ನಂದೀಶ್ ಭದ್ರಾವತಿ ದಾವಣಗೆರೆ
ಜನಮೆಚ್ಚಿದ ನಂದಿನಿ ಹಾಲು ತನ್ನ ಉತ್ಪನ್ನಗಳ ಸೇಲ್ ನಲ್ಲಿ ಈ ಬಾರಿ ಐತಿಹಾಸಿಕ ದಾಖಲೆ ಸೃಷ್ಟಿಸಿದೆ.ಶಿಮುಲ್ ಗೆ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಸೇರಿದ್ದು, ಪ್ರತಿ ನಿತ್ಯ ಶಿಮುಲ್ ಗೆ 6 ಲಕ್ಷದ 50 ಸಾವಿರ ಲೀಟರ್ ಹಾಲು ಬರುತ್ತಿದ್ದು, 3 ಲಕ್ಷದ 58 ಸಾವಿರ ಹಾಲು ಪ್ರತಿ ನಿತ್ಯ ಸೇಲ್ ಆಗುತ್ತಿದೆ. ಇನ್ನು ಪ್ರತಿ ನಿತ್ಯ 1 ಲಕ್ಷದ ಏಳು ಸಾವಿರ ಲೀಟರ್ ಮೊಸರು ಸೇಲ್ ಆಗುತ್ತಿದೆ.
ಕಳೆದ ವರ್ಷ ಇದೇ ಸಮಯಕ್ಕೆ ಪ್ರತಿ ನಿತ್ಯ 2 ಲಕ್ಷದ 40 ಸಾವಿರ ಲೀಟರ್ ಹಾಲು ಸೇಲ್ ಆಗುತ್ತಿತ್ತು. ಇನ್ನು ಕಳೆದ ವರ್ಷ ಮೊಸರು 40 ಸಾವಿರದಿಂದ 50 ಸಾವಿರ ಲೀಟರ್ ಮಾತ್ರ ಸೇಲ್ ಆಗಿತ್ತು. ಈ ಅಂಕಿ ಸಂಖ್ಯೆಗಳನ್ನು ನೋಡಿದರೆ ಇದು ಐತಿಹಾಸಿಕ ದಾಖಲೆಯಾಗಿದೆ.
ಸದ್ಯ ಬಿಸಿಲು ಹೆಚ್ಚಿದ್ದು, ನಂದಿನಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದೆ. ಅದರಲ್ಲೂ ಮಜ್ಜಿಗೆ, ಮೊಸರು, ಲಸ್ಸಿ, ತುಪ್ಪವನ್ನು ಹೆಚ್ಚು ಕೊಂಡುಕೊಳ್ಳುತ್ತಿದ್ದಾರೆ.
ಶಿಮುಲ್ ವ್ಯಾಪ್ತಿಯಲ್ಲಿ ಬೇರೆ ಹಾಲುಗಳು ಕಾಲು ಇಟ್ಟರೂ, ಜನ ಅವುಗಳನ್ನು ಒಪ್ಪಿಕೊಂಡಿಲ್ಲ. ಬದಲಾಗಿ ನಂದಿನಿ ಗುಣಮಟ್ಟಕ್ಕೆ ಮಾರು ಹೋಗಿದ್ದಾರೆ. ಅಲ್ಲದೇ ರೈತರಿಗೆ ಲಾಭವಾಗುವ ದೃಷ್ಟಿಯಿಂದಲೂ ಜನ ನಂದಿನಿ ಹಾಲನ್ನು ಒಪ್ಪಿದ್ದಾರೆ. ಅಲ್ಲದೇ ಈ ಹಾಲು ಬಿಟ್ಟರೇ ಬೇರೆ ಹಾಲನ್ನು ಒಪ್ಪಿಕೊಳ್ಳುತ್ತಿಲ್ಲ.
