ನಂದೀಶ್ ಭದ್ರಾವತಿ ದಾವಣಗೆರೆ
ಶಿಮುಲ್ ಚುನಾವಣೆಗೆ ಅಖಾಡ ಸಿದ್ದವಾಗಿದ್ದು, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗದ ಕಾಂಗ್ರೆಸ್, ಬಿಜೆಪಿ ನಡುವೆ ನೇರಾಹಣಾಹಣಿ ನಡೆಯುತ್ತಿದೆ. ಎರಡು ಪಕ್ಷಗಳ ಆಕಾಂಕ್ಷಿಗಳು ಈಗ ಮತ ಪ್ರಚಾರ ಕೈಗೊಂಡಿದ್ದಾರೆ.
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಯ ಶಿವಮೊಗ್ಗ ಹಾಲು ಒಕ್ಕೂಟ(ಶಿಮುಲ್)ದ ಐದು ವರ್ಷದ ಆಡಳಿತ ಮಂಡಳಿ ಅವಧಿ ಜನವರಿಗೆ ಕೊನೆಗೊಂಡಿದೆ. ಈ ಹಿಂದೆ ಏ.20 ರಂದು ಚುನಾವಣೆ ಘೋಷಣೆ ಆಗಿತ್ತು. ಈ ನಡುವೆ ಲೋಕಸಭೆ ಚುನಾವಣೆ ಬಂದ ಕಾರಣ ಶಿಮುಲ್ ಚುನಾವಣೆ ಮುಂದೂಡಲಾಗಿತ್ತು. ಆದರೀಗ ಈಗ ಚುನಾವಣೆ ಘೋಷಣೆ ಆಗಿದ್ದು, ಆಗಸ್ಟ್ 14 ಕ್ಕೆ ಚುನಾವಣೆ ನಡೆಯಲಿದೆ.
2024-25ರಿಂದ 2028-29ನೇ ಸಾಲಿನ ನೂತನ ಆಡಳಿತ ಮಂಡಳಿ ಆಯ್ಕೆಗೆ ಈ ಚುನಾವಣೆ ದಿನಾಂಕವನ್ನು ಘೋಷಿಸಲಾಗಿದೆ. ಶಿಮುಲ್ಗೆ ಆಗಸ್ಟ್ 14 ರಂದು ಚುನಾವಣೆ ನಡೆಸಲು ಜಿಲ್ಲಾಧಿಕಾರಿಯೂ ಆದ ಜಿಲ್ಲಾ ಚುನಾವಣಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ.
ಉಪಾಧ್ಯಕ್ಷ ಬಸಪ್ಪ ಮತ್ತೆ ಅಖಾಡಕ್ಕೆ
ಶಿಮುಲ್ ಉಪಾಧ್ಯಕ್ಷ ಬಸಪ್ಪ ಈ ಬಾರಿ ಮತ್ತೆ ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ. ಅಲ್ಲದೇ ಭರ್ಜರಿ ಪ್ರಚಾರ ಆರಂಭಿಸಿದ್ದು, ಎಲ್ಲ ಹಾಲು ಉತ್ಪಾದಕ ಸಂಘಗಳನ್ನು ಭೇಟಿ ಮಾಡುತ್ತಿದ್ದಾರೆ.
ದಾವಣಗೆರೆ ವಿಜಯದೊಂದಿಗೆ ಮಾತನಾಡಿ, ಶಿವಮೊಗ್ಗ ಹಾಲು ಒಕ್ಕೂಟಕ್ಕೆ (ಶಿಮುಲ್) ಪ್ರತಿದಿನ 7.6 ಲಕ್ಷ ಲೀಟರ್ ಹಾಲು ಸಂಗ್ರವಾಗುತ್ತಿದೆ. ಮುಂದಿನ ದಿನಗಳಲ್ಲಿ 70,000 ಹಸುಗಳಿಗೆ ವಿಮೆ ಮಾಡಿಸುವ ಗುರಿ ಹೊಂದಲಾಗಿದೆ’
ಹಾಲು ಹಾಕುವ ಪ್ರತಿ ರೈತರೂ ತಮ್ಮ ಜಾನುವಾರುಗಳಿಗೆ ವಿಮೆ ಮಾಡಿಸಲು ಪ್ರೋತ್ಸಾಹಿಸಿದ್ದೇನೆ.ಒಕ್ಕೂಟದಿಂದ ನೀಡಲಾಗುವ ಹಾಲಿನ ದರದಲ್ಲಿ ಪ್ರತಿ ಲೀಟರ್ಗೆ ರೂಮ 10 ಪೈಸೆಯನ್ನು ಕಲ್ಯಾಣ ಟ್ರಸ್ಟ್ಗೆ ಭರಿಸಲಾಗುತ್ತದೆ. ಇದು ವರ್ಷಕ್ಕೆ ರೂಮ 20 ಕೋಟಿಯಿಂದ ರೂ. 22 ಕೋಟಿ ಆಗುತ್ತದೆ. 18ರಿಂದ 59 ವಯಸ್ಸಿನ ಶೇರುದಾರರು ಮರಣ ಹೊಂದಿದರೆ ಒಕ್ಕೂಟದಿಂದ ರೂ. 1 ಲಕ್ಷ, 61 ವರ್ಷ ಮೇಲ್ಪಟ್ಟವರಿಗೆ ರೂ. 40,000 ವಿಮೆ ಪರಿಹಾರ ಕೊಡಲಾಗುತ್ತದೆ. ಅದನ್ನು ಮುಂದುವರಿಸುತ್ತೇನೆ.
ಹೊಸ ಹೊಸ ಅವಿಷ್ಕಾರಗಳು ಮತ್ತು ದಿನಕ್ಕೊಂದು ಕಾನೂನು ತಿದ್ದುಪಡಿ ಬರುವುದರಿಂದ ಹಾಲು ಉತ್ಪಾದಕ ಸಂಘದ ಅಧ್ಯಕ್ಷರು, ನಿದೇರ್ಶಕರು, ಕಾರ್ಯದರ್ಶಿಗಳು ಹೊಸ ಮಾರ್ಗಸೂಚಿಗಳು ಮತ್ತು ನೀತಿ ನಿಯಮಗಳನ್ನು ತಿಳಿದುಕೊಂಡು ಕಾರ್ಯಾಗಾರ ನಡೆಸುತ್ತೇನೆ.
ಅತಿ ಹೆಚ್ಚು ಹಾಲು ಉತ್ಪಾದನೆ ಆಗುತ್ತಿರುವುದರಿಂದ ರಾಜ್ಯದಲ್ಲಿಯೇ ನಮ್ಮ ಒಕ್ಕೂಟ ಎರಡನೇ ಸ್ಥಾನದಲ್ಲಿದೆ. ಆದ್ದರಿಂದ ರೈತರನ್ನು ಉಳಿಸುವ ಉದ್ದೇಶದಿಂದ ಐವತ್ತು ಮಿಲಿ ಹೆಚ್ಚಿಗೆ ಮಾಡಿ ರೈತರನ್ನು ಉಳಿಸಿದ್ದೆವೆ.
ದೇಶದಲ್ಲಿ ದಿನಕ್ಕೆ ಅತಿ ಹೆಚ್ಚು ಅಂದರೆ 2.30 ಸಾವಿರ ಮೆಟ್ರಿಕ್ ಟನ್ ಹಾಲು ಉತ್ಪಾದನೆಯಾಗುತ್ತಿದೆ. ಗುಜರಾತ್ ಹಾಲಿನ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ನಂದಿನಿ ಹಾಲು ರೂ. 24,000 ಕೋಟಿ ವ್ಯವಹಾರ ನಡೆಸಿ ದೇಶದಲ್ಲಿಯೇ 2ನೇ ಸ್ಥಾನದಲ್ಲಿದೆ’ ಒಂದನೇ ಸ್ಥಾನಕ್ಕೆ ತರಲು ಪ್ರಯತ್ನಿಸುತ್ತೇನೆ ಎಂದರು.
ಮತದಾರರು ಎಷ್ಟು
ಮೂರೂ ಜಿಲ್ಲೆಗಳ ವ್ಯಾಪ್ತಿಯ ಒಕ್ಕೂಟದಲ್ಲಿ 1406 ಸಂಘಗಳಿದ್ದು, ಇದರಲ್ಲಿ 1176 ಸಂಘಗಳು ಮತದಾನ ಹಕ್ಕು ಪಡೆದುಕೊಂಡಿವೆ. ವಿವಿಧ ಕಾರಣಗಳಿದಾಗಿ 230 ಸಂಘಗಳು ಮತದಾನ ಹಕ್ಕಿಗೆ ಅರ್ಹರಾಗಿಲ್ಲ. ಸಂಘಗಳ ಸಂಖ್ಯೆಗೆ ಅನುಗುಣವಾಗಿ ಒಕ್ಕೂಟವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ(ತೀರ್ಥಹಳ್ಳಿ, ಭದ್ರಾವತಿ, ಶಿವಮೊಗ್ಗ ತಾಲೂಕುಗಳು) ಮತ್ತು ಸಾಗರ(ಸೊರಬ, ಸಾಗರ ಹೊಸನಗರ, ಶಿಕಾರಿಪುರ) ಎಂಬ ಎರಡು ವಿಭಾಗಗಳಿದ್ದರೆ ದಾವಣಗೆರೆ(ಹರಿಹರ, ದಾವಣಗೆರೆ, ಹೊನ್ನಾಳಿ, ನ್ಯಾಮತಿ, ಚನ್ನಗಿರಿ, ಜಗಳೂರು) ಮತ್ತು ಚಿತ್ರದುರ್ಗ(ಹೊಳಲ್ಕೆರೆ, ಚಿತ್ರದುರ್ಗ, ಹೊಸದುರ್ಗ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು) ಪ್ರತ್ಯೇಕ ಎರಡು ವಿಭಾಗಗಳಾಗಿವೆ.
14 ನಿರ್ದೇಶಕ ಬಲದ ಒಕ್ಕೂಟದಲ್ಲಿ ಶಿವಮೊಗ್ಗ ಮತ್ತು ಸಾಗರ ವಿಭಾಗದಿಂದ ತಲಾ ಮೂವರು, ದಾವಣಗೆರೆ ಮತ್ತು ಚಿತ್ರದುರ್ಗ ವಿಭಾಗಗಳಿಂದ ತಲಾ ನಾಲ್ವರು ನಿರ್ದೇಶಕರನ್ನು ಆಯ್ಕೆ ಮಾಡಲಾಗುತ್ತದೆ.
ಮತದಾನ ಹೇಗೆ
ಮತದಾನದ ಹಕ್ಕು ಪಡೆದುಕೊಂಡ ಹಾಲು ಉತ್ಪಾದಕರ ಸಹಕಾರ ಸಂಘಗಳ ಆಡಳಿತ ಮಂಡಳಿಯು ತಮ್ಮ ಸಂಘದ ಒಬ್ಬ ಪ್ರತಿನಿಧಿಯನ್ನು ಮತದಾರನನ್ನಾಗಿ ಆಯ್ಕೆ ಮಾಡುತ್ತದೆ. ಇದಕ್ಕೆ ಪೂರಕವಾಗಿ ಒಕ್ಕೂಟವು ಸದಸ್ಯ ಸಂಘಗಳಿಗೆ ಡೆಲಿಗೇಟ್ ಪ್ರತಿ, ಗುರುತಿನ ಚೀಟಿ, ಸಂಘದ ಠರಾವಿನ ನಮೂನೆಯನ್ನು ಕಳುಹಿಸಲಾಗುವುದು. ನಿಯಮಾನುಸಾರ ತಮ್ಮ ಸಂಘದ ಪ್ರತಿನಿಧಿಯನ್ನು ಗುರುತಿಸಿ ಒಕ್ಕೂಟಕ್ಕೆ ಶಿಫಾರಸ್ಸು ಮಾಡಿದ ಬಳಿಕ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ಮತದಾರರು ತಮ್ಮ ವಿಭಾಗದಲ್ಲಿ ಸ್ಪರ್ಧಿಸಿದವರಲ್ಲಿಒಬ್ಬರಿಗೆ ಮತದಾನ ಮಾಡುವ ಮೂಲಕ ಆಯ್ಕೆ ಮಾಡಿಕೊಳ್ಳಬಹುದು. ಚುನಾವಣೆಯಲ್ಲಿ ಪ್ರತಿ ವಿಭಾಗದಲ್ಲಿಅತಿಹೆಚ್ಚು ಮತಗಳನ್ನು ಪಡೆದವರನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.
ವಿಜಯಿ ಎಂದು ಘೋಷಿಸುವಾಗ ಪ್ರತಿ ತಾಲೂಕಿನಿಂದ ಒಬ್ಬರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಒಂದೇ ತಾಲೂಕಿನಲ್ಲಿ ಅತಿಹೆಚ್ಚು ಮತ ಪಡೆದ ಇಬ್ಬರು ಇದ್ದರೂ ಒಬ್ಬರನ್ನು ಮಾತ್ರ ಪರಿಗಣಿಸಲಾಗುತ್ತದೆ. ಆ ಮೂಲಕ ಶಿವಮೊಗ್ಗ ಜಿಲ್ಲೆಯಿಂದ ಆರು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಿಂದ ತಲಾ ನಾಲ್ವರನ್ನು ಆಯ್ಕೆ ಮಾಡಲಾಗುತ್ತದೆ.
ಎಚ್.ಕೆ.ಬಸಪ್ಪಗೆ ಸಿಗುತ್ತಾ ಎಸ್ ಎಸ್ ಎಂ ಬೆಂಬಲ
ಈಗಾಗಲೇ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ವೈಯಕ್ತಿಕ ಬಲದಿಂದ ನಿಂತಿರುವ ಎಚ್.ಕೆ.ಬಸಪ್ಪಗೆ ಎಸ್.ಎಸ್.ಎಂ ಶ್ರೀ ರಕ್ಷೆ ಇದೆ. ಹಾಗಾಗಿ ಈ ಬಾರಿ ಕಾಂಗ್ರೆಸ್ ಗೆಲ್ಲಿಸಬೇಕೆಂದು ಎಸ್.ಎಸ್.ಎಂ ಕೂಡ ಬೆಂಬಲವಾಗಿ ನಿಂತಿದ್ದಾರೆ. ಆಡಳಿತರೂಢ ಕಾಂಗ್ರೆಸ್ ಇರುವ ಕಾರಣ ಗೆಲ್ಲುವ ವಿಶ್ವಾಸವನ್ನು ಬಸಪ್ಪ ವ್ಯಕ್ತಪಡಿಸಿದ್ದಾರೆ.
ಪ್ರತಿಷ್ಠೆಕಣವಾಗಿ ತೆಗೆದುಕೊಂಡ ಶಿವಮೊಗ್ಗ ಸಂಸದ
ಶಿವಮೊಗ್ಗದಲ್ಲಿ ಡಿಸಿಸಿ ಬ್ಯಾಂಕ್ ಸೋತಿರುವ ಬಿಜೆಪಿ ಈಗ ಶಿಮುಲ್ ಚುನಾಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಅದರಲ್ಲೂ ಸಂಸದ ರಾಘವೇಂದ್ರ ಬಿಜೆಪಿ ಕಾರ್ಯಕಾರಣಿಯಲ್ಲಿ ಮಾತನಾಡಿ, ‘ಸಹಕಾರಿ ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಅಗತ್ಯವಿದೆ. ಅಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತಿದೆ. ಸಹಕಾರಿ ಕ್ಷೇತ್ರದಲ್ಲಿ ಬಂಗಾರವನ್ನು ಕಬ್ಬಿಣ ಮಾಡುವುದು, ಕಬ್ಬಿಣವನ್ನು ಬಂಗಾರವನ್ನಾಗಿ ಮಾಡಿದರೂ ನಡೆಯುತ್ತದೆ ಎನ್ನುವ ಭಾವನೆ ಇದೆ. ಇದನ್ನು ನಾವು ಬದಲಾಯಿಸಬೇಕು’ ಎನ್ನುವ ಮೂಲಕ ಪರೋಕ್ಷವಾಗಿ ಡಿಸಿಸಿ ಬ್ಯಾಂಕ್ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
‘ಮುಂದಿನ ದಿನಗಳಲ್ಲಿ ಶಿಮುಲ್ ಚುನಾವಣೆ ಬರಲಿದೆ. ಇದನ್ನು ಸವಾಲಾಗಿ ಸ್ವೀಕರಿಸಿ ಚುನಾವಣೆ ಎದುರಿಸಲಾಗುವುದು. ಕಾಂಗ್ರೆಸ್ ಸರ್ಕಾರ ಹಾಲಿನ ಪೋತ್ಸಾಹಧನ ನೀಡಲು ವಿಳಂಬ ಮಾಡುತ್ತಿದೆ. ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಇದ್ದಾಗ ಪ್ರೋತ್ಸಾಹಧನ ಘೋಷಣೆ ಮಾಡಿದ್ದರು. ರೈತರ ಹಾಲಿಗೆ ವಿಷ ಬೆರೆಯಿಸುವ ಕೆಲಸ ಸರ್ಕಾರ ಮಾಡುತ್ತಿದೆ’ ಎಂದು ರಾಘವೇಂದ್ರ ಹೇಳಿದ್ದರು. ಈ ಮಾತಿನ ಮೂಲಕ ಶಿಮುಲ್ ಚುನಾವಣೆಯನ್ನು ಬಿವೈಆರ್ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದಾರೆ. ಒಟ್ಟಾರೆ ಕದನ ಜೋರಾಗಿದ್ದು, ದಾವಣಗೆರೆ ಜಿಲ್ಲೆಯಲ್ಲಿ ಎಸ್ ಎಸ್ ಎಂ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡರೆ ಶಿವಮೊಗ್ಗದಲ್ಲಿ ಸಂಸದ ರಾಘವೇಂದ್ರ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದಾರೆ. ರಂಗಪ್ರವೇಶದಲ್ಲಿ ಯಾರು ಗೆಲ್ಲುತ್ತಾರೆ ಎಂದು ಕಾದು ನೋಡಬೇಕು.
ವ್ಯಾಪ್ತಿ- ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ
- ವಿಭಾಗಗಳು- ಶಿವಮೊಗ್ಗ, ಸಾಗರ, ದಾವಣಗೆರೆ, ಚಿತ್ರದುರ್ಗ
- ಒಟ್ಟು ನಿರ್ದೇಶಕರು- 14
- ಒಟ್ಟು ಸಂಘಗಳು- 1406
*ಮತದಾರರು-ಶಿವಮೊಗ್ಗ(268), ಸಾಗರ(254), ದಾವಣಗೆರೆ(363), ಚಿತ್ರದುರ್ಗ(291)
*ಮತದಾನಕ್ಕೆ ಅನರ್ಹವಾದ ಸಂಘಗಳು- 230