![](https://davangerevijaya.com/wp-content/uploads/2025/01/IMG-20250116-WA0145.jpg)
ಶಿವಮೊಗ್ಗ:
ಪ್ರತಿ ವರ್ಷ ಲಕ್ಷಾಂತರ ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದು, ಸಾರ್ವಜನಿಕರು ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ವಹಿಸಬೇಕು ಎಂದು ವಲಯ 11ರ ಸಹಾಯಕ ಗವರ್ನರ್ ಎಚ್.ಎಂ.ಸುರೇಶ್ ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಅಮೃತ್ ನೋನಿ ಅವರ ಸಹಕಾರದಿಂದ ನಗರದ ಗಾಜನೂರು ರಸ್ತೆಯಲ್ಲಿ ಮತ್ತು ವಿವಿಧೆಡೆ ರಸ್ತೆ ಸುರಕ್ಷತೆ ಜಾಗೃತಿ ಫಲಕಗಳನ್ನು ಅಳವಡಿಸಿದ ನಂತರ ಮಾತನಾಡಿ, ಕರ್ನಾಟಕದಲ್ಲಿಯೂ ರಸ್ತೆ ಅಪಘಾತ ಹೆಚ್ಚಿದ್ದು, ಪ್ರತಿಯೊಬ್ಬರೂ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿದಾಗ ಅಪಘಾತಗಳು ಕಡಿಮೆಯಾಗುತ್ತವೆ. ನಮ್ಮ ಸುರಕ್ಷತೆಯೇ ಮೊದಲ ಆದ್ಯತೆಯಾಗಬೇಕು ಎಂದು ತಿಳಿಸಿದರು.
![](https://davangerevijaya.com/wp-content/uploads/2025/01/IMG-20241225-WA0105.jpg)
![](https://davangerevijaya.com/wp-content/uploads/2025/01/IMG-20250116-WA0230.jpg)
ಇದೇ ಸಂದರ್ಭದಲ್ಲಿ ಜಿಲ್ಲಾ ಗವರ್ನರ್ ದೇವ್ ಆನಂದ್ ಮಾತನಾಡಿ, ಒಂದು ಕ್ಷಣದ ಅವಸರದಿಂದ ಅಥವಾ ತಪ್ಪು ಚಾಲನೆಯಿಂದ ಅಪಘಾತಗಳು ಸಂಭವಿಸಿ ಇಡೀ ಕುಟುಂಬ ಕಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಚಾರ ನಿಯಮಗಳನ್ನು ಪೋಷಕರು ಪಾಲಿಸುವ ಜತೆ ಮಕ್ಕಳಲ್ಲಿ ಜಾಗೃತಿ ಬೆಳೆಸಬೇಕು. ವಾಹನ ಚಾಲನಾ ಪರವಾನಗಿ ಪಡೆದ ನಂತರವೇ ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ಮಾಡಿಕೊಡಬೇಕು. ನಿಯಮಗಳ ಪಾಲನೆ ಮತ್ತು ಮಹತ್ವದ ಬಗ್ಗೆ ತಿಳಿಸಬೇಕು. ಬದಲಾವಣೆ ನಮ್ಮಿಂದಲೇ ಪ್ರಾರಂಭವಾಗಬೇಕು ಎಂದು ತಿಳಿಸಿದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ವಸಂತ ಹೋಬಳಿದಾರ್, ರೇಖಾ ದೇವ್ ಆನಂದ್, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ಡಾ. ಧನಂಜಯ, ನಿಯೋಜಿತ ಅಧ್ಯಕ್ಷ ಕಿಶೋರ್ಕುಮಾರ್, ಗೀತಾ ಚಿಕಮಠ್, ರೋಟರಿ ಸಂಸ್ಥೆ ಸದಸ್ಯರು ಉಪಸ್ಥಿತರಿದ್ದರು.
![](https://davangerevijaya.com/wp-content/uploads/2025/01/IMG-20250116-WA01462.jpg)