ಈ ಬಾರಿ ಬೇಸಿಗೆ, ಮಕ್ಕಳಿಗೆ ಬೇಸಿಗೆ ರಜೆ, ಸಾಲು ಸಾಲು ಹಬ್ಬ, ಮನೆಗೆ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಬಂದಿರುವ ಕಾರಣ ಹಾಲು ಹೆಚ್ಚಾಗಿ ಸೇಲ್ ಆಗುತ್ತಿದೆ. ನಂದಿನಿ ಬ್ರಾಂಡ್ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಅಧಿಕವಿದೆ. ಹಾಲು, ಮೊಸರಿಗೂ ದಿನ ಕಳೆದಂತೆ ಹೆಚ್ಚು ಬೇಡಿಕೆ ಇದ್ದು, ಮಿತ ಹಾಲು ಶಿಮುಲ್ ಗೆ ಬರುತ್ತಿದೆ. ಆದರೂ ಬರುವ ಹಾಲನ್ನು ಬೇರೆ ಜಿಲ್ಲೆಗೆ ಕಳಿಸಲಾಗುತ್ತಿದೆ. ಇನ್ನು ಹಾಲಿನ ಗುಣಮಟ್ಟ ಕಾಪಾಡಿಕೊಳ್ಳುವುದರಲ್ಲಿ ಮೊದಲ ಸ್ಥಾನದಲ್ಲಿರುವ ಶಿಮುಲ್, ರೈತರಿಂದ ಹಾಲು ಸಂಗ್ರಹಿಸಿ ಒಕ್ಕೂಟಕ್ಕೆ ರವಾನಿಸುವ ಕೆಲಸ ಮಾಡುತ್ತಿರುವ ಸಂಘಗಳಿಗೂ ಬೆಂಬಲ ನೀಡುತ್ತಿದೆ.
ಇದೇ ಕಾರಣದಿಂದ ಶಿಮುಲ್ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳು ಆರ್ಥಿಕವಾಗಿ ಸದೃಢವಾಗಿರುವುದಲ್ಲದೆ, ಹಾಲಿನ ಉತ್ಪಾದನೆ ಪ್ರೋತ್ಸಾಹಿಸಲು ಪ್ರತ್ಯೇಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತಿವೆ. ಇದರಿಂದ ರೈತರು ಗುಣ ಮಟ್ಟದ ಹಾಲನ್ನು ಒಕ್ಕೂಟಕ್ಕೆ ನೀಡುತ್ತಿದ್ದಾರೆ.
ಶಿಮುಲ್ ನಲ್ಲಿ ಡೀಲರ್ಸ್ ಗೆ ಕಮಿಷನ್ ಸಹ ಹೆಚ್ಚಳ
ಶಿವಮೊಗ್ಗ ಹಾಲು ಒಕ್ಕೂಟ ಕೇವಲ ಹಾಲು ಉತ್ಪಾದಿಸುವ ರೈತರಿಗೆ ಅಲ್ಲದೆ ಹಾಲನ್ನು ಗ್ರಾಹಕರಿಗೆ ತಲುಪಿಸುವ ಏಜೆನ್ಸಿಗಳಿಗೂ ರಾಜ್ಯದ ಬೇರಾವುದೆ ಒಕ್ಕೂಟ ನೀಡದಷ್ಟು ಕಮಿಷನ್ ನೀಡುತ್ತಿದೆ. ರಾಜ್ಯದೆಲ್ಲೆಡೆ ಅತ್ಯಧಿಕ ಮಾರಾಟವಾಗುವ ಟೋನ್ಡ್ ಹಾಲಿಗೆ ಎಲ್ಲ ಒಕ್ಕೂಟಗಳು 1.95 ರೂ. ಕಮಿಷನ್ ನೀಡಿದರೆ (ಬೆಳಗಾವಿ ಮಾತ್ರ 2 ರೂ.) ಶಿಮುಲ್ 1ಲೀಟರ್ ಹಾಲಿಗೆ 2.20 ಪೈಸೆ, ಮೊಸರಿಗೆ 3.15 ಪೈಸೆ ಕಮಿಷನ್ ನೀಡುತ್ತಿದೆ.ಖಾಸಗಿ ಹಾಲು ಕಂಪನಿಗಳ ಅಬ್ಬರವನ್ನು ತಡೆಯುವ ಸಲುವಾಗಿಯೆ ಏಜೆನ್ಸಿಗಳಿಗೆ ಅಧಿಕ ಕಮಿಷನ್ ನೀಡಲಾಗುತ್ತಿದೆ. ಇದರಿಂದ ಡೀಲರ್ಸ್ ಗಳು ನಂದಿನಿ ಹಾಲನ್ನು ಹೆಚ್ಚು ಮಾರಾಟ ಮಾಡುತ್ತಿದ್ದಾರೆ.
ಹೊರ ರಾಜ್ಯದಲ್ಲಿ ಭಾರಿ ಬೇಡಿಕೆ
ಶಿವಮೊಗ್ಗ ಹಾಲು ಒಕ್ಕೂಟವು ಪ್ರತಿದಿನ 6.30 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದ್ದು ಇದರಲ್ಲಿ 3.30 ಲಕ್ಷ ಲೀಟರ್ ಹಾಲು, ಮೊಸರು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಧಾರವಾಡ, ಕಲಬುರಗಿ, ವಿಜಯಪುರ, ದಕ್ಷಿಣ ಕನ್ನಡ ಹಾಲು ಒಕ್ಕೂಟಗಳು ಮತ್ತು ಮದರ್ ಡೈರಿಗೆ ನಿತ್ಯ 1.30 ಲಕ್ಷ ಲೀಟರ್ ಹಾಲು ರವಾನಿಸುತ್ತಿದೆ. ಉಳಿದ 1.70 ಲಕ್ಷ ಲೀಟರ್ ಹಾಲನ್ನು ಪೌಡರ್ ಪರಿವರ್ತನೆಗೆ ಬಳಸುತ್ತಿದೆ.ಬೇರೆಲ್ಲಾ ಒಕ್ಕೂಟಗಳಿಗಿಂತಲೂ ಅಧಿಕ ಧಾರಣೆ, ಕಮಿಷನ್ ಮತ್ತು ಶೇಖರಣ ದರ ನೀಡಿದ ಬಳಿಕವೂ ಶಿಮುಲ್ ನಿರಂತರವಾಗಿ ಲಾಭದಲ್ಲೇ ಮುನ್ನಡೆಯುತ್ತಿದೆ. ಆದರೆ, ಈ ಬಾರಿ ಬರ, ಮೇವಿನ ದರ ಹೆಚ್ಚಳ ಜಾನುವಾರುಗಳಿಗೆ ತಗುಲಿದ ಚರ್ಮಗಂಟು ಕಾಯಿಲೆ ಬಳಿಕ ಹಾಲಿನ ಉತ್ಪಾದನೆ ತೀವ್ರ ಕುಸಿತವಾಗಿತ್ತು.
ಇದೇ ಸಮಯದಲ್ಲಿ ಲಾಭದಲ್ಲಿ ಮುನ್ನಡೆಯುತ್ತಿದ್ದ ಒಕ್ಕೂಟವು ತನ್ನ ಪೂರ್ಣ ಪ್ರಮಾಣದ ಲಾಭಾಂಶವನ್ನು ರೈತರಿಗೆ ಮರಳಿಸುವ ಸಲುವಾಗಿ ಜನವರಿಯಲ್ಲಿ ಲೀಟರ್ಗೆ 2 ರೂ. ಹೆಚ್ಚಳ ಮಾಡಿತ್ತು. ಆದರೆ, ಇದರ ಹೊರೆಯನ್ನು ಗ್ರಾಹಕರ ಮೇಲೆ ಹಾಕದೆ ತಾನೇ ಹೊತ್ತುಕೊಂಡಿತ್ತು.
ಬೇರೆ ರಾಜ್ಯದಲ್ಲಿಯೂ ಬೇಡಿಕೆ
ಶಿಮುಲ್ ಹಿಂದಿನಿಂದಲೂ ಗುಣಮಟ್ಟವನ್ನು ಕಾಯ್ದುಕೊಂಡು ಬಂದಿರುವುದರಿಂದ ಕೇರಳ, ಹೊಸದಿಲ್ಲಿ, ಮಧ್ಯ ಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರಿ ಬೇಡಿಕೆ ಇದೆ. ಹೊರ ರಾಜ್ಯಗಳಲ್ಲಿ ಹಾಲಿನ ದರ 8 ರಿಂದ 16 ರೂ.ನಷ್ಟು ಅಧಿಕವಾಗಿದೆ. ಹೊರ ರಾಜ್ಯಗಳಿಗೆ ಹಾಲನ್ನು ಪೂರೈಕೆ ಮಾಡುವ ಮೂಲಕ ತಾತ್ಕಾಲಿಕ ನಷ್ಟವನ್ನು ತುಂಬಿಕೊಳ್ಳಲು ಶಿಮುಲ್ ನಿರ್ಧರಿಸಿದೆ.
ರೈತರು, ಸಂಘಗಳು ಮತ್ತು ಏಜೆನ್ಸಿಗಳಿಗೆ ಅಧಿಕ ದರ ನೀಡುತ್ತಿರುವುದರಿಂದ ಶಿಮುಲ್ ತಾತ್ಕಾಲಿಕ ನಷ್ಟದಲ್ಲಿದೆ. ಶಿಮುಲ್ ಹಾಲಿಗೆ ಹೊರ ರಾಜ್ಯಗಳಲ್ಲಿ ಭಾರಿ ಬೇಡಿಕೆ ಇದೆ. ನಮ್ಮಲ್ಲಿನ ಹೆಚ್ಚುವರಿ ಹಾಲನ್ನು ಕಳುಹಿಸಿದರೆ ಒಕ್ಕೂಟಕ್ಕೆ ದೊಡ್ಡ ಲಾಭವಾಗಲಿದೆ. ಅದಕ್ಕಾಗಿ ಕೆಎಂಎಫ್ನಿಂದ ಅನುಮತಿ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಹೊಸ ಆಡಳಿತ ಮಂಡಳಿ ಬಂದ ನಂತರ ಈ ಪ್ರಕ್ರಿಯೆ ಮುಂದುವರಿಯಲಿದೆ. ಒಟ್ಟಾರೆ ರೈತರು, ಡೀಲರ್ಸ್ , ನೌಕರರು ಶ್ರಮ ಪಟ್ಟು ಗುಣಮಟ್ಟದ ಹಾಲು ನೀಡುತ್ತಿರುವುದರಿಂದ ಸೇಲ್ ಅಧಿಕವಾಗಿದೆ. ಮುಂದಿನ ದಿನಗಳಲ್ಲಿ ಇದರಿಂದ ರೈತರಿಗೆ ಸಾಕಷ್ಟು ಉಪಯೋಗವಾಗಲಿದೆ.
…..
ಶಿಮುಲ್ ಒಕ್ಕೂಟದಿಂದ ಹಾಲು ಹೆಚ್ಚು ಸೇಲ್ ಆದರೆ ರೈತರಿಗೆ ಉಪಯೋಗವಾಗುತ್ತದೆ. ನಂದಿನಿ ಹಾಲಿನ ಗುಣಮಟ್ಟವೇ ಹೆಚ್ಚು ಸೇಲ್ ಆಗಲು ಕಾರಣ. ಹೊಸ ಆಡಳಿತ ಮಂಡಳಿ ಬಂದ ಮೇಲೆ ರೈತರಿಗೆ ನೀಡುವ ದರ ಹೆಚ್ಚಿಸಲು ನಿರ್ಧಾರ ಮಾಡುತ್ತೇವೆ.
-ಬಸಪ್ಪ, ಶಿಮುಲ್ ಉಪಾಧ್ಯಕ್ಷ
…ಪ್ರತಿ ದಿನ ಮೊದಲು ಆರು ಕ್ರೇಟ್ ಹಾಲು ಸೇಲ್ ಮಾಡುತ್ತಿದ್ದೇ. ಈಗ ಎಂಟರಿಂದ 13 ಕ್ರೇಟ್ ಹಾಲು ಸೇಲ್ ಮಾಡುತ್ತೇವೆ. ನಂದಿನಿ ಗುಣ ಮಟ್ಟ ಚೆನ್ನಾಗಿ ಇರುವ ಕಾರಣ ಜನರು ಇದೇ ಹಾಲು ಕೇಳುತ್ತಾರೆ. ಅಷ್ಟು ಹಾಲು ಸೇಲ್ ಮಾಡಿದರೂ, ಬೇಡಿಕೆ ಹೆಚ್ಚಿದೆ. ಸಮಸ್ಯೆ ಆಲಿಸುವ ರೂಟ್ ಸೂಪರ್ ವೈಸರ್ , ಹಾಗೂ ಕಾಲಕಾಲಕ್ಕೆ ನಡೆಯುವ ಕಾರ್ಯಾಗಾರ ನಮಗೆ ಹೆಚ್ಚು ಉಪಯೋಗವಿದೆ. ಶಿಮುಲ್ ನಮ್ಮ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ.
– ಎ.ಎಚ್.ಚಂದ್ರಶೇಖರಪ್ಪ, ಥರ್ಡ್ ರೂಟ್, ಜನ್ನಾಪುರ, ಭದ್ರಾವತಿ