
ದಾವಣಗೆರೆ :
ಹಾಗೋ ಹೀಗೋ ಮನೆಯಲ್ಲಿ ಮಹಿಳೆಯರು ಗಂಡ ಕೊಟ್ಟ ಹಣವನ್ನು ಕೂಡಿಸಿ ಅದನ್ನು ಹೆಚ್ಚಿನ ಬಡ್ಡಿ ಹಣಕ್ಕೆ ಕೊಡುತ್ತಿದ್ದರು. ಆದರೆ ಇದರಿಂದ ಅವರು ಕೈ ಸುಟ್ಟು ಕೊಂಡಿದ್ದೇ ಹೆಚ್ಚು. ಈ ಕಾರಣದಿಂದ ಮಹಿಳೆಯರಿಗಾಗಿಯೇ ಕೇಂದ್ರ ಸರಕಾರ ಉಳಿತಾಯ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಅದು ಇದೇ ಮಾ.31 ಕ್ಕೆ ಕೊನೆಗೊಳ್ಳಲಿದೆ.
ಹೌದು… ಕೇಂದ್ರದ ‘ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ’ಯೋಜನೆಗೆ ದಾವಣಗೆರೆ ಜಿಲ್ಲೆಯಲ್ಲಿ ವ್ಯಾಪಕ ಸ್ಪಂದನೆ ದೊರಕುತ್ತಿದೆ. ಈ ಯೋಜನೆ ಲಾಭ ಪಡೆದುಕೊಳ್ಳಲು ಮಹಿಳೆಯರು ತಂಡೋಪತಂಡವಾಗಿ ಅಂಚೆ ಇಲಾಖೆಗೆ ಭೇಟಿ ನೀಡಿ ಈ ಯೋಜನೆ ಲಾಭ ಪಡೆದುಕೊಳ್ಳಲು ಮುಂದಾಗಿದ್ದಾರೆ. ಆದರೀಗ ಈ ಯೋಜನೆಗೆ ಕೆಲವೇ ದಿನಗಳಲ್ಲಿ ಎಳ್ಳು ನೀರು ಬೀಳಲಿರುವುದು ದುರದೃಷ್ಟಕರ


ಹಣ ಉಳಿತಾಯ ಮಾಡುವ ಮಹಿಳೆಯರಿಗಾಗಿ ಅಂಚೆ ಇಲಾಖೆ ‘ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ’ಗೆ ಚಾಲನೆ ನೀಡಿತ್ತು. ತದ ನಂತರದ ದಿನಗಳಲ್ಲಿ ಮಹಿಳೆಯರು ಖಾತೆ ತೆರೆಯಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದರು..ಆದರೆ ಮಹಿಳಾ ಸಮ್ಮಾನ್ ಗೆ ಈ ತಿಂಗಳೇ ಲಾಸ್ಟ್ ಆಗಿದ್ದು, ಮಹಿಳೆಯರು ಒಂದಿಷ್ಟು ಬೇಸರಗೊಂಡಿದ್ದಾರೆ. ಇನ್ನು ಚಿಕ್ಕಮಕ್ಕಳಿಂದ ಹಿಡಿದು ಎಲ್ಲ ವಯೋಮಾನದ ಹೆಣ್ಣುಮಕ್ಕಳಿಗಾಗಿ’ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ’ಯನ್ನು ರೂಪಿಸಲಾಗಿದ್ದು, ಜಿಲ್ಲೆಯಲ್ಲಿ ನಿತ್ಯ 15 ರಿಂದ 20 ಖಾತೆಯನ್ನು ಮಹಿಳೆಯರು ತೆರೆಯುತ್ತಿದ್ದರು. ಆದರೆ ಈ ಯೋಜನೆ ರದ್ದಾದರೆ ಮಹಿಳೆಯರಿಗೆ ಒಂದಿಷ್ಟು ತೊಂದರೆಯಾಗಲಿದೆ
ಏನಿದು ಯೋಜನೆ?
ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶ ಹೊಂದಿರುವ ಈ ‘ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಗೆ ವಯಸ್ಸಿನ ನಿರ್ಬಂಧ ಇಲ್ಲದಿರುವುದು ವಿಶೇಷ. ಈ ಯೋಜನೆಯಡಿಯಲ್ಲಿ ಎರಡು ವರ್ಷದ ಅವಧಿಗೆ ಮಹಿಳೆಯರು ಠೇವಣಿ ಇಡುವುದಕ್ಕೆ ಅವಕಾಶವಿದ್ದು, ಕನಿಷ್ಠ ರೂ. 1 ಸಾವಿರದಿಂದ 2 ಲಕ್ಷ ರೂ.ಗಳವರೆಗೆ ಠೇವಣಿ ಇಟ್ಟರೆ ಶೇ. 7.5ರ ಆಕರ್ಷಕ ಬಡ್ಡಿಯೊಂದಿಗೆ 2 ವರ್ಷದ ನಂತರ ಹಣವನ್ನು ಹಿಂದಿರುಗಿಸುವ ಯೋಜನೆ ಇದಾಗಿತ್ತು.
ಈ ಯೋಜನೆಯಿಂದ ಏನು ಉಪಯೋಗ
ಪ್ರತಿಯೊಂದು ಮಹಿಳಾ ಸಮ್ಮಾನ್ ಖಾತೆಯಿಂದ ಅದರ ಮೆಚ್ಯೂರಿಟಿ ಅವಧಿಯೊಳಗೆ (2 ವರ್ಷ) ಹಣ ತೆಗೆಯಲು ಸಾಧ್ಯವಿಲ್ಲ. ಆದರೆ, ಖಾತೆ ತೆರೆದ ಮಹಿಳೆ ಅಥವಾ ಬಾಲಕಿ ಸಾವನ್ನಪ್ಪಿದಾಗ, ಬಾಲಕಿಯರ ಪರವಾಗಿ ಖಾತೆಯನ್ನು ನಿರ್ವಹಿಸುತ್ತಿದ್ದ ವಾರಸುದಾರರು ಅಸುನೀಗಿದಾಗ, ಖಾತೆಯನ್ನು ಹೊಂದಿರುವ ಮಹಿಳೆ ಅಥವಾ ಬಾಲಕಿಗೆ ಗಂಭೀರವಾದ ಕಾಯಿಲೆಯಿದ್ದು ಅವರ ಚಿಕಿತ್ಸೆಗಾಗಿ ಖಾತೆಯಲ್ಲಿರುವ ಹಣದ ನೆರವು ಬೇಕು ಎಂದಾಗ ಸೂಕ್ತ ದಾಖಲೆಗಳನ್ನು ನೀಡಿ ಈ ಖಾತೆಯ ಹಣವನ್ನು ಪಡೆಯಬಹುದಿತ್ತು.
ಗರಿಷ್ಠ ಬಡ್ಡಿ
ಮಹಿಳಾ ಸಮ್ಮಾನ್ ಯೋಜನೆಗೆ ಅಂಚೆ ಇಲಾಖೆ ಗರಿಷ್ಠ ಬಡ್ಡಿ ನೀಡುತ್ತಿದೆ. ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಅಥವಾ ಸರಕಾರದ ಸಂಸ್ಥೆಗಳಲ್ಲಿ ಶೇ. 7.5ರಷ್ಟು ಬಡ್ಡಿ ದರ ನೀಡುತ್ತಿರುವ ಉದಾಹರಣೆ ಇಲ್ಲ. ಖಾಸಗಿ ಬ್ಯಾಂಕ್ಗಳಲ್ಲಿ ಹೆಚ್ಚು ಬಡ್ಡಿದರ ಸಿಗಬಹುದು. ಆದರೆ, ಹಣಕ್ಕೆ ಮೋಸ ಆಗದಂತೆ ಭದ್ರತೆ ವಿಷಯವನ್ನೂ ಗಮನಿಸಬೇಕಾಗುತ್ತದೆ. ಅಂಚೆ ಇಲಾಖೆಯಲ್ಲಿ ಭದ್ರತೆಗೆ ಮೊದಲ ಆದ್ಯತೆ. ಆದ್ದರಿಂದ ಈ ಯೋಜನೆಯಡಿ ಖಾತೆ ತೆರೆಯಲು ಮಹಿಳೆಯರು ಮುಂದೆ ಬರುತ್ತಿದ್ದರು. ಒಟ್ಟಾರೆ ಈ ಯೋಜನೆಯಿಂದ ಒಂದಿಷ್ಟು ಆರ್ಥಿಕ ಸಭಲರಾಗುತ್ತಿದ್ದು, ಕೇಂದ್ರ ಈ ಯೋಜನೆ ಮುಂದುವರೆಸಬೇಕೆಂದು ಒತ್ತಾಯಿಸಿದ್ದಾರೆ.
….