗೆ ಭೇಟಿ ನೀಡಿ, ಈ ವೇಳೆ ಕೆ.ಹರೀಶ್ ಗೌಡ, ಕೆ.ಆರ್.ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಿ.ರವಿಶಂಕರ್, ಮುಡಾ ಅಧ್ಯಕ್ಷ ಕೆ.ಮರೀಗೌಡ, ಮಾಜಿ ಶಾಸಕ ಎಂಕೆ. ಸೋಮಶೇಖರ್ ಅವರೊಂದಿಗೆ ಮಾತುಕತೆ ನಡೆಸಿದರು. ಮೈಸೂರು ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಭೇಟಿ ನೀಡಿದೆ. ನೆರೆಹೊರೆಯವರಾಗಿರುವುದರಿಂದ ಮಹದೇಹವಪ್ಪ ಭೇಟಿ ಮಾಡಿದೆ. ಇದರಲ್ಲಿ ವಿಶೇಷವೇನೂ ಇಲ್ಲ. ರಾಜಕಾರಣಿಗಳು ಭೇಟಿಯಾದಾಗ ರಾಜಕೀಯದ ಬಗ್ಗೆ ಚರ್ಚೆ ಮಾಡುವುದು ಸಾಮಾನ್ಯ. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯಲಿದ್ದು, ನಾಯಕತ್ವದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದಿದ್ದಾರೆ.

ನಾಯಕತ್ವ ಬದಲಾವಣೆ ಕುರಿತು ಗೊಂದಲಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಹೈಕಮಾಂಡ್ ಮಧ್ಯ ಪ್ರವೇಶಿಸುವ ಅಗತ್ಯವಿದೆ ಎನ್ನುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಪರವಾಗಿ ಇರುವ ದಲಿತ ನಾಯಕರು ಸರಣಿ ಸಭೆ ನಡೆಸುತ್ತಿರುವುದು ಸಿಎಂ ಬದಲಾವಣೆ ಫಿಕ್ಸ್ ಎನ್ನುವ ಸಂದೇಶ ರವಾನೆಯಾಗಿದೆ ಎನ್ನಲಾಗಿದೆ. ಈ ಮೂಲಕ ಸಿದ್ದು ಕೆಳಗಿಸಿದರೆ ಸರ್ಕಾರ ಇರುವುದಿಲ್ಲ ಎನ್ನುವ ಸಂದೇಶ ಕೂಡ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.