ದಾವಣಗೆರೆ: ದಾವಣಗೆರೆಯಲ್ಲಿ ನಡೆದ 31 ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ನಗರದ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳು ರಾಜ್ಯ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಭಾರತ ಮತ್ತು ಕರ್ನಾಟಕ ಸರ್ಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪ್ರಾದೇಶಿಕ ಉಪ ವಿಜ್ಞಾನ ಕೇಂದ್ರ, ದಾವಣಗೆರೆ ವತಿಯಿಂದ ಆಯೋಜಿಸಿದ್ದ 31ನೇ ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ-2023 ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಬಿ.ಎನ್.ಭಾವನಾ (9 ನೇ ತರಗತಿ) ಮತ್ತು ಎಂ.ಪ್ರತೀಕ್ಷಾ (8 ನೇ ತರಗತಿ) ಇವರು ‘ಸ್ವಾವಲಂಭನೆಗಾಗಿ ಪರಿಸರ ವ್ಯವಸ್ಥೆ ಆಧಾರಿತ ವಿಧಾನಗಳು’ ಎಂಬ ಉಪ ವಿಷಯದ ಅಡಿಯಲ್ಲಿ ‘ಕತ್ತಾಳೆ ಪಟ್ಟಿ, ಪರಿಸರದ ಗಟ್ಟಿ’ ಎಂಬ ವಿಷಯವನ್ನು ಮಂಡನೆ ಮಾಡಿ ಗೆಲುವು ಸಾಧಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ವಿದ್ಯಾರ್ಥಿನಿಯರಿಗೆ ಶಾಲಾ ವಿಜ್ಞಾನ ಶಿಕ್ಷಕಿ ಸವಿತಾ ಎನ್. ಸ್ವಾಮಿ ಮಾರ್ಗದರ್ಶನ ನೀಡಿದ್ದರು.
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಈಶ್ವರಮ್ಮ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ.ಆರ್. ಸುಜಾತ ಕೃಷ್ಣ, ಕಾರ್ಯದರ್ಶಿಗಳಾದ ಎ.ಆರ್. ಉಷಾರಂಗನಾಥ, ಖಜಾಂಚಿಗಳಾದ ಸುಜಾತ ಎ.ಪಿ. ಮತ್ತು ಈಶ್ವರಮ್ಮ ಟ್ರಸ್ಟ್ ಕಾರ್ಯದರ್ಶಿಗಳಾದ ಜಿ.ಆರ್. ವಿಜಯಾನಂದ್ ಹಾಗೂ ಶಾಲಾ ಪ್ರಾಂಶುಪಾಲರಾದ ಕೆ.ಎಸ್. ಪ್ರಭುಕುಮಾರ್, ಉಪಪ್ರಾಂಶುಪಾಲರಾದ ಶಶಿರೇಖಾ ಜಿ.ಎಸ್. ಮತ್ತು ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.