ದಾವಣಗೆರೆ : ನಾಲೆಗೆ ಭದ್ರಾ ನೀರು ಹರಿಸಲು ಪ್ರಾರಂಭಿಸಿ 10 ದಿನಗಳಾದ್ರೂ ನಾಲೆಗಳಲ್ಲಿ ನೀರು ರಬಸವಾಗಿ ಮತ್ತು ನಿಗಧಿತ ಪ್ರಮಾಣದಲ್ಲಿ ಹರಿಯುತ್ತಿಲ್ಲ.
ನೀರು ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ್ರು ಛೀಮಾರಿ ಹಾಕಿದ್ರೂ ಉಭಯ ಜಿಲ್ಲಾ ಸಚಿವರುಗಳಾದ ಎಸ್ ಎಸ್ ಮಲ್ಲಿಕಾರ್ಜುನ ಮತ್ತು ಮಧು ಬಂಗಾರಪ್ಪನವರು ಎಚ್ಚೆತ್ತು ಕೊಂಡಿಲ್ಲ ಎಂದು ರೈತ ಮುಖಂಡರುಗಳಾದ ಕೊಳೇನಹಳ್ಳಿ ಬಿ ಎಂ ಸತೀಶ್, ಧನಂಜಯ ಕಡ್ಲೆಬಾಳ್, ಎ.ವೈ.ಪ್ರಕಾಶ್, ಆಲೂರು ನಿಂಗರಾಜು, ಹೆಚ್.ಎನ್.ಶಿವಕುಮಾರ್, ಮಾಜಿ ಮೇಯರ್ ವಸಂತಕುಮಾರ್ ರವರು ನೀಡಿರುವ ಜಂಟಿ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಜುಲೈ 15 ರಿಂದಲೇ ನೀರು ಹರಿಸಿ ಎಂದು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು ಕ್ಯಾರೇ ಎನ್ನಲಿಲ್ಲ. ಅಂದು ನೀರು ಹರಿಸಿದ್ದರೆ ಕೆರೆ ಕಟ್ಟೆಗಳು ಹಳ್ಳ ಕೊಳ್ಳಗಳು ತುಂಬುತ್ತಿದ್ದವು. ರೈತರು ಭತ್ತದ ನಾಟಿಗೆ ಬೀಜ ಚೆಲ್ಲಿಕೊಳ್ಳಲು ಅನುಕೂಲವಾಗುತ್ತಿತ್ತು. ಇದ್ಯಾವುದರ ಪರಿವೆಯೇ ಇಲ್ಲದೆ ಡ್ಯಾಂ ಪೂರ್ತಿ ತುಂಬಿಸಿ ಒಮ್ಮೆಲೆ ನದಿಗೆ ನೀರನ್ನು ವ್ಯರ್ಥವಾಗಿ ಹರಿಸಲಾಗುತ್ತಿದೆ. ಇದರಿಂದ ನದಿಯ ಆಸುಪಾಸಿನಲ್ಲಿರುವವರಿಗೆ ತೊಂದರೆಯಾಗುತ್ತದೆ ಎಂಬ ಕನಿಷ್ಠ ಜ್ಞಾನವೂ ಇಲ್ಲದಂತಾಗಿದೆ.
ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿರುವ ಕೆರೆ ಕಟ್ಟೆಗಳಿಗೆ ಇಂದಿಗೂ ಒಂದು ಹನಿ ನೀರು ಬಂದಿಲ್ಲ. ನೀರು ಇದ್ದಾಗ ಕೆರೆ ಕಟ್ಟೆಗಳನ್ನು ತುಂಬಿಸಿಕೊಂಡರೆ ಒಂದು ಸಣ್ಣ ಕೆರೆ ಕನಿಷ್ಟ 300 ಎಕರೆ ಜಮೀನಿಗೆ ನೀರುಣಿಸುತ್ತದೆ ಮತ್ತು ಕೆರೆಯ ಸುತ್ತ ಏಳೆಂಟು ಕಿ.ಮೀ ದೂರ ಅಂತರ್ಜಲ ಮಟ್ಟ ಕುಸಿಯುವುದಿಲ್ಲ. ಇಂತಹ ಪರೋಕ್ಷ ನೀರಾವರಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನರವರಿಗೆ ಕಿಂಚಿತ್ತೂ ಚಿಂತನೆ ಇಲ್ಲ. ರೈತರ ಹಿತಾಸಕ್ತಿಯ ಕಾಳಜಿ ಇಲ್ಲವಾಗಿದೆ.
ಡ್ಯಾಂ ತುಂಬಿದೆ ಎಂಬ ಸಂತಸದಲ್ಲೂ ನಾಲೆಯಲ್ಲಿ ನೀರಿನ ಕೊರತೆ ಕಾಡುತ್ತಿದೆ. ಜಿಲ್ಲಾಧಿಕಾರಿಯವರ ಮೆತ್ತನೆಯ ಮಾತಿನಿಂದ ರೈತರ ಸಂಕಷ್ಟ ನಿವಾರಣೆಯಾಗುವುದಿಲ್ಲ. ಕಳೆದ ಬೇಸಿಗೆ ಹಂಗಾಮಿನಲ್ಲಿ ರೈತರು ಬೀಕರ ಬರದಿಂದ ಬಸವಳಿದಿದ್ದಾರೆ. ಬಡಕಲು ರೈತರ ಸಹನೆಯ ಕಟ್ಟೆ ಒಡೆಯುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತು ಕೊಂಡು, ನೀರು ನಿರ್ವಹಣೆ ಸಮರ್ಪಕವಾಗಿ ಮಾಡುವಂತೆ ಕ್ರಮ ಕೈಗೊಳ್ಳಬೇಕು.
ಮಳೆಗಾಲದ ಹಂಗಾಮಿನ ಭತ್ತ ಬೆಳೆಗೆ ಸೂಕ್ತ ರೀತಿಯಲ್ಲಿ ನೀರು ಒದಗಿಸಬೇಕು ಎಂದು ಬಿ.ಎಂ.ಸತೀಶ್, ಧನಂಜಯ ಕಡ್ಲೆಬಾಳ್, ಎ.ವೈ.ಪ್ರಕಾಶ್, ಆಲೂರು ನಿಂಗರಾಜು, ಹೆಚ್.ಎನ್.ಶಿವಕುಮಾರ್, ವಸಂತಕುಮಾರ್ ರವರು ಆಗ್ರಹಿಸಿದ್ದಾರೆ